»   » ಲಂಕೇಶ್ ಕಥೆಯಾಧಾರಿತ ಅವ್ವಚಿತ್ರೀಕರಣ ಪ್ರಾರಂಭ

ಲಂಕೇಶ್ ಕಥೆಯಾಧಾರಿತ ಅವ್ವಚಿತ್ರೀಕರಣ ಪ್ರಾರಂಭ

Subscribe to Filmibeat Kannada


ಕಮರ್ಶಿಯಲ್ ಚಿತ್ರಕ್ಕೆ ಹೇಳಿ ಮಾಡಿಸಿದಂಥ ದೇಹದಾರ್ಢ್ಯ ಮತ್ತು ನಟನೆಯನ್ನು ರೂಢಿಸಿಕೊಂಡಿರುವ, ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ವಿಜಯ್, ಈ ಕಲಾತ್ಮಕ ಚಿತ್ರದಲ್ಲಿ ಇಮೇಜನ್ನು ಬದಿಗಿಟ್ಟು ನಟಿಸಲು ಒಪ್ಪಿದ್ದು ಅನೇಕರ ಕಣ್ಣರಳಿಸುವಂತೆ ಮಾಡಿದೆ. ವಿಜಯ್‌ಗೆ ಕನಸು ನನಸಾಗಿದ್ದರೆ, ಕವಿತಾಗೆ ನೆನೆಸಿದ್ದನ್ನು ಕನಸಾಗಿಸುವ ಸುಯೋಗ.ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ವಿಜೇತರನ್ನು ಹಾಕಿಕೊಂಡು, ಕಾರ್ಪೋರೇಟ್ ಕಂಪನಿಯ ವೃತ್ತಿಪರತೆಯೊಂದಿಗೆ, ಅಪ್ಪ ಪಿ.ಲಂಕೇಶ್ ಬರೆದ ಕಥೆಯಾಧಾರಿತ ಅವ್ವಎನ್ನುವ ಚಿತ್ರವನ್ನು ಕವಿತಾ ಲಂಕೇಶ್ ಶುರುಮಾಡುತ್ತಿದ್ದಾರೆ.

ಗ್ರಾಮೀಣ ಹಿನ್ನೆಲೆಯ ಕಥೆಗೆ ಕಳಸವಿಟ್ಟಂತಿರುವ ಶಿವಮೊಗ್ಗ ಶೈಲಿಯ ಸಂಭಾಷಣೆ ಚಿತ್ರಕ್ಕಿದೆ. ಶ್ರೀರಂಗಪಟ್ಟಣದ ಬಳಿಯಿರುವ ಗ್ರಾಮದಲ್ಲಿ ಚಿತ್ರೀಕರಣ ಆಗಸ್ಟ್ 13ರಿಂದ ಪ್ರಾರಂಭವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕವಿತಾ, ಚಿತ್ರತಂಡದ ಪರಿಚಯ ಮಾಡಿಕೊಟ್ಟರು.

ಕಮರ್ಶಿಯಲ್ ಚಿತ್ರಕ್ಕೆ ಹೇಳಿ ಮಾಡಿಸಿದಂಥ ದೇಹದಾರ್ಢ್ಯ ಮತ್ತು ನಟನೆಯನ್ನು ರೂಢಿಸಿಕೊಂಡಿರುವ, ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ವಿಜಯ್, ಈ ಕಲಾತ್ಮಕ ಚಿತ್ರದಲ್ಲಿ ಇಮೇಜನ್ನು ಬದಿಗಿಟ್ಟು ನಟಿಸಲು ಒಪ್ಪಿದ್ದು ಅನೇಕರ ಕಣ್ಣರಳಿಸುವಂತೆ ಮಾಡಿದೆ. ವಿಜಯ್‌ಗೆ ಕನಸು ನನಸಾಗಿದ್ದರೆ, ಕವಿತಾಗೆ ನೆನೆಸಿದ್ದನ್ನು ಕನಸಾಗಿಸುವ ಸುಯೋಗ.

ಒಂದಾನೊಂದು ಕಾಲದಲ್ಲಿ ಜಿಮ್‌ನಲ್ಲಿ ಕವಿತಾ ಮತ್ತು ಗೌರಿ ಲಂಕೇಶ್‌ಗೆ ತರಬೇತಿ ನೀಡಿದ್ದ ವಿಜಯ್, ಕವಿತಾ ಅವರ ಚಿತ್ರದಲ್ಲಿ ನಟಿಸಬೇಕೆಂದು ಕನಸು ಕಂಡಿದ್ದರು, ಒಂದು ಅವಕಾಶ ಕೊಡಬೇಕೆಂದು ಅಲವತ್ತುಕೊಂಡಿದ್ದರು. ಈಗ ಆ ಕನಸು ನನಸಾಗುತ್ತಿದೆ.

ಚಿತ್ರಕಥೆ ಬರೆಯುವಾಗ ಪ್ರಮುಖ ಪಾತ್ರಕ್ಕೆ ಕಂಡದ್ದು ವಿಜಯ್ ಮುಖ. ಆತ ಆ ಪಾತ್ರಕ್ಕೆ ಅತ್ಯಂತ ಸೂಕ್ತ ವ್ಯಕ್ತಿ. ಅತ್ಯುತ್ತಮ ನಟ ಪ್ರಶಸ್ತಿಯ ಹೊರೆ ಹೊತ್ತಿದ್ದರೂ ಕಲಾತ್ಮಕ ಚಿತ್ರದಲ್ಲಿ ನಟಿಸಲು ಒಪ್ಪಿದ್ದು ಸಂತೋಷವಾಗಿದೆ ಎಂದು ಕವಿತಾ ಸಂತಸ ವ್ಯಕ್ತಪಡಿಸಿದರು.

ಅಪ್ಪ ಬರೆದ ಮುಸ್ಸಂಜೆ ಕಥಾ ಪ್ರಸಂಗಸಾಹಿತಿಗಳಿಗೆ ಮಾತ್ರ ಪರಿಚಯವಿರುವ ಸಾಧ್ಯತೆಯಿರುವುದರಿಂದ, ಚಿತ್ರಕ್ಕೆ ಅವ್ವಎಂದು ಎಲ್ಲರೊಡನೆ ಚರ್ಚಿಸಿ ಹೆಸರಿಟ್ಟೆ. ಅವ್ವ ಹೆಸರಿಗೆ ಸಿನೆಮಾದಲ್ಲಿ ಜಾಸ್ತಿ ರೀಚ್ ಇದೆ. ಅದಲ್ಲದೆ ಕಾರ್ಪೋರೇಟ್ ಸಂಸ್ಕೃತಿಯ ಪಿರಾಮಿಡ್ ಸಾಯಿಮೀರಾ ಪ್ರೊಡಕ್ಷನ್ಸ್ ಸಂಸ್ಥೆ ಅತ್ಯಂತ ಶಿಸ್ತಿನಿಂದ ಚಿತ್ರ ನಿರ್ಮಾಣ ಮಾಡುತ್ತಿದೆ. ವಿಜಯ್ ಅಲ್ಲದೆ ಅವ್ವ ರಂಗವ್ವ ಪಾತ್ರಕ್ಕೆ ಶ್ರುತಿ ಮತ್ತು ಮಗಳು ಸಾವಿತ್ರಿ ಪಾತ್ರಕ್ಕೆ ನವನಟಿ ಸ್ಮಿತಾ ಆಯ್ಕೆ ಕೂಡ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

ಮಗಳ ಪಾತ್ರಕ್ಕೆ ಅತ್ಯಂತ ಮುಗ್ಧ ಭಾವದ ಧೈರ್ಯವಂತ ನಟಿಯನ್ನೇ ಹುಡುಕುತ್ತಿದ್ದೆ. ಹೇಳಿದ್ದಕ್ಕಿಂತ ಹೆಚ್ಚು ಮಾಡಬೇಕೆನ್ನುವ ಹುಮ್ಮಸ್ಸಿರುವ ಸ್ಮಿತಾಳಂಥ ಯುವನಟಿಯರೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತದೆ ಎಂದು ಅವರು ನುಡಿದರು.

ಲಂಕೇಶ್ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟಗೊಳ್ಳುವ ಬಯಲುಸೀಮೆ ಕಟ್ಟೆ ಪುರಾಣಅಂಕಣ ಖ್ಯಾತಿಯ ಚಂದ್ರೇಗೌಡ ಅವರು, ಶಿವಮೊಗ್ಗ ಶೈಲಿ ಕನ್ನಡದಲ್ಲಿ ಹಾಸ್ಯಮಿಶ್ರಿತ ಅರ್ಥಪೂರ್ಣ ಸಂಭಾಷಣೆಗಳನ್ನು ಬರೆದಿದ್ದಾರೆ. ಗ್ರಾಮೀಣ ಹಿನ್ನೆಲೆಯ ಕಥೆಗೆ ಭಾವನಾತ್ಮಕ ರೂಪ ಕೊಟ್ಟಿದ್ದು ಚಂದ್ರೇಗೌಡ ಎಂದು ಕವಿತಾ ಹೇಳಿದರು.

ರಘುವನ್ನು ಗುರು ಎಂದ ವಿಜಯ್ :

ಎರಡು ಹೊತ್ತು ತಿನ್ನಲು ಕಷ್ಟವಿದ್ದಂಥ ಸಮಯದಲ್ಲಿ ನಾನು ನೀಡಿದ ತರಬೇತಿಯಿಂದ ಸಂತುಷ್ಟರಾಗಿದ್ದ ಕವಿತಾ, ಅಂದು ಐನೂರು ರುಪಾಯಿ ಹೆಚ್ಚಿಗೆ ಕೊಟ್ಟು ಬೆನ್ನುತಟ್ಟಿದ್ದರು. ಈಗ ಕೆಲಸವನ್ನೇ ಕೊಡುತ್ತಿದ್ದಾರೆ. ಅತ್ಯಂತ ಶ್ರದ್ಧೆಯಿಂದ ಪಾತ್ರ ನಿರ್ವಹಿಸುತ್ತೇನೆ. ಅದಲ್ಲದೆ ದುನಿಯಾ ಚಿತ್ರದಲ್ಲಿ ಜೊತೆ ನಟಿಸಿದ ರಂಗಾಯಣ ರಘು ನನ್ನ ಗುರುವಿದ್ದಂತೆ. ಅವರಿಂದಲೂ ಸಾಕಷ್ಟು ನಟನೆಗೆ ಸಹಾಯಪಡೆದಿದ್ದೇನೆ. ಈ ಚಿತ್ರದಲ್ಲಿಯೂ ಅವರಿರುವುದು ನನ್ನ ನಟನೆಗೆ ಅನುಕೂಲವಾಗಲಿದೆ ಎಂದು ವಿಜಯ್ ವಿನಮ್ರವಾಗಿ ಹೇಳಿದರು.

ಶ್ರುತಿಗೆ ಅವ್ವನ ಪಾತ್ರಕ್ಕೆ ಅಂಟಿಕೊಳ್ಳುವ ಭಯ :

ಅವ್ವ ಪಾತ್ರದಲ್ಲಿ ಅಭಿನಯಿಸುತ್ತಿರುವ ಶ್ರುತಿಗೆ, ವೃತ್ತಿಜೀವನದಲ್ಲಿ ಹೊಸ ತರಹದ ಚಿತ್ರದಲ್ಲಿ ನಟಿಸುತ್ತಿರುವುದರ ಸಂತಸ. ಕವಿತಾ ಅವರ ದೇವೀರಿ ಚಿತ್ರ ನೋಡಿದಾಗ ಅವರ ಚಿತ್ರದಲ್ಲಿ ನಟಿಸಬೇಕೆಂಬ ಕನಸಿತ್ತು. ಆರಂಭದಲ್ಲಿ ಮುದ್ದಾದ ಪಾತ್ರಗಳಿಗೇ ನನ್ನನ್ನು ನಿರ್ದೇಶಕರು ಸೀಮಿತಗೊಳಿಸಿದ್ದರು. ನಂತರ ಅಕ್ಕನ ಪಾತ್ರಗಳಿಗೇ ನಾನು ಸೀಮಿತವಾಗಿದ್ದೆ. ಈಗ ಅವ್ವನ ಪಾತ್ರ ಮಾಡುತ್ತಿರುವುದರಿಂದ ಇಂಥ ಪಾತ್ರಗಳಿಗೇ ಅಂಟಿಕೊಳ್ಳುವೆನೋ ಎಂಬ ಭಯ ಕಾಡುತ್ತದೆ. ಆದರೆ ಸ್ಟಾರ್‌ಗಿಂತ ಕಲಾವಿದೆಯಾಗಿ ಬೆಳೆಯಬೇಕು ಎಂಬ ಅರಿವಿದೆ. ರಘು, ವಿಜಯ್, ಸ್ಮಿತಾ ಅಂಥ ಹೊಸಬರು ಇನ್‌ಸ್ಪೈರ್ ಮಾಡುತ್ತಾರೆ ಅಂತ ಹರ್ಷ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ರಘು ನಾವೆಲ್ಲ ಮೇಷ್ಟ್ರ ಕಥೆಗಳನ್ನು ಓದಿಕೊಂಡೇ ಬೆಳೆದವರು. ಕಣ್ಣಿಗೆ ಕಾಣುತ್ತಿರುವುದಕ್ಕಿಂತ ಅತ್ಯಂತ ಸೂಕ್ಷ್ಮವಾದ ಸಂಗತಿಗಳನ್ನು ಪರಿಚಯಿಸುವುದು ಲಂಕೇಶ್ ಅವರ ಗುಣ. ಬಲಿಷ್ಠ ಗಂಡು ಸಮಾಜದಲ್ಲಿ,ನಪುಂಸಕ ವ್ಯಕ್ತಿತ್ವದ ಮಿಷಿನ್ ಬರ್ಮಣ್ಣ ಪಾತ್ರ ಅಭಿನಯಿಸುತ್ತಿದ್ದೇನೆ. ಶ್ರುತಿ ಅವರಂಥ ಪ್ರತಿಭಾನ್ವಿತ ನಟಿಯೊಂದಿಗೆ ಅಭಿನಯಿಸಲು ಸಂತಸವೆನಿಸುತ್ತದೆ ಎಂದರು.

ಕನ್ನಡದಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಬೇಕೆಂಬ ಆಶಯದಿಂದ ಚಿತ್ರನಿರ್ಮಾಣಕ್ಕಿಳಿದಿರುವ ಪಿರಾಮಿಡ್ ಸಂಸ್ಥೆಯ ಸ್ವಾಮಿನಾಥನ್ ಅವರು ಕಾದಂಬರಿ ಆಧಾರಿತ ಚಿತ್ರಗಳನ್ನು ತಯಾರಿಸಬೇಕೆಂಬ ಇರಾದೆಯಿದೆ ಎಂದು ಹೇಳಿದರು.

ಸಂಭಾಷಣೆ ಬರೆದಿರುವ ಚಂದ್ರೇಗೌಡ, ಚಿತ್ರಕ್ಕೆ ಹಾರೈಸಲು ಬಂದಿದ್ದ ನಿರ್ಮಾಪಕರ ಸಂಘದ ಅಧ್ಯಕ್ಷ ಗಂಗರಾಜು, ಸಾ.ರಾ. ಗೋವಿಂದು, ಪಿರಾಮಿಡ್ ಸಂಸ್ಥೆಯ ಸಿಇಓ ಸೋಮಶೇಖರ್ ಅವರು ಮಾತನಾಡಿದರು.

ಕಲ್ಲರಳಿ ಹೂವಾಗಿ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಸ್ಮಿತಾ ಎನ್ನುವ ಚೆಂದುಳ್ಳಿ ಚೆಲುವೆ ಈ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ಗೃಹಸಚಿವ ಎಂ.ಪಿ.ಪ್ರಕಾಶ್ ಕೂಡ ಅಭಿನಯಿಸುತ್ತಿದ್ದಾರೆ. ಮಧು ಅಂಬಟ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸುರೇಶ್ ಅರಸ್ ಅವರ ಸಂಕಲನ ಚಿತ್ರಕ್ಕಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada