»   » ಕಂಗ್ಲಿಷ್‌ ಹಾಡುಗಳ ದರಬಾರು

ಕಂಗ್ಲಿಷ್‌ ಹಾಡುಗಳ ದರಬಾರು

Posted By:
Subscribe to Filmibeat Kannada

*ದಟ್ಸ್‌ ಕನ್ನಡ ಬ್ಯೂರೊ

ಇಂಗ್ಲಿಷ್‌ ಮೀಡಿಯಂನಲ್ಲೇ ಓದಿ, ಹೇಗೋ ಕಷ್ಟ ಪಟ್ಟು ಒಂದಿಷ್ಟು ಕನ್ನಡ ಮಾತಾಡಲು ಕಲಿತವರಿಗೆ ಕಂಗ್ಲಿಷ್‌ ಒಂದು ವರದಾನ ಅಲ್ಲವೇ. ಅಂಥ ಯುವಜನರನ್ನು ಮೆಚ್ಚಿಸಲಿಕ್ಕೇ ಸಿನೆಮಾಗಳೂ ತಯಾರು. ಎಲ್ಲ ನಮೂನಿ ಭಾಷೆಯವರೂ ಇರುವ ಬೆಂಗಳೂರಿನಲ್ಲಿ ಸಿನೆಮಾಗಳು ಓಡಬೇಕಿದ್ದರೆ, ಹಾಡುಗಳು ಪ್ರಸಿದ್ಧಿ ಹೊಂದಬೇಕಿದ್ದರೆ ಕಂಗ್ಲಿಷ್‌ ಹಾಡುಗಳು ನೆರವಾಗುತ್ತವೆ ಎಂಬುದು ಸಿನೆಮಾದವರ ನಂಬಿಕೆ.

ಈ ಪರಿಪಾಠ ಶುರುವಾದದ್ದು ಯಾವಾಗಲೋ. ‘ ಇಫ್‌ ಯೂ ಕಂ ಟುಡೇ..’, ‘ ಮೇರ ಮೇರಿ ಮೇರಿ ಐ ಲವ್‌ ಯೂ’ ಅಂತ ರಾಜ್‌ಕುಮಾರ್‌ ಸಿನಿಮಾಗಳಲ್ಲಿ ಕೇಳಿಸಿದ ಹಾಡುಗಳು ಕಂಗ್ಲಿಷ್‌ ಗೀತೆಗಳ ಟ್ರೆಂಡ್‌ ಸೆಟ್‌ ಮಾಡಲಿಲ್ಲ. ಮುನಿಯನ ಮಾದರಿ ಚಿತ್ರದ ‘ ಹಾರುತಿವೆ ಲವ್‌ ಬರ್ಡ್ಸುಗಳು’ ಎಂಬ ರ್ಯಾಪ್‌ ರಾಗದ ಹಾಡೂ ಕೂಡ ಗುನುಗಿಗೆ ಗುರಿಯಾಯಿತೇ ವಿನಃ, ಅದೇ ರೀತಿಯ ಹಾಡುಗಳಿಗೆ ಮೆಟ್ಟಿಲಾಗಿರಲಿಲ್ಲ.

ಕಂಗ್ಲಿಷ್‌ ಟ್ರೆಂಡು ಫೇಮಸ್‌ ಆದದ್ದು ‘ಪ್ರೇಮಲೋಕ’ ಸಿನೆಮಾದಿಂದಲೇ. ‘ಹಲೋ ಮೈ ಲವ್ಲೀ ಲೇಡಿ ಹೂ ಆರ್‌ ಯೂ ಹೂ ಆರ್‌ ಯೂ’ ಅಂತ ಜೂಹಿ ಚಾವ್ಲಾಳನ್ನು ರೇಗಿಸುವ ಹಾಡು ಈಗಲೂ ಜನಪ್ರಿಯ. ತುಂಬಾ ಇತ್ತೀಚೆಗೆ ಬಂದ ಎ, ಧಮ್‌, ಅಭಿ, ರಕ್ತ ಕಣ್ಣೀರು, ಹಾಲಿವುಡ್‌, ಧ್ರುವ, ರಕ್ತಕಣ್ಣೀರು ಚಿತ್ರಗಳಲ್ಲಿ ಕಂಗ್ಲಿಷ್‌ ಹಾಡುಗಳದ್ದೇ ಕಾರುಬಾರು- ಸ್ವಲ್ಪ ಕನ್ನಡ , ಜಾಸ್ತಿ ಇಂಗ್ಲಿಷ್‌ ಅಂದರೆ ಕಂಗ್ಲಿಷ್‌.

‘ಅಭಿ’ ಚಿತ್ರದಲ್ಲಂತೂ ಮಜಾ ಮಾಡು ಹಾಡಿನಲ್ಲಿ ಕಾಲೇಜು ಹುಡುಗರಿಗೆ ಭಯಂಕರ ಸಂದೇಶಗಳ ಸರಮಾಲೆಯೇ ಇದೆ. ‘ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಎಂಬ ಹಾಡಿನ ಉತ್ತರಾರ್ಧ ‘ಮಜಾ ಮಾಡು’ ಅಂತಲೇ ಮುಕ್ತಾಯವಾಗುತ್ತದೆ. ‘ಮಾಮ, ಮಾಮಾ, ಸ್ಟೂಡೆಂಡ್‌ ಮಾಮಾ, ಕಾಲೇಜು ಲೈಫ್‌ನಲ್ಲಿ ನೆನಪಿನ ಪ್ಯಾಕೆಟ್ಟು, ಈ ಏಜು ಟೋಟಲಲ್ಲಿ ಉಳಿಯೋ ಪ್ರಾಫಿಟ್ಟು....’ ಈ ಹಾಡು ಹಳ್ಳಿ ಹೈದನಿಗೆ ಅರ್ಥವಾಗುವುದಿಲ್ಲ ಎಂಬ ದೂರಿದ್ದರೂ ಅರ್ಥ ಅನರ್ಥಗಳನ್ನು ಮೂಲೆಗುಂಪಾಗಿಸಿ, ಯುವಕರು ಗುನುಗಿದರೆ ಸಾಕು ಎಂಬುದೊಂದೇ ಉದ್ದೇಶ.

ಸಿನೆಮಾ, ಕನ್ನಡದ್ದಾಗಲೀ, ಯಾವ ಭಾಷೆಯದ್ದೇ ಆಗಲಿ ಅದಕ್ಕೆ ಅದರದ್ದೇ ಆದ ಒಂದು ಪ್ರತ್ಯೇಕ ಭಾಷೆಯಿದೆ ಅನ್ನುತ್ತಾರೆ- ಸಾಂಪ್ರದಾಯಿಕ ಸಿನೆಮಾ ನಿರ್ದೇಶಕ ಅಂತಲೇ ಗುರುತಿಸಿಕೊಂಡ ಟಿ. ಎಸ್‌. ನಾಗಾಭರಣ. ಸಿನೆಮಾದಲ್ಲಿ ಹಿಂದಿ, ಇಂಗ್ಲೀಷು, ಕನ್ನಡ ಎಲ್ಲವೂ ಮಿಕ್ಸ್‌ ಆಗಿರುತ್ತದೆ. ಈ ಭಾಷೆಯೇ ಇವತ್ತಿನ ಸಮಾಜದ ಪ್ರತಿಬಿಂಬ ಅನ್ನೋದು ಅವರ ಅಭಿಪ್ರಾಯ.

ಸಿನೆಮಾದಲ್ಲಿ ಕಂಗ್ಲಿಷ್‌ ಮಾತ್ರ ಇರುತ್ತದೆ ಎಂದೂ ಹೇಳುವಂತಿಲ್ಲ. ‘ಮುಝೆ ಕುಚ್‌ ಕುಚ್‌ ಹೋಗಯಾ’ ಅಂತ ಕುಟುಂಬ ಚಿತ್ರದ ಹಾಡೊಂದರಲ್ಲಿ , ಸೋ ಕಾಲ್ಡ್‌ ಕ್ರಿಯೇಟಿವ್‌ ನಟ ಖ್ಯಾತಿಯ ಉಪೇಂದ್ರ ಹಾಡುತ್ತಾರೆ.

ಇಂತಹ ಕಿಚಡೀ ಭಾಷೆಯ ಹಾಡುಗಳನ್ನು ನಾಗಾಭರಣ ಮನಃಪೂರ್ವಕವಾಗಿ ಒಪ್ಪುವುದಿಲ್ಲ. ಆ ಹಾಡುಗಳು ಸಿನೆಮಾದ ಸನ್ನಿವೇಶಕ್ಕಷ್ಟೇ ಸೂಟ್‌ ಆಗ್ತವೆ. ಥಿಯೇಟರಿನಿಂದ ಹೊರಗೆ ಅವುಗಳಿಗೆ ಅರ್ಥವೇ ಇರುವುದಿಲ್ಲ. ನನ್ನ ಸಿನೆಮಾದಲ್ಲಂತೂ ಕಾಸ್ಮೋಪಾಲಿಟನ್‌ ಪಾತ್ರಕ್ಕಾದರೆ ಮಾತ್ರ ಇಂಥಾ ಹಾಡನ್ನು ಅಳವಡಿಸುತ್ತೇನೆ. ನಾನು ಸಾಹಿತ್ಯಪ್ರಿಯ . ಆದ್ದರಿಂದ ಸಾಂಪ್ರದಾಯಿಕ ಹಾಡುಗಳನ್ನಷ್ಟೇ ನನ್ನ ಚಿತ್ರದಲ್ಲಿ ಬಳಸಿಕೊಳ್ಳಲಿಚ್ಚಿಸುತ್ತೇನೆ ಅಂತ ನಾಗಾಭರಣ ಹೇಳುತ್ತಾರೆ.

ಕನ್ನಡ ಚಿತ್ರರಂಗದ ಇನ್ನೊಬ್ಬ ಯುವ ನಿರ್ದೇಶಕ ಹೇಮಂತ್‌ ಹೆಗ್ಡೆ ಪ್ರಕಾರ - ಹಿರಿ ತಲೆಗಳು ಕಂಗ್ಲಿಷ್‌ ಹಾಡನ್ನು ಒಪ್ಪದಿರಬಹುದು. ಆದರೆ ಯುವಕರಿಗೆ ಈ ಹಾಡುಗಳು ಇಷ್ಟ. ಆದರೆ ಅತಿಯಾದರೆ ಅಮೃತವೂ ವಿಷ !

ಸದ್ಯಕ್ಕೆ ಟೈಂ ಟೇಬಲ್‌ ಹಾಕಿಕೊಂಡು ಕಂಗ್ಲಿಷ್‌ ಸಾಹಿತ್ಯದ ಹಾಡುಗಳಿಗೆ ಮಟ್ಟು ಹಾಕುತ್ತಿರುವ ಗುರುಕಿರಣ್‌ ನಿನ್ನೆ ನೆನ್ನೆಗೆ ನಾಳೆ ನಾಳೆಗೆ ಎಂಬ ಜಾಯಮಾನದವರು. ಇವತ್ತು ದಾಸರ ಪದವನ್ನ ನಾವು ಹಾಡ್ತಾ ಕೂತರೆ ಯಾರು ಕೇಳ್ತಾರೆ ಹೇಳಿ? ಹಾಡಲ್ಲಿ ಧಂ, ರಿಧಂ ಇರಬೇಕಾದ ಕಾಲ ಇದು. ನಾನು ಜಿ.ಪಿ.ರಾಜರತ್ನಂ ಅವರ ಭಾವಗೀತೆಗೂ ಟ್ಯೂನ್‌ ಹಾಕ್ತೀನಿ. ಹಾಗೆಯೇ ಅಚ್ಚ ಕನ್ನಡದ ಸಾಲುಗಳನ್ನೂ ಹಾಡಾಗಿಸ್ತುತೇನೆ. ಇವತ್ತಿನ ಟ್ರೆಂಡ್‌ ಪ್ರಕಾರ ಒಂದು ಸಿನಿಮಾದಲ್ಲಿ ಮೆಲೋಡಿ, ಫಾಸ್ಟ್‌ ನಂಬರ್ಸ್‌ ಎಲ್ಲದರ ಮಿಶ್ರಣ ಇರಬೇಕು. ನಾನು ಹಾಕಿದ ರಾಗಗಳಲ್ಲಿ ಫಾಸ್ಟ್‌ ನಂಬರ್ಸ್‌ ಹಿಟ್ಟಾಗಿವೆ. ಅವುಗಳಲ್ಲಿ ಅನೇಕವು ಕಂಗ್ಲಿಷ್‌ ಹಾಡುಗಳು. ಇದು ಇನ್‌ಸ್ಟಂಟ್‌ ಕಾಲ ಸ್ವಾಮಿ, ಕಾಲಕ್ಕೆ ತಕ್ಕಂತೆ ನಡೆದರೇ ಜೋಳಿಗೇ ತುಂಬುವುದು ಅಂತಾರೆ ಗುರು.

ಕ್ಲಾಸಿಕ್‌ ಹಾಡು ಪ್ರಿಯರು

ಕ್ಲಾಸಿಕ್‌ ಹಾಡುಗಳ ಮುಂದೆ ಕಂಗ್ಲಿಷ್‌ ಹಾಡುಗಳ ಆಯುಷ್ಯ ತೀರಾ ಕಡಿಮೆ. ‘ ಐ ಡ್ಯಾಶ್‌ ಯೂ.. ’ ಎನ್ನುವ ‘ಹಾಲಿವುಡ್‌’ ಚಿತ್ರದ ಹಾಡನ್ನು ಜನ ಮರೆತಿದ್ದಾರೆ. ‘ಒಲವೇ ಜೀವನ ಸಾಕ್ಷಾತ್ಕಾರ’ ದಂತಹ ಅತ್ಯಂತ ಹಳೇ ಹಾಡು, ಐದಾರು ವರ್ಷಗಳ ಹಿಂದಷ್ಟೇ ಬಂದ ‘ನಮ್ಮೂರ ಮಂದಾರ ಹೂವೆ’ ಹಾಗೂ ‘ಅಮೃತ ವರ್ಷಿಣಿ’ ಚಿತ್ರದ ಹಾಡುಗಳನ್ನು ಈಗಲೂ ಜನ ಹಾಡುತ್ತಾರೆ. ಸಿನೆಮಾದ ಹೊರಗೂ ಆ ಹಾಡುಗಳಿಗೆ ಸ್ಥಾನವಿದೆ, ಸಾಂದರ್ಭಿಕ ಅರ್ಥಗಳಿವೆ. ಈ ಪರಿಯ ಸಂಗೀತ ಪ್ರಿಯರ್ಯಾರೂ ಮಾಮಾ ಮಾಮಾ ಮಜಾ ಮಾಡು ಹಾಡನ್ನು ಇಷ್ಟಪಡುವುದಿಲ್ಲ.

ಸಾಂಪ್ರದಾಯಿಕ ರಾಗದಲ್ಲಿ ಹಾಡಿದ ತೆಲುಗು ತಮಿಳು ಸಿನೆಮಾ ಹಾಡುಗಳನ್ನೂ ಕನ್ನಡಿಗರು ಕೇಳುತ್ತಾರೆ. ಓಬಿರಾಯನ ಕಾಲದ ಸಿನೆಮಾ ಅಂತ ಇಂದಿನ ಯುವಕರಿಂದ ಅನ್ನಿಸಿಕೊಂಡ ‘ಸಾಗರ್‌ ಸಂಗಮ್‌’ ತೆಲುಗು ಚಿತ್ರದ ಹಾಡುಗಳಿಗೆ ಕ್ಯಾಸೆಟ್‌ ಅಂಗಡಿಯಲ್ಲಿ ಈಗಲೂ ಬೇಡಿಕೆಯಿದೆ.

ಕಂಗ್ಲಿಷ್‌ ಹಾಡುಗಳ ಬಗ್ಗೆ ನೀವೇನಂತೀರಿ?


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada