»   » ಕುಂಬ್ಳೆ ನಾಯಕನಾಗಿ 'ಮೀರಾಬಾಯ್ ನಾಟೌಟ್'

ಕುಂಬ್ಳೆ ನಾಯಕನಾಗಿ 'ಮೀರಾಬಾಯ್ ನಾಟೌಟ್'

Subscribe to Filmibeat Kannada

ಮುಂಬೈ, ಜು.11: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಅನಿಲ್ ಕುಂಬ್ಳೆ ಬಾಲಿವುಡ್‌ನಲ್ಲಿ ನಾಯಕ ನಟನಾಗಿ ಕಾಣಿಸಲಿದ್ದಾರೆ. ಕ್ರಿಕೆಟ್‌ ಚಿತ್ರಕಥೆ ಹೊಂದಿರುವ 'ಮೀರಾಬಾಯ್ ನಾಟೌಟ್' ಚಿತ್ರದಲ್ಲಿ ಕುಂಬ್ಳೆ ಪ್ರೇಕ್ಷಕರನ್ನು ಕ್ಲೀನ್ ಬೌಲ್ಡ್ ಮಾಡಲಿದ್ದಾರೆ.

ಪ್ರೀತೀಶ್ ನಂದಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಪ್ರಸಿದ್ಧ ಮರಾಠಿ ನಿರ್ದೇಶಕ ಚಂದ್ರಕಾಂತ್ ಕುಲಕರ್ಣಿ ನಿರ್ದೇಶಿಸಲಿದ್ದಾರೆ. ನಿರೂಪಕಿ ಮಂದಿರಾ ಬೇಡಿ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅನುಪಮ್ ಖೇರ್, ಮಹೇಶ್ ಮಂಜ್ರೇಕರ್ ಮತ್ತು ಏಜಾಜ್ ಖಾನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ಹಿಂದೆ 'ಆಂಟೋನಿ ಕೌನ್ ಹೈ' ಎಂಬ ಚಿತ್ರವನ್ನು ನಿರ್ಮಿಸಿದ್ದ ಮಂದಿರಾ ಬೇಡಿ ಅವರ ಪತಿ ರಾಜ್ ಕೌಶಲ್ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಕ್ರಿಕೆಟ್ ಸುತ್ತಲೂ ತಿರುಗುವ ಚಿತ್ರಕಥೆಯಲ್ಲಿ ಮಂದಿರಾ ಬೇಡಿ ಹುಚ್ಚು ಕ್ರಿಕೆಟ್ ಅಭಿಮಾನಿಯಾಗಿ ಕಾಣಿಸಲಿದ್ದಾರೆ. ಕ್ರಿಕೆಟ್ ಮೇಲಿನ ಹುಚ್ಚು ಅಭಿಮಾನದಿಂದ ಆಕೆ ವಾಂಖೇಡೆ ಕ್ರೀಡಾಂಗಣದ ಸುತ್ತ ಅಲೆಯುತ್ತಿರುತ್ತಾಳೆ. ಆನಂತರ ಆಕೆಗೆ ಕುಂಬ್ಳೆಯೊಂದಿಗೆ ಪರಿಚಯವಾಗುತ್ತದೆ. ಅದು ಪ್ರೇಮಕ್ಕೆ ತಿರುಗಿ ಮದುವೆಗೆ ದಾರಿ ಮಾಡಿಕೊಡುತ್ತದೆ. ಮದುವೆಯ ನಂತರವಷ್ಟೇ ಅಸಲಿ ಕಥೆ ಶುರುವಾಗುತ್ತದಂತೆ. ಮದುವೆ ನಂತರ ಮಂದಿರಾ ಬೇಡಿಗೆ ಕ್ರಿಕೆಟ್ ಹುಚ್ಚು ಕಡಿಮೆಯಾಗುತ್ತದೆಯೇ? ಅಥವಾ ಇಲ್ಲವೆ? ಎಂಬುದನ್ನು ತೆರೆಯ ಮೇಲೆ ನೋಡಿ ಆನಂದಿಸಬೇಕು.

ಈಗಾಗಲೇ ಬೆಳ್ಳಿತೆರೆಯಲ್ಲಿ ಕ್ರಿಕೆಟ್ ಆಟಗಾರರಾದ ಅಜಯ್ ಜಡೇಜ, ವಿನೋದ್ ಕಾಂಬ್ಳಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ ಸೋತಿದ್ದಾರೆ. ಡಿಸೆಂಬರ್ 2006ರಿಂದಲೂ ಚಿತ್ರೀಕರಣ ಆಗ ಶುರುವಾಗುತ್ತದೆ ಈಗ ಶುರುವಾಗುತ್ತದೆ ಎನ್ನುತ್ತಲೇ ಇದ್ದಾರೆ ಕುಂಬ್ಳೆ ಚಿತ್ರದ ನಿರ್ಮಾಪಕರು. ಆದರೆ ಇದುವರೆಗೂ 'ಮೀರಾಬಾಯಿ ನಾಟೌಟ್' ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada