»   » ಬಾಬು ಮೋಡಿಗೆ ಮಳೆಯ ಕೃಷ್ಣಪ್ಪನ ಜೋಡಿ

ಬಾಬು ಮೋಡಿಗೆ ಮಳೆಯ ಕೃಷ್ಣಪ್ಪನ ಜೋಡಿ

Subscribe to Filmibeat Kannada
Producer E Krishnappa
ನಿರ್ಮಾಪಕ ಕೃಷ್ಣಪ್ಪ ಗುಟ್ಟು ಬಿಟ್ಟುಕೊಡುವುದಿಲ್ಲ. ಕೃಷ್ಣಪ್ಪ ಕ್ಯಾಂಪ್‌ನ ಮೂರನೇ ಚಿತ್ರ ನಿರ್ದೇಶಿಸಬೇಕಿದ್ದ ಪತ್ರಕರ್ತ ಸದಾಶಿವ ಶೆಣೈ ಅವರಿಗೆ ತಮ್ಮ ಚಿತ್ರದ ಆರಂಭಕ್ಕೆ ಕಾಲ ಯಾವಾಗ ಕೂಡಿಬರುತ್ತದೆ ಎನ್ನುವುದು ಸ್ಪಷ್ಟವಿಲ್ಲ. ಒಂದು ಮೂಲದ ಪ್ರಕಾರ, ಚಿತ್ರದ ಬಜೆಟ್‌ನ ಬಗ್ಗೆ ಕೃಷ್ಣಪ್ಪ ಹಿಂದೆಮುಂದೆ ನೋಡುತ್ತಿದ್ದಾರಂತೆ. ಸಾಲುಸಾಲು ಬೀಳು ಚಿತ್ರಗಳನ್ನು ನೋಡುತ್ತಿರುವ ಅವರಿಗೆ ದೊಡ್ಡ ಮೊತ್ತವನ್ನು ಶೆಣೈ ಚಿತ್ರದ ಮೇಲೆ ಹೂಡಲು ಮನಸ್ಸಿಲ್ಲ. ಎಷ್ಟಾದರೂ ಅವರು ಚಾಣಾಕ್ಷ ಉದ್ಯಮಿ!

ಸದ್ಯಕ್ಕೆ ಗಾಂಧಿನಗರದ ವರ್ತಮಾನದ ಪ್ರಕಾರ ಸಣ್ಣ ಬಜೆಟ್ಟಿನ ಚಿತ್ರವೊಂದಕ್ಕೆ ಕೃಷ್ಣಪ್ಪ ಸ್ಕೆಚ್ ಹಾಕುತ್ತಿದ್ದಾರೆ. ಈ ಚಿತ್ರದ ನಿರ್ದೇಶಕ ದಿನೇಶ್‌ಬಾಬು. ನಾಯಕ ರಮೇಶ್. ಹತ್ತು ದಿನಗಳಲ್ಲಿ ಸಿನಿಮಾ ಮುಗಿಸಿಕೊಡುತ್ತೇನೆ ಎಂದು ಬಾಬು ಪ್ರಾಮಿಸ್ ಮಾಡಿದ್ದಾರಂತೆ (ಬಾಬು ಪ್ರತಿಭೆಗೆ ಹತ್ತು ದಿನ ಜಾಸ್ತಿಯಾಯಿತಲ್ಲವಾ ಎನ್ನುವುದು ಜನುಮದ ಗೆಳತಿ ನೋಡಿದವರ ಪ್ರಶ್ನೆ). ತಮ್ಮ ನಟನೆಯ ಚಿತ್ರಕ್ಕೆ ಒಳ್ಳೆಯ ಸ್ಯಾಟಲೈಟ್ ಡೀಲ್ ಕುದುರಿಸಿಕೊಡುತ್ತೇನೆ ಎಂದು ರಮೇಶ್ ಅಲ್ಲಲ್ಲಿ ಹೇಳಿಕೊಂಡಿರುವುದು ಕೂಡ ಕೃಷ್ಣಪ್ಪನವರಿಗೆ ಬಾಬು-ರಮೇಶ್ ಜೋಡಿಯ ಚಿತ್ರದ ಬಗ್ಗೆ ಆಸಕ್ತಿ ಮೂಡಿಸಿದೆ.

ಯೋಗರಾಜಭಟ್-ರಾಕ್‌ಲೈನ್‌ರ ಲಗೋರಿಯ ಪ್ರಸಂಗವೂ ಸೇರಿದಂತೆ ಪ್ರಸ್ತುತ ಬೀಸುತ್ತಿರುವ ಗಾಳಿ ದೊಡ್ಡ ಬಜೆಟ್ಟಿನ ಚಿತ್ರಗಳಿಗೆ ಅನುಕೂಲವಾಗಿ ಇದ್ದಂತಿಲ್ಲ. ಸಣ್ಣ ಬಜೆಟ್ಟಿನ ಚಿತ್ರಗಳತ್ತ ಒಲವು ತೋರಿಸುವ ನಿರ್ಮಾಪಕರು ಹೆಚ್ಚುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ದುಡ್ಡು ಬಾರದಿದ್ದರೂ ಪರವಾಗಿಲ್ಲ, ಇತರ ಮೂಲಗಳಿಂದ ಬಂಡವಾಳ ಗಿಟ್ಟಿದರೆ ಸಾಕು ಎಂದು ಯೋಚಿಸುವವರೂ ಇದ್ದಾರೆ. ಇವರ ಸಾಲಿಗೆ ಕೃಷ್ಣಪ್ಪ ಹೊಸ ಸೇರ್ಪಡೆ ಅಷ್ಟೇ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada