»   » ಪರಭಾಷಾ ಶೀರ್ಷಿಕೆಗಳಿಗೆ ಕೆ ಎಫ್ ಸಿಸಿ ಕಡಿವಾಣ

ಪರಭಾಷಾ ಶೀರ್ಷಿಕೆಗಳಿಗೆ ಕೆ ಎಫ್ ಸಿಸಿ ಕಡಿವಾಣ

Subscribe to Filmibeat Kannada

ಕನ್ನಡ ಚಿತ್ರಗಳಿಗೆ ಆಂಗ್ಲ ಅಥವಾ ಪರಭಾಷಾ ಶೀರ್ಷಿಕೆಗಳನ್ನು ಇನ್ನು ಮುಂದೆ ಇಡುವಂತಿಲ್ಲ. ಒಂದು ವೇಳೆ ಈ ನಿಯಮ ಮೀರಿ ಪರಭಾಷೆಯ ಶೀರ್ಷಿಕೆಗಳನ್ನು ಕನ್ನಡ ಚಿತ್ರಗಳಿಗೆ ಇಟ್ಟಿದ್ದೇ ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಕಠಿಣ ಕ್ರಮ ಕೈಗೊಳ್ಳಲಿದೆ.

ಮೂರು ವರ್ಷಗಳ ಹಿಂದೆ ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಈಗ ಅದನ್ನು ಜಾರಿಗೊಳಿಸಲು ಕೆ ಎಫ್ ಸಿಸಿ ಅಧ್ಯಕ್ಷೆ ಜಯಮಾಲಾ ತೀರ್ಮಾನಿಸಿದ್ದಾರೆ. ''ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸಬೇಕೆಂಬ ಮಹದಾಸೆಯಿಂದ ಬಹಳಷ್ಟು ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಾಭಿಮಾನಿಗಳು ಆಂಗ್ಲ ಭಾಷಾ ಶೀರ್ಷಿಕೆಯುಳ್ಳ ಚಿತ್ರಗಳನ್ನುನಿಷೇಧಿಸುವಂತೆ ಸೂಚಿಸಿದ್ದಾರೆ. ಪರಭಾಷಾ ಚಿತ್ರಗಳ ಮುಂದೆ ಕನ್ನಡ ಚಿತ್ರಗಳು ಸೋಲಬಾರದು. ಆಂಗ್ಲ ಭಾಷಾ ಶೀರ್ಷಿಕೆಗಳನ್ನು ನಾವು ಪ್ರೋತ್ಸಾಹಿಸುತ್ತ ಹೋದರೆ ಬೇರೆಯವರಿಗೆ ಇದು ಕನ್ನಡ ಚಿತ್ರ ಎಂದು ಗೊತ್ತಾಗುವುದಾದರೂ ಹೇಗೆ?'' ಎಂದು ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.

ಈ ವರ್ಷದ ಆಗಸ್ಟ್ ತಿಂಗಳಿಂದ ಇದುವರೆಗೂ ಸದಭಿರುಚಿಯಿಲ್ಲದ ಹಾಗೂ ಪರಭಾಷೆಯ 30-35 ಶೀರ್ಷಿಕೆಗಳನ್ನು ತಿರಸ್ಕರಿಸಲಾಗಿದೆ. ಇವುಗಳಲ್ಲಿ ಕಪಿಲ್ ದೇವ್, ಫಾತಿಮಾ ವೆಡ್ಸ್ ಪೂಜಾರಿ, ಕಿಂಗ್ ಫಿಷರ್, ಹೌಸ್ ಫುಲ್, ಲವ್ ಮಂತ್ರ, ಪರ್ಸನಲ್ ಡೈರಿ, ರಾಮ್ ರಹೀಮ್ ರೋಸಿ, ಡೌವ್ ರಾಜ, ಯಹೀ ಹೈ ಮುಂಬೈ, ಲಲ್ಲೇಶ, ಮೀಟ್ರ್ ಇದ್ರೆ ಬಾ, ಶಾರ್ಟ್ ಟೆಂಪರ್, ಚಾಕೊಲೇಟ್ ಹಾಗೂ ಘಟೋದ್ಗಚ ಇನ್ ಲವ್ ಪ್ರಮುಖವಾದವು. ವಾಣಿಜ್ಯ ಮಂಡಳಿ ನಿಯಮಗಳ ಪ್ರಕಾರ, ಜೀವಂತ ಇರುವ ವ್ಯಕ್ತಿಗಳ ಹೆಸರನ್ನು ಚಿತ್ರ ಶೀರ್ಷಿಕೆಗಳಿಗೆ ಬಳಸುವಂತಿಲ್ಲ. ಉದಾಹರಣೆಗೆ ಕಪಿಲ್ ದೇವ್.

ವಾಣಿಜ್ಯ ಮಂಡಳಿಯ ಈ ತೀರ್ಮಾನಕ್ಕೆ ನಟ ರಮೇಶ್ ಅರವಿಂದ್ ಪ್ರತಿಕ್ರಿಯಿಸುತ್ತಾ, ''ಸಮಸ್ಯೆಯೇ ಇಲ್ಲ ಬಿಡಿ. ಕನ್ನಡದಲ್ಲಿ ಶಬ್ದ ಸಂಪತ್ತು ಸಂಪದ್ಭರಿತವಾಗಿದೆ,ಉತ್ತಮವಾದ ಶೀರ್ಷಿಕೆಗಳನ್ನು ಇಡಬಹುದು. ವಾಣಿಜ್ಯ ಮಂಡಳಿಯ ಈ ನಿರ್ಧಾರದಿಂದ ಇನ್ನು ಮುಂದೆ ಎಚ್ಚರಿಕೆಯಿಂದ ಶೀರ್ಷಿಕೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದರು. ''ಇದೊಂದು ಸ್ವಾಗತಾರ್ಹ ಬೆಳವಣಿಗೆ. ಕನ್ನಡ ಚಿತ್ರದ ಹೆಸರನ್ನು ಪರಭಾಷೆಯವರು ಜೋರಾಗಿ ಕೂಗಿ ಹೇಳಿದರೆ ನಮಗೆ ಹೆಮ್ಮೆ ಅನ್ನಿಸುವುದಿಲ್ಲವೇ?'' ಎಂದು ನಟಿ ತಾರಾ ಮರು ಪ್ರಶ್ನಿಸುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada