ಇವನು ಅಂತಿಂಥವನಲ್ಲ ರಫ್ ಅಂಡ್ ಟಫ್ ಮಾಲಿಂಗ!
ಮಾರಕ ಬೌಲಿಂಗ್‌ಗೆ ಹೆಸರಾದ ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ. ಅವನು ಕವಣೆಯಂತೆ ಎಸೆಯುವ ಬಾಲು ಬ್ಯಾಟ್ಸ್‌ಮನ್‌ಗಳ ಪಾಲಿಗೆ ನಿಜಕ್ಕೂ ಬಾಂಬ್‌ನಂತೆ ಕಾಣುತ್ತದೆ. ಇಷ್ಟೆಲ್ಲಾ ಪುರಾಣ ಯಾಕೆ ಎಂದ್ರೆ ಈಗ ಮಾಲಿಂಗನ ಹೆಸರು ಕನ್ನಡ ಚಿತ್ರವೊಂದರ ಟೈಟಲ್ ಆಗಿದೆ. ಚಿತ್ರದ ಹೆಸರು 'ಮಾಲಿಂಗ'.
ಹೆಸರು ಮಾತ್ರ ಕ್ರಿಕೆಟಿಗನದು. ಆದರೆ ಚಿತ್ರದ ಕತೆಗೂ ಕ್ರಿಕೆಟ್‌ಗೂ ಎತ್ತಣಿಂದ ಎತ್ತ ಸಂಬಂಧವೂ ಇಲ್ಲವಯ್ಯ. 'ನೂರು ಜನ್ಮಕು' ಚಿತ್ರದಲ್ಲಿ ಸಾಧಾರಣ ಅಭಿನಯ ನೀಡಿದ್ದ ಸಂತೋಷ್ ಚಿತ್ರದ ನಾಯಕ. ಇದೊಂದು ಪಕ್ಕಾ ಮಾಸ್ ಚಿತ್ರ ಎನ್ನುತ್ತಾರೆ ನಿರ್ದೇಶಕ ಸಂಜಯ್. ಈಗಾಗಲೆ ಅವರು 'ಹುಡುಗಾಟ' ಹಾಗೂ 'ಪರಿಚಯ' ಎಂಬ ಎರಡು ಜನಪ್ರಿಯ ಚಿತ್ರಗಳನ್ನು ಕೊಟ್ಟಿದ್ದಾರೆ.
ಇತ್ತೀಚೆಗೆ 'ಮಾಲಿಂಗ' ಚಿತ್ರ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸೆಟ್ಟೇರಿತು. ಬೆಳಗಾವಿ ಮತ್ತು ಗುಲ್ಬರ್ಗದಲ್ಲಿ ಚಿತ್ರೀಕರಣ ನಡೆಯಲಿದೆ. ಒಟ್ಟು 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರದ ಹಾಡುಗಳು ಹಿಟ್ ಆದರೆ ಚಿತ್ರ ಗೆದ್ದಂತೆಯೇ ಎಂಬ ವಿಶ್ವಾಸ ನಿರ್ದೇಶಕರದು. ರೆಕ್ಸೋನಾ ಜಾಹೀರಾತಿನಲ್ಲಿ ಕಾಣಿಸುತ್ತಿದ್ದ ಮೈತ್ರಿಯಾ ಚಿತ್ರದ ನಾಯಕಿ.
ನೀಟಾಗಿ ಶೇವ್ ಮಾಡಿಕೊಂಡು ಜಂಟ್ಲ್ ಮನ್ ತರಹ ಕಾಣಿಸುತ್ತಿದ್ದ ಸಂತೋಷ್ ಈ ಚಿತ್ರದಲ್ಲಿ ತಮ್ಮ ಗೆಟಪನ್ನು ಬದಲಾಯಿಸಿಕೊಂಡಿದ್ದಾರೆ. ಗಡ್ಡ, ಕಟುಮಸ್ತಾದ ಮೀಸೆ ಅವತಾರದಲ್ಲಿ ಕಾಣಿಸಲಿದ್ದಾರೆ. ಅವರ ಹೇರ್‌ಸ್ಟೈಲ್ ಕೂಡ ಬದಲಾಗಲಿದೆಯಂತೆ. ಒಟ್ಟಿನಲ್ಲಿ ರಫ್ ಅಂಡ್ ಟಫ್ ಪಾತ್ರ. ಈ ಪಾತ್ರ ಅವರಿಗೆ ಸಖತ್ ಇಷ್ಟವೂ ಆಗಿದೆಯಂತೆ.(ದಟ್ಸ್‌ಕನ್ನಡ ಸಿನಿ ವಾರ್ತೆ)


Click it and Unblock the Notifications











