»   » ಪೂಜಾಗಾಂಧಿಗೆ ಮಹರ್ಷಿಯ ಕಲ್ಯಾಣರೇಖೆ

ಪೂಜಾಗಾಂಧಿಗೆ ಮಹರ್ಷಿಯ ಕಲ್ಯಾಣರೇಖೆ

Posted By:
Subscribe to Filmibeat Kannada

'ನೀಕ್ಷಣ ಕಾಲ ಮರೆಯಾದರೂ ...ಈ ಎದೆಯಲಿ ಕೋಲಾಹಲ' ಕವಿರಾಜ್ ಬರೆದಿರುವ ಗೀತೆಗೆ ಹೆಜ್ಜೆ ಹಾಕಿದ ಪೂಜಾಗಾಂಧಿ ಹಾಗೂ ನಾಯಕ ಪ್ರಶಾಂತ್ ಅಭಿನಯದ ದೃಶ್ಯಗಳನ್ನು ಕೃಷ್ಣಬ್ರಹ್ಮ ಅವರ ನೃತ್ಯ ಸಂಯೋಜನೆಯಲ್ಲಿ ಸೊಗಸಾಗಿ ಮೂಡಿಬಂದಿದೆ .

ನಂತರ ಸಾಹಿತಿ ನಾಗೇಂದ್ರ ಪ್ರಸಾದ್ ರಚಿಸಿರುವ 'ಕಲ್ಯಾಣರೇಖೆ ಗೀಚಿದ ಬ್ರಹ್ಮ ಕಣ್ಮುಂದೆ ನಿನ್ನ ಚಿತ್ರ ಕಾಣಮ್ಮ......' ಎಂಬ ಗೀತೆಗೆ ಪ್ರಶಾಂತ್, ಪೂಜಾಗಾಂಧಿ ಹಾಗೂ 40ಕ್ಕೂ ಹೆಚ್ಚು ಸಹನರ್ತಕರು ಧನು ಅವರ ನೃತ್ಯ ನಿರ್ದೇಶನದಲ್ಲಿ ಹೆಜ್ಜೆ ಹಾಕಿದರು.

ಮಾನಸ ಚಿತ್ರ ಲಾಂಛನದಲ್ಲಿ ನಿರ್ಮಿತವಾಗುತ್ತಿರುವ ಮಹರ್ಷಿ ಚಿತ್ರಕ್ಕೆ ಹಾಡುಗಳು ಚಿತ್ರೀಕೃತವಾಗುತ್ತಿರುವ ಸಮಯ. ಒಂದೇ ವಾರದಲ್ಲಿ ಚಿತ್ರಕ್ಕೆ ಎರಡು ಹಾಡುಗಳನ್ನು ಪ್ರಕೃತಿಯ ಮಡಿಲಿನ ಸಕಲೇಶಪುರ ಹಾಗೂ ಆಸುಪಾಸಿನ ಸ್ಥಳಗಳಲ್ಲಿ ಚಿತ್ರೀಕರಿಸಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಡಿ.ಕೆ.ರಾಮಕೃಷ್ಣ ಹಾಗೂ ಚಿದಾನಂದ್ ನಿರ್ಮಿಸುತ್ತಿರುವ ಮಹರ್ಷಿ ಚಿತ್ರಕ್ಕೆ ಸಿ.ರಾಜಶೇಖರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಸಾಹಸದೊಂದಿಗೆ ವಾತ್ಸಲ್ಯಭರಿತ ಸನ್ನಿವೇಶಗಳನ್ನೊಳಗೊಂಡಿರುವ ಈ ಚಿತ್ರಕ್ಕೆ ನಿರ್ದೇಶಕ ಕೃಷ್ಣಬ್ರಹ್ಮ ಅವರು ರಾಕೇಶ್ ಅವರೊಂದಿಗೆ ಸಂಭಾಷಣೆ ಬರೆದು ಚಿತ್ರಕಥೆ ರಚಿಸಿದ್ದಾರೆ.

ಉಳಿದಂತೆ ರಮೇಶ್‌ಆಲ್‌ಬಾಯ್ ಛಾಯಾಗ್ರಹಣ, ಶ್ರೀಮುರುಳಿ ಸಂಗೀತ ನಿರ್ದೇಶನ, ಫೈವ್ ಸ್ಟಾರ್ ಗಣೇಶ್ ನೃತ್ಯ ನಿರ್ದೇಶನ, ಈಶ್ವರ್ ಸಂಕಲನ, ಇಸ್ಮಾಯಿಲ್ ಕಲಾ ನಿರ್ದೆಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಮೋಹನ್‌ಮಾಳಗಿ ಸಹ ನಿರ್ದೇಶನ, ಅನಿಲ್ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಪ್ರಶಾಂತ್, ಪೂಜಾಗಾಂಧಿ , ಪ್ರಿಯಾಂಕ, ಮುನಿ, ವಿಶ್ವ, ರಾಜಶೇಖರ್, ಸ್ವಸ್ತಿಕ್‌ಶಂಕರ್, ರಾಜಶೇಖರ್ ಮುಂತಾದವರಿದ್ದಾರೆ.


ಕಾಫಿಡೇನಲ್ಲಿ ಸೀನನಿಗೆ ಲವ್ ಆಫರ್

ಪ್ರೀತಿಸಿದವನ ಬಳಿ ಪ್ರೀತಿಯ ವಿಷಯ ತಿಳಿಸಲು ಹೆಣ್ಣುಮಕ್ಕಳಿಗೆ ಸೂಕ್ತ ಸ್ಥಳ ಬೇಕು. ನಮ್ಮ ಸೀನನ ದ್ವಿತೀಯ ನಾಯಕಿ ಅಂತರಾ ರೆಡ್ಡಿಗೂ ಇದೇ ಸಮಸ್ಯೆ ಎದುರಾದಾಗ ಆಕೆ ಬೆಂಗಳೂರಿನ ಮೂಲೆಮೂಲೆಗಳಲ್ಲೂ ತಲೆಯೆತ್ತಿರುವ, ಪ್ರೇಮಿಗಳ ಸಂದರ್ಶನಕ್ಕೆ ಶಾಶ್ವತ ನೆಲೆಯಾಗಿರುವ ಕಾಫಿಡೇಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತರಾಳ ಆಹ್ವಾನ ಮನ್ನಿಸಿ ಅಲ್ಲಿಗೆ ಆಗಮಿಸಿದ್ದ ನಾಯಕ ತರುಣ್ ಮುಂದೆ ಆಕೆ ಪ್ರೀತಿಯ ವಿಷಯ ಬಿಚ್ಚಿಟ್ಟಾಗ ಆತ ಪ್ರೀತಿಯನ್ನು ತಿರಸ್ಕರಿಸುತ್ತಾನೆ.

ಸೀನನ ಪ್ರೀತಿ ಸಿಗದ ಅಂತರಾ ರೆಡ್ಡಿ ಬೆಪ್ಪಾಗುವ ಸನ್ನಿವೇಶವನ್ನು ಮಲ್ಲೇಶ್ವರಂನ ಕಾಫಿಡೇಯಲ್ಲಿ ಸೀನ ಚಿತ್ರಕ್ಕಾಗಿ ನಿರ್ದೇಶಕ ಬಸವರಾಜ ಬಳ್ಳಾರಿಚಿತ್ರೀಕರಿಸಿಕೊಂಡರು. ಖುಷಿ, ಗೆಳೆಯ ಹಾಗೂ ಹನಿಹನಿ ಚಿತ್ರಗಳ ನಾಯಕ ತರುಣ್ ಸೀನನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಪ್ರಿಯಾಂಕ ಚಂದ್ರ ಹಾಗೂ ಅಂತರಾ ರೆಡ್ಡಿ ಎಂಬ ಚೆಲುವೆಯರು ನಾಯಕಿಯರಾಗಿದ್ದಾರೆ. ರಮೇಶ್‌ಭಟ್, ಅವಿನಾಶ್, ಶರತ್‌ಲೋಹಿತಾಶ್ವ, ಮೈಕೋ ನಾಗರಾಜ್, ಶರಣ್, ನೀನಾಸಂ ಅಶ್ವತ್, ಸುಧಾ ಬೆಳವಾಡಿ ಮುಂತಾದವರು ಇವರೊಂದಿಗಿದ್ದಾರೆ. ಅಂಕಿತ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ಮುರುಳಿ ಹಾಗೂ ಡಿ.ಕುಪ್ಪುರಾಜ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿದ್ದಾರೆ.

ಆರು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಜಗದೀಶ್ ವಾಲಿ ಕ್ಯಾಮೆರಾ, ನಾಗೇಂದ್ರ ಅರಸ್ ಸಂಕಲನ, ಪರಮೇಶ್, ಹರ್ಷ, ಇಮ್ರಾನ್ ನೃತ್ಯ, ಡಿಫ಼ರೆಂಟ್ ಡ್ಯಾನಿ ಸಾಹಸ, ಬಾಬುಖಾನ್ ಕಲೆ, ಚೆನ್ನಯ್ಯ ನಿರ್ಮಾಣ ನಿರ್ವಹಣೆ, ನರಸಿಂಹ ಅವರ ನಿರ್ಮಾಣ ಮೇಲ್ವಿಚಾರಣೆ ಸೀನನಿಗಿದೆ.

(ದಟ್ಸ್ ಕನ್ನಡವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada