ರಾಜಶೇಖರ್ ನಿರ್ದೇಶನದಲ್ಲಿ ಕೋಮಲ್ ಹೊಸ ಚಿತ್ರ
ಈ ವರ್ಷ ಹಾಸ್ಯನಟ ಕೋಮಲ್ ಕುಮಾರ್ ಅವರ ಕೈಯಲ್ಲಿ ಇರುವಷ್ಟುಚಿತ್ರಗಳು ಬಹುಶಃ ಇನ್ಯಾವ ಕನ್ನಡ ನಟನ ಕೈಯಲ್ಲೂ ಇಲ್ಲ ಅನ್ನಿಸುತ್ತದೆ. ಮರ್ಯಾದೆ ರಾಮಣ್ಣ, ಅಶೋಕವನ, ವಾರೆ ವಾ, ಕಳ್ ಮಂಜ, ಸಿಹಿ ಮುತ್ತು, ಸ್ವಾಮೀಜಿ...ಹೀಗೆ ಪಟ್ಟಿ ಬೆಳೆಯುತ್ತದೆ.
ಈಗ ಮತ್ತೊಂದು ಚಿತ್ರಕ್ಕೆ ಕೋಮಲ್ ಸಹಿ ಹಾಕಿದ್ದಾರೆ. ಇನ್ನೂ ಹೆಸರಿಡಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಎಂ ಎಸ್ ರಾಜಶೇಖರ್ ಆಕ್ಷನ್, ಕಟ್ ಹೇಳಲಿದ್ದಾರೆ. ಕುಪ್ಪುಸ್ವಾಮಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ನಾಯಕಿ ಸೇರಿದಂತೆ ಚಿತ್ರದ ಉಳಿದ ಕಲಾವಿದರು ಹಾಗೂ ತಾಂತ್ರಿಕ ಬಳಗ ಆಯ್ಕೆ ಇನ್ನಷ್ಟೆ ನಡೆಯಬೇಕಾಗಿದೆ.
ನಿರ್ದೇಶಕ ರಾಜಶೇಖರ್ ಅವರು ಈ ಹಿಂದೆ ಅಣ್ಣಾವ್ರ 'ಅನುರಾಗ ಅರಳಿತು', 'ಧ್ರುವತಾರೆ', ರೆಬಲ್ ಸ್ಟಾರ್ ಅಂಬರೀಷ್ ಅವರ 'ಹೃದಯ ಹಾಡಿತು', 'ಗಂಡು ಸಿಡಿಗುಂಡು' ಹಾಗೂ 'ಮಣ್ಣಿನ ದೋಣಿ', ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ರಥಸಪ್ತಮಿ', 'ಮನಮೆಚ್ಚಿದ ಹುಡುಗಿ' ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಕೋಮಲ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಡಿಸೆಂಬರ್ 15ರಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.


Click it and Unblock the Notifications











