"ಏಯ್ ಯೋಚ್ನೆ ಮಾಡ್ರಯ್ಯಾ.. ಬದುಕಿದ್ರೆ ಇನ್ನೊಂದ್ ಸಲ ನೋಡ್ತೀರಾ"; ದರ್ಶನ್ ಹೇಳಿಕೆ ವೈರಲ್
ಆರ್‌ಸಿಬಿ ಮೊದಲ ಬಾರಿ ಕಪ್ ಗೆದ್ದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಸ್ಟೇಡಿಯಂ ಒಳಗೆ ಹೋಗಲು ಉಂಟಾದ ನೂಕುನುಗ್ಗಲಿನಲ್ಲಿ ಕೆಲವರು ಗಾಯಗೊಂಡು 11 ಜನ ಕೊನೆಯುಸಿರೆಳೆದರು.
ಅತಿಯಾದ ಅಭಿಮಾನ, ಸರಿಯಾದ ವ್ಯವಸ್ಥೆ ಇಲ್ಲದೇ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಅನ್ಯಾಯವಾಗಿ ಅಮಾಯಕರು ಜೀವ ಕಳೆದುಕೊಳ್ಳುವಂತಾಗಿದೆ. 20ಕ್ಕೂ ಅಧಿಕ ಅಭಿಮಾನಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕನಿಷ್ಟ ನಾಗರಿಕ ಪ್ರಜ್ಞೆಯೂ ಇಲ್ಲದ ನಾವು ಜವಾಬ್ದಾರರಲ್ಲವೇ ಎಂದು ನಟ ಕಿಶೋರ್ ಹೇಳಿದ್ದಾರೆ.

ನಿಜಕ್ಕೂ ಪ್ರಾಣಕ್ಕಿಂತ ಆರ್‌ಸಿಬಿ ಗೆಲುವು ದೊಡ್ಡದಾಯ್ತಾ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಆರ್‌ಸಿಬಿ ತಂಡದ ಆಟಗಾರರನ್ನು ಭೇಟಿ ಮಾಡಲು, ಕೈ ಕುಲುಕಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಅಲ್ಲಿ ಅವಕಾಶ ಇರಲ್ಲಿಲ್ಲ, ತಂಡ ಗೆದ್ದ ಐಪಿಎಲ್ ಟ್ರೋಫಿಯನ್ನು ಮುಟ್ಟುವ ಅವಕಾಶವೂ ಇರಲಿಲ್ಲ, ಎಲ್ಲೋ ದೂರದಲ್ಲಿ ನಿಂತು ನೋಡಲು ಅಷ್ಟೆಲ್ಲಾ ಆತುರ ಏನಿತ್ತು? ಎಂದು ಕೆಲವರು ಕೇಳುತ್ತಿದ್ದಾರೆ. ಮನೆಯಲ್ಲೇ ಟಿವಿಯಲ್ಲಿ ಸಂಭ್ರಮಾಚರಣೆ ನೋಡಬಹುದಿತ್ತು. ಲಕ್ಷಾಂತರ ಜನ ಅಲ್ಲಿಗೆ ಹೋಗುವ ಅವಶ್ಯಕತೆ ಇರಲಿಲ್ಲ. ಇನ್ನು ಸರ್ಕಾರ ಕೂಡ ಆತುರದಲ್ಲಿ ಕಾರ್ಯಕ್ರಮ ಆಯೋಜಿಸಿ ಎಡವಟ್ಟು ಮಾಡಿದೆ ಎನ್ನುವ ಆರೋಪ ಕೇಳಿಬರ್ತಿದೆ.
ಭೀಕರ ಕಾಲ್ತುಳಿತ ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಹಿಂದೆ ನೀಡಿದ್ದ ಹೇಳಿಕೆಯೊಂದು ವೈರಲ್ ಆಗುತ್ತಿದೆ. ಅಭಿಮಾನ ಅಮಲಿನಲ್ಲಿ ಹುಚ್ಚಾಟ ಬೇಡ ಎನ್ನುವ ಅರ್ಥದಲ್ಲಿ ದರ್ಶನ್ ಮಾತನಾಡಿದ್ದರು. ಹುಬ್ಬಳ್ಳಿಯಲ್ಲಿ ನಡೆದಿದ್ದ 'ರಾಬರ್ಟ್' ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ನಟ ದರ್ಶನ್ ಮಾತನಾಡಿದ್ದರು. ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದರು. ಸಾಮಾನ್ಯವಾಗಿ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ಅವರ ಕಾರ್ ಅನ್ನು ಹಿಂಬಾಲಿಸುವ ಪ್ರಯತ್ನ ಮಾಡುತ್ತಾರೆ. ಇಂತಹ ಸಮಯದಲ್ಲಿ ಅಪಾಯ ಎದುರಾಗುವ ಸಂಭವ ಹೆಚ್ಚಾಗಿರುತ್ತದೆ. ಇದನ್ನೇ ಮನಗಂಡು ದರ್ಶನ್ ಅಂದು ಮಾತನಾಡಿದ್ದರು. ನಿಮ್ಮ ಜೀವ ಮುಖ್ಯ, ನಿಮ್ಮ ಮನೆಗೆ ನೀವೇ ಆಧಾರಸ್ತಂಭ ಎಂದಿದ್ದರು.
ದರ್ಶನ್ ಮಾತನಾಡಿ "ಏಯ್.. ಯೋಚ್ನೆ ಮಾಡ್ರಯ್ಯ. ಬದುಕಿದ್ರೆ ಇನ್ನೊಂದು ಸಲ ನೋಡ್ತೀರಾ. ನನ್ನ ನೋಡದೇ ಇದ್ದರೂ ತೊಂದರೆ ಇಲ್ಲ. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇರ್ತಾರೆ. ಆಗತಾನೇ ಮದುವೆ ಮಾಡಿಕೊಂಡ ಗಂಡ-ಹೆಂಡತಿ ನೀವಾಗಿರುತ್ತೀರಿ. ಆಗತಾನೇ ಹುಟ್ಟಿದ ಮಗು ಇರುತ್ತದೆ. ನಿಮಗೇನಾದರೂ ಹೆಚ್ಚು ಕಮ್ಮಿ ಆದ್ರೆ ಸಾಯೋತನಕ ನಿಮ್ಮ ಮನೆಯವ್ರು ನನ್ನನ್ನ ದೂಷಿಸುತ್ತಾರೆ. ಇದು ನಿಮಗೆ ಇಷ್ಟನಾ?" ಎಂದು ದರ್ಶನ್ ಪ್ರಶ್ನಿಸಿದ್ದರು.
ಸದ್ಯ ನಿನ್ನೆ(ಜೂನ್ 4) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗೆ ಹೋದವರ ಸ್ಥಿತಿ ಕೂಡ ಹೀಗೆ ಆಗಿದೆ. ಅನ್ಯಾಯವಾಗಿ ಜೀವ ಕಳೆದುಕೊಳ್ಳುವಂತಾಗಿದೆ. ಅಪ್ಪ ಅಮ್ಮನನ್ನು, ಹೆಂಡತಿ ಮಕ್ಕಳನ್ನು ಅನಾಥರನ್ನಾಗಿ ಪ್ರಾಣಿ ಬಿಟ್ಟವರು ಇದ್ದಾರೆ. ನಾಲ್ವರು ಮಹಿಳೆಯರು ಕೂಡ ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ.
ಕಾಲ್ತುಳಿದಲ್ಲಿ ಜೀವ ಕಳೆದುಕೊಂಡ ಒಬ್ಬೊಬ್ಬರದ್ದು ಕರಳು ಹಿಂಡುವ ಕಥೆಗಳು. ಕೆಲಸಕ್ಕೆ ರಜೆ ಹಾಕಿ ಸಂಭ್ರಮಾಚರಣೆಗೆ ಬಂದಿದ್ದ ಇಂಜಿನಿಯರ್ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಟಿಸಿ ತರಲು ಬಂದಿದ್ದ ವ್ಯಕ್ತಿ ಸಾಯುವಂತಾಗಿದೆ. ಇನ್ನು ಪತಿ ಮುಂದೆಯೇ ಪತ್ನಿ ಪ್ರಾಣ ಬಿಟ್ಟಿದ್ದಾರೆ. ಹೆಣ್ಣು ನೋಡಲು ಹೋದವನು ಕೊನೆಗೆ ಹೆಣವಾಗಿದ್ದಾನೆ. ಒಟ್ಟಿನಲ್ಲಿ ಪ್ರಾಣ ಹೋದ ಮೇಲೆ ಯಾರನ್ನು ದೂಷಿಸಿ ಏನು ಪ್ರಯೋಜನ. ಹೋದ ಜೀವ ಮತ್ತೆ ಮರಳಿ ಬರುವುದಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಅತಿಯಾದ ಅಭಿಮಾನ ಬೇಡವೇ ಬೇಡ.


Click it and Unblock the Notifications











