ಗೀತಪ್ರಿಯರ ಬೆಳ್ಳಿಹೆಜ್ಜೆ ಗುರುತು ಹಿಡಿದು

ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದಲ್ಲಿ ಶನಿವಾರ ಆಯೋಜಿಸಿದ್ದ 'ಬೆಳ್ಳಿ ಹೆಜ್ಜೆ-ದಿವ್ಯ ಚೇತನಗಳೊಡನೆ ಮುಖಾಮುಖಿ' ಮಾಲಿಕೆಯಲ್ಲಿ ಜನಪ್ರಿಯ ಗೀತ ರಚನೆಕಾರ ಗೀತಪ್ರಿಯ ತಮ್ಮ ಸಿನಿಮಾ ಬದುಕನ್ನು ಹಂಚಿಕೊಂಡಿದ್ದು ಹೀಗೆ.
'ಚಿಕ್ಕವನಿರುವಾಗ ಕವಿತೆ ಬರೆಯುತ್ತಿದ್ದೆ. ಅಪ್ಪ ಕುದುರೆ ಸವಾರರಾಗಿದ್ದರು. ನನ್ನಸಾಹಿತ್ಯಾಸಕ್ತಿ ನೋಡಿದ ಅಪ್ಪ, ಬೆಳ್ಳಾವೆ ನರಹರಿ ಶಾಸ್ತ್ರಿಗಳ ಬಳಿ ಕರೆದೊಯ್ದು ,ಇವರು ನಿನಗೆ ಗುರುಗಳು ಅಂದರು. ವೈ.ವಿ. ರಾವ್ ಹಾಗೂ ವಿಜಯಭಾಸ್ಕರ್ ನನ್ನನ್ನು ಬೆಳೆಸಿದ ಗುರುಗಳು. ಹೋಟೆಲ್ ಕೆಲಸದಲ್ಲಿ 35 ರೂ. ಸಂಬಳ ಬರುತ್ತಿತ್ತು. 40 ರೂ. ಕೊಡುತ್ತೇನೆ; ನನ್ನ ಜತೆಗೇ ಇದ್ದುಬಿಡು ಎಂದು ವಿಜಯಭಾಸ್ಕರ್ ಹೇಳಿದರು.
ಅವರೊಂದಿಗೆ ಮದ್ರಾಸ್‌ಗೆ ಹೋಗಿ, ಚಿತ್ರರಂಗದಲ್ಲಿ ಸಕ್ರಿಯನಾದೆ. ಅನೇಕ ಅವಕಾಶಗಳು ಬಂದವು. ಆರಂಭದಲ್ಲಿ ಹಾಡು ಬರೆದು ನಂತರ ನಟ, ನಿರ್ದೇಶಕನಾಗಿ ಅನೇಕ ಚಿತ್ರ ಮಾಡಿ ಯಶಸ್ಸು ಕಂಡೆ'. 'ನಿರ್ದೇಶಿಸಿದ ಬಹಳಷ್ಟು ಚಿತ್ರಗಳು ಹಿಟ್ ಆದವು. ಆದರೆ, ಜನತೆ ನನ್ನನ್ನು ಗೀತರಚನೆಕಾರ ಎಂದು ಗುರುತಿಸುತ್ತಾರೆಯೇ ಹೊರತು ನಿರ್ದೇಶಕ ಎಂದಲ್ಲ. ಜೀವನದಲ್ಲಿ ಬಹಳ ಕಷ್ಟ ಅನುಭವಿಸಿದವನು.
ಈ ಅನುಭವದ ಹಿನ್ನೆಲೆಯಲ್ಲಿ ಅಂಥ ಹಾಡುಗಳನ್ನು ಬರೆದೆ. ಸಂಕಲನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೆ ಉತ್ತಮ ನಿರ್ದೇಶಕನಾಗಲು ಸಾಧ್ಯವಿಲ್ಲ. ಕಾದಂಬರಿಗಳನ್ನು ಸಿನಿಮಾ ಮಾಡುವುದು ಕೂಡಾ ಸವಾಲಿನ ಕೆಲಸ. ಸಿನಿಮಾದಲ್ಲಿ ಎಲ್ಲರೂ ಸಹಕಾರ ನೀಡುತ್ತಿದ್ದರು. ಹೀಗಾಗಿ, ಈ ಹಂತಕ್ಕೆ ಬೆಳೆದೆ' ಎಂದು ವಿವರಿಸಿದರು. ಅಕಾಡೆಮಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಉಪಸ್ಥಿತರಿದ್ದರು.


Click it and Unblock the Notifications











