ಕಳ್ಳಮಂಜ ಕೋಮಲ್ ಈಗ ಮರ್ಯಾದೆ ರಾಮಣ್ಣ
'ಕಳ್ ಮಂಜ' ಕೋಮಲ್ ಈಗ 'ಮರ್ಯಾದೆ ರಾಮಣ್ಣ'ನಾಗಲು ಹೊರಟಿದ್ದಾರೆ. ಅಂದರೆ ಮುಂದಿನ ಚಿತ್ರಕ್ಕೆ 'ಮರ್ಯಾದೆ ರಾಮಣ್ಣ' ಎಂದು ಹೆಸರಿಡಲಾಗಿದೆ. ಅಂದಹಾಗೆ ಇದು ತೆಲುಗಿನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ 'ಮರ್ಯಾದಾ ರಾಮನ್ನ' ಚಿತ್ರದ ರೀಮೇಕ್.
ಮತ್ತೆ ರೀಮೇಕಾ ಎಂದು ಮೂಗು ಮುರಿಯಬೇಡಿ. ಇದು ರೀಮೇಕ್ ಚಿತ್ರವಾದರೂ ಕಥೆ ಒಂಥರಾ ಭಿನ್ನವಾಗಿದೆ. ತೆಲುಗಿನಲ್ಲಿ ಹಾಸ್ಯನಟ ಸುನಿಲ್ ಮತ್ತು ಸಲೋನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರವನ್ನು 'ಮಗಧೀರ' ಖ್ಯಾತಿಯ ರಾಜಮೌಳಿ ನಿರ್ದೇಶಿಸಿದ್ದರು. ಈಗ ಇದೇ ಚಿತ್ರವನ್ನು ನಿರ್ದೇಶಕ ಗುರುಪ್ರಸಾದ್ ಕನ್ನಡ ತರುತ್ತಿದ್ದಾರೆ.
ಗುರುಪ್ರಸಾದ್ ಎಂದರೆ 'ಮಠ' ಖ್ಯಾತಿಯ ನಿರ್ದೇಶಕರಲ್ಲ ಎಂಬುದು ನಿಮ್ಮ ಗಮನಕ್ಕಿರಲಿರಲಿ. ಇವರು 'ಕುಸುಮ' ಖ್ಯಾತಿಯ ಗುರುಪ್ರಸಾದ್. ಕುಮಾರೇಶ್ ಬಾಬು ಎಂಬುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ 'ಕಳ್ ಮಂಜ' ಚಿತ್ರದಲ್ಲಿ ಬಿಜಿಯಾಗಿರುವ ಕೋಮಲ್ ಅದು ಮುಗಿದ ಕೂಡಲೆ ಮರ್ಯಾದಾ ಪುರುಷರಾಗಲಿದ್ದಾರೆ!
ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದೆ. ಚಿತ್ರದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯಬೇಕಾಗಿದೆ. ಮೂಲ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಕೀರವಾಣಿ ಅವರನ್ನೇ ಕರೆಸಲು ಚಿಂತನೆ ನಡೆದಿದೆ. ಪೂರ್ಣ ಪ್ರಮಾಣದ ನಾಯಕನಾಗಿ ಕೋಮಲ್ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ.


Click it and Unblock the Notifications











