»   » ಮಸಾಲ ಚಿತ್ರಗಳ ನಿರ್ದೇಶಕ ಮತ್ತೆ ಬಂದ

ಮಸಾಲ ಚಿತ್ರಗಳ ನಿರ್ದೇಶಕ ಮತ್ತೆ ಬಂದ

Subscribe to Filmibeat Kannada

ಈ ಮುಂಚಿನ ಚಿತ್ರಗಳು ತೋಪೆದ್ದ ಪರಿಣಾಮ ನಿರ್ಮಾಪಕರಾಗಿ, ನಿರ್ಮಾಣದ ಮೇಲ್ವಿಚಾರಕರಾಗಿ ತಮ್ಮ ಇನ್ನಿಂಗ್ಸ್ ಆರಂಭಿಸಿದ ದಯಾಳ್ ಯೋಗರಾಜ ಭಟ್ಟರ ಸಹವಾಸದಿಂದ 'ಗಾಳಿಪಟ' ಚಿತ್ರವನ್ನು ಯಶಸ್ವಿಗೊಳಿಸಿದ ಖುಷಿಯಲ್ಲಿದ್ದಾರೆ. ಭಟ್ಟರ ಸಹವಾಸದಲ್ಲಿದ್ದರಿಂದಲೋ ಏನೋ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅವರ ಮುಂಬರುವ ಚಿತ್ರಕ್ಕೆ 'ಸರ್ಕಸ್' ಎಂದು ಹೆಸರಿಟ್ಟಿದ್ದಾರೆ.

ಅದಕ್ಕೆ ಅಡಿಬರಹ 'ನೋಡಿ, ಮಜಾ ಮಾಡಿ' ಎಂದು ನೀಡಿದ್ದಾರೆ. 'ಮಸಾಲ', 'ಬಾ ಬಾರೋ ರಸಿಕ' ,'ಯಶವಂತ್' ,'ಸಖ ಸಖಿ'ಮೊದಲಾದ ರಸಿಕತನದ ಚಿತ್ರಗಳನ್ನು ನಿರ್ದೇಶಿಸಿದ ಅನುಭವ ಇರುವ 'ಗಾಳಿಪಟ' ಚಿತ್ರದ ನಿರ್ಮಾಪಕ ದಯಾಳ್ ಮತ್ತೆ ನಿರ್ದೇಶನದತ್ತ ಮುಖ ಮಾಡಿರುವುದು ಉದ್ಯಮದಲ್ಲಿ ಕುತೂಹಲ ಮೂಡಿಸಿದೆ.

ಇತ್ತೀಚೆಗೆ 'ಮೇಘವೇ ಮೇಘವೇ' ಚಿತ್ರದ ಆಡಿಯೋ ಕ್ಯಾಸೆಟ್ ಮೋಡಗಳ ನಡುವೆ ವಿಭಿನ್ನ ರೀತಿಯಲ್ಲಿ ಆಗಿದ್ದು ಕಂಡು, ಸೃಜನಶೀಲತೆಯಲ್ಲಿ ನಾನೇನು ಕಮ್ಮಿ ಎಂದು ದಯಾಳ್ ಅವರು 'ಸರ್ಕಸ್' ಚಿತ್ರದ ಮುಹೂರ್ತವನ್ನು 'ರೈಲಿನಲ್ಲಿ' ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಇದಕ್ಕೆ ಸಾಕಷ್ಟು ಕಾರಣವೂ ಇದೆ. 'ಸರ್ಕಸ್' ಚಿತ್ರದಲ್ಲಿ ರೈಲು ಸಹ ಪ್ರಮುಖ ಪಾತ್ರ ವಹಿಸಲಿದೆಯಂತೆ. ಸಾಲದಕ್ಕೆ 'ಸರ್ಕಸ್'ನ ಶೇ. 75 ಭಾಗದ ಚಿತ್ರೀಕರಣ ರೈಲಿನಲ್ಲೇ ನಡೆಯಲಿದೆ. ಏಪ್ರಿಲ್ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆಗಳಿದೆ. 'ಮುಂಗಾರು ಮಳೆ' ಖ್ಯಾತಿಯ ಯೋಗರಾಜ ಭಟ್ಟರು ಈ ಚಿತ್ರಕ್ಕೆ ಚಿತ್ರಕತೆ ಬರೆಯಲಿದ್ದಾರೆ. ನಾಯಕ ಸ್ಥಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಒಪ್ಪಿಸಲು 'ಸರ್ಕಸ್' ಮಾಡಲಾಗುತ್ತಿದೆಯಂತೆ. ಒಪ್ಪುವ ಸಾಧ್ಯತೆಯಿದೆ ಎನ್ನುತ್ತಾರೆ ದಯಾಳ್.

(ದಟ್ಸ್ ಕನ್ನಡಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada