ಹ್ಯಾಟ್ರಿಕ್ ಹೀರೋ ಆರೋಗ್ಯದಲ್ಲಿ ಏರುಪೇರು
'ಜೋಗಯ್ಯ' ಮೊದಲ ಹಂತದ ಚಿತ್ರೀಕರಣದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಈಗಷ್ಟೇ ಚೇತರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಮೈಸೂರಿನ ಕೊಳಗೇರಿಯೊಂದರಲ್ಲಿ ಸತತ ಇಪ್ಪತ್ತು ದಿನಗಳ ಕಾಲ ನಡೆದ ಚಿತ್ರೀಕರಣದಿಂದ ತಮ್ಮ್ಮ ಆರೋಗ್ಯ ಹದಗೆಟ್ಟಿತ್ತು ಎಂದು ಅವರು ತಿಳಿಸಿದ್ದಾರೆ.
ಕೊಳಗೇರಿಯಾದ ಕಾರಣ ಅಲ್ಲಿ ವಿಪರೀತ ಸೊಳ್ಳೆಗಳ ಹಾವಳಿ ಇತ್ತು. ಸೊಳ್ಳೆಗಳಿಂದ ಪಾರಾಗಲು ಸಾಕಷ್ಟು ಮುಂಜಾಗ್ರತ್ರೆ ವಹಿಸಿದ್ದರೂ ಪ್ರಯೋಜನವಾಗಲಿಲ್ಲ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಪಾರುಪತ್ಯ ಅಧಿಕವಾಗಿ ನಿಯಂತ್ರಣ ಕಷ್ಟವಾಗಿತ್ತು. ಒಟ್ಟಿನಲ್ಲಿ ಡೆಂಗ್ಯೂ ಜ್ವರದಿಂದ ಪಾರಾಗಿದ್ದೇನೆ ಎಂದು ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
'ಜೋಗಯ್ಯ' ಎರಡನೆ ಹಂತದಚಿತ್ರೀಕರಣ ಮುಂಬೈನಲ್ಲಿ ನಡೆಯಲಿದೆ. ಬಳಿಕ ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ಪ್ರೇಮ್ ಸ್ವಂತ ಲಾಂಛನದಲ್ಲಿ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ. ಭಾರಿ ಜಜೆಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾರಣ ಸಾಕಷ್ಟು ಕುತೂಹಲ ಮನೆ ಮಾಡಿದೆ.


Click it and Unblock the Notifications











