twitter
    For Quick Alerts
    ALLOW NOTIFICATIONS  
    For Daily Alerts

    ಜಯಂತ್ ಕಾಯ್ಕಿಣಿಗೆ ಪ್ರೇಮಿಗಳ ಕಾಟ!

    By Rajendra
    |

    ಜಯಂತ್ ಕಾಯ್ಕಿಣಿ ಎಂದರೆ ಏನೋ ಒಂದು ಸಂಚಲನ. ಎಷ್ಟೇ ಆಗಲಿ ಅವರು ಸರಳ, ಸುಂದರ 'ಹನಿ' ಗವನಗಳಿಂದ ಮಳೆಗರೆದವರು. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದಂತೆ ಅವರ ಸಾಹಿತ್ಯ ಪ್ರೇಕ್ಷಕರನ್ನು ಕಾಡುತ್ತದೆ. ಒಬ್ಬ ಗೀತ ಸಾಹಿತಿಗೆ ಇದಕ್ಕಿಂತಲೂ ಬಹುಮಾನ ಬೇಕೆ?

    ಇಷ್ಟೊಂದು ಜನಪ್ರಿಯತೆ ಗಳಿಸಿದ ಗೀತಸಾಹಿತಿಗೆ ಈಗ ಪ್ರೇಮಿಗಳ ಕಾಟ! ಅಂದರೆ ಅವರ ಹಾಡುಗಳನ್ನು ಸಿಕ್ಕಾಪಟ್ಟೆ ಇಷ್ಟಪಡುವವರ ಕಾಟ. "ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ" ಎಂದು ಬರೆದ ಜಯಂತ್ ಕಾಯ್ಕಿಣಿಗೆ ಹುಚ್ಚು ಪ್ರೇಮಿಗಳು ಚುಚ್ಚು ಮಾತುಗಳಿಂದ ಕಿವಿ ಕಚ್ಚುತ್ತಿದ್ದಾರೆ.

    ಹೊತ್ತಲ್ಲದ ಹೊತ್ತಿನಲ್ಲಿ ಫೋನ್ ಮಾಡುವ ಈ 'ಗುಂಡು ಪ್ರಿಯ' ಅಭಿಮಾನಿಗಳು ಅವರನ್ನು ಗೋಳು ಹೋಯ್ದುಕೊಳ್ಳುತ್ತಿದ್ದಾರೆ. "ನನ್ನ ಕತೆಯಲ್ಲಾ ನಿಮ್ಮ ಹಾಡಲ್ಲಿ ಹೇಳ್ಬಿಟ್ಟಿದ್ದೀರಲ್ಲಾ ಸಾರ್. ಇಡೀ ನನ್ನ ಜೀವನವನ್ನೇ ಬಿಚ್ಚಿಟ್ಟಿದ್ದೀರಾ. ನನ್ನ ಹೃದಯಕ್ಕೆ ಚೂರಿ ಹಾಕಿದ್ದೀರಾ" ಎನ್ನುತ್ತಿದ್ದರೆ ಜಯಂತ್ ಏನು ಮಾಡಲು ಸಾಧ್ಯ ಹೇಳಿ?

    ಶೀಘ್ರದಲ್ಲೆ ಪುಸ್ತಕ ರೂಪದಲ್ಲಿ ಜಯಂತ್ ಹಾಡುಗಳ ಸಂಕಲನ ಬರಲಿದೆ
    ಇನ್ನೇನು ಮಾಡ್ತಾರೆ ಸುಮ್ಮನೆ ಫೋನ್ ಕಟ್ ಮಾಡಿ ಸುಮ್ಮನಾಗುತ್ತಾರೆ ಅಷ್ಟೆ. ಅವರ ಅಭಿಮಾನಕ್ಕೆ ಜಯಂತ್ ಸುಸ್ತಾಗಿದ್ದಾರೆ. ಈಗ ಅವರಿಂದ ಫೋನ್ ಬಂದರೂ ಅವರು ಸ್ವೀಕರಿಸುವುದಿಲ್ಲ. ಅವರ ಮೊಬೈಲ್ ನಲ್ಲಿ ಫ್ಯಾನ್ 1, ಫ್ಯಾನ್ 2 ಎಂದು ಸೇವ್ ಆಗಿರುವ ನಂಬರ್ ಗಳಿಂದ ಕರೆಬಂದರೆ ಸಾಕು ಸುಮ್ಮನೆ ಸ್ವಿಚ್ ಆಫ್ ಮಾಡುತ್ತಾರೆ.

    ಜಯಂತ್ ಬಳಸುವ ಒಂದೊಂದು ಪದದಲ್ಲೂ ಜೀವಂತಿಕೆ ಇದೆ. ಹೊಸ ಹುರುಪಿರುತ್ತದೆ. ಸಾಹಿತ್ಯದಲ್ಲಿನ ಲಾಲಿತ್ಯ, ಗಾಂಭೀರ್ಯ, ಬೆರಗು, ಭಾವ ತೀವ್ರತೆ ಪ್ರೇಕ್ಷಕರನ್ನು ಇಷ್ಟು ಕಾಡಿದೆ ಎಂದರೆ ಒಬ್ಬ ನಟ, ನಟಿಗೆ ಸಿಕ್ಕಷ್ಟೆ ಸ್ಥಾನಮಾನ ಜಯಂತ್ ಅವರಿಗೂ ಸಿಕ್ಕಂತಾಗಿದೆ. ಜಯಂತ್ ಜನಪ್ರಿಯತೆಗೆ ಇದೇ ಸಾಕ್ಷಿ.

    ಪುಸ್ತಕ ರೂಪದಲ್ಲಿ ಜಯಂತ್ ಹಾಡುಗಳು: ಈ 'ಮಧುರಗೀತೆಗಳ ಸರದಾರ'ನಿಗೆ ಎರಡನೆ ಬಾರಿ ಫಿಲಂಫೇರ್ ಪ್ರಶಸ್ತಿ ವರಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಜಯಂತ್ ಕಾಯ್ಕಿಣಿ ಬರೆದ ಹಾಡುಗಳು ಜನಮಾನಸವನ್ನು ತಲುಪಿವೆ. ಅವರು ಈಗ ಅಷ್ಟು ಹಾಡುಗಳನ್ನು ಪುಸ್ತಕ ರೂಪದಲ್ಲಿ ತರುವ ಪ್ರಯತ್ನ ಮಾಡುತ್ತಿದ್ದಾರೆ.

    ಈ ಬಗ್ಗೆ ಜಯಂತ್ ಮಾತನಾಡುತ್ತಾ, ಇದುವರೆಗೂ ನಾನು 120 ಹಾಡುಗಳನ್ನು ಬರೆದಿದ್ದೇನೆ. ಇವುಗಳಲ್ಲಿ 20 ಹಾಡುಗಳುಳ್ಳ ಚಿತ್ರಗಳು ಇನ್ನೂ ಬಿಡುಗಡೆಯಾಗಿಲ್ಲ. ಈ ಹಾಡುಗಳನ್ನು ನನ್ನ ಅಭಿಮಾನಿಗಳು ಕೇಳಿಲ್ಲ. ಈ ಹಾಡುಗಳನ್ನು ಹೊರತುಪಡಿಸಿ ಒಟ್ಟು 100 ಹಾಡುಗಳ ಸಂಕಲವನ್ನು ತರುತ್ತಿದ್ದೇನೆ ಎನ್ನುತ್ತಾರೆ.

    ಬಹುಶಃ ಈ ಪುಸ್ತಕ ಇನ್ನೊಂದು ತಿಂಗಳಲ್ಲಿ ಓದುಗರ ಕೈಸೇರಬಹುದು. ಇದರೊಂದಿಗೆ ಜಯಂತ್ ಕಾಯ್ಕಿಣಿ ಇನ್ನೂ ನಾಲ್ಕು ಪುಸ್ತಕಗಳನ್ನು ಹೊರತರುತ್ತಿದ್ದಾರೆ. ಕಾಯ್ಕಿಣಿ ಅವರ ಹಾಡುಗಳನ್ನು ಓದಿ ಆನಂದಿಸುವ ಸರದಿ ಓದುಗರದಾಗಲಿ.

    'ಮನಸಾರೆ' ಚಿತ್ರದ "ಎಲ್ಲೋ ಮಳೆಯಾಗಿದೆಯೆಂದು..." ಹಾಡಿಗೆ ಈ ಬಾರಿ ಫಿಲಂಫೇರ್ ಶ್ರೇಷ್ಠ ಸಾಹಿತ್ಯ ಪ್ರಶಸ್ತಿ ಒಲಿದಿದೆ. ಕನ್ನಡದಲ್ಲಿ ಮಧುರ ಗೀತೆಗಳ ಯುಗ ಅಂತ್ಯವಾಯಿತು ಎಂದುಕೊಳ್ಳುವಾಗಲೆ ಜಯಂತ್ ಕಾಯ್ಕಿಣಿ ಮೂಲಕ ಮತ್ತೆ ಆರಂಭವಾಗಿದೆ ಅದು ಹಾಗೆ ಮುಂದುವರಿಯಲಿ.

    Wednesday, August 11, 2010, 18:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X