»   »  ಚಿರಂಜೀವಿಯ ಚೊಚ್ಚಲ ಪ್ರಯತ್ನ 'ವಾಯುಪುತ್ರ'

ಚಿರಂಜೀವಿಯ ಚೊಚ್ಚಲ ಪ್ರಯತ್ನ 'ವಾಯುಪುತ್ರ'

Subscribe to Filmibeat Kannada

ಸುದೀರ್ಘ ಸಮಯದ ಬಳಿಕ ಚಿರಂಜೀವಿ ಸರ್ಜಾ ಅವರ 'ವಾಯುಪುತ್ರ' ತೆರೆಗೆ ಬರಲು ಸಿದ್ಧವಾಗಿದೆ. ಎರಡು ವರ್ಷಗಳ ಹಿಂದೆ ವಾಯುಪುತ್ರ ಸೆಟ್ಟೇರಿದಾಗ ಚಿರಂಜೀವಿ ಕನಸಿಗೆ ರೆಕ್ಕೆಪುಕ್ಕ ಮೂಡಿತ್ತು. ವಾಯುಪುತ್ರ ಮುಹೂರ್ತಕ್ಕೆ ಚಿರಂಜೀವಿಯ ಬಾಲ್ಯದ ಗೆಳೆಯ ಪ್ರಜ್ವಲ್ ದೇವರಾಜ್ ಸಹ ಬಂದಿದ್ದರು. ಇಬ್ಬರೂ ಒಟ್ಟಿಗೆ ಕನ್ನಡ ಚಿತ್ರರಂಗಕ್ಕೆ ಆಗ ತಾನೆ ಅಡಿಯಿಟ್ಟಿದ್ದರು.

ಈ ಎರಡು ವರ್ಷಗಳಲ್ಲಿ ಪ್ರಜ್ವಲ್ ದೇವರಾಜ್ ರ ನಾಲ್ಕು ಚಿತ್ರಗಳು ತೆರೆಕಂಡಿವೆ. ಆದರೆ ಚಿರಂಜೀವಿ ಚೊಚ್ಚಲ ನಟನೆಯ 'ವಾಯುಪುತ್ರ' ಜುಲೈನಲ್ಲಿ ಬಿಡುಗಡೆಯಾಗಲಿದೆ. ಈ ಎರಡು ವರ್ಷಗಳಲ್ಲಿ 'ವಾಯುಪುತ್ರ' ಚಿತ್ರ ಹೊರತು ಪಡಿಸಿ ಯಾವುದೇ ಚಿತ್ರವನ್ನೂ ಚಿರಂಜೀವಿ ಒಪ್ಪಿಕೊಳ್ಳದಿರುವುದು ವಿಶೇಷ.

ಈ ಕುರಿತು ಪ್ರತಿಕ್ರಿಯಿಸಿರುವ ಚಿರಂಜೀವಿ, ಚಿತ್ರವೊಂದಕ್ಕೆ ಇಷ್ಟು ಕಾಲಾವಕಾಶ ತೆಗೆದುಕೊಂಡಿದ್ದಕ್ಕೆ ನನಗೇನು ಬೇಜಾರಾಗಿಲ್ಲ. ನನ್ನ ಮೊದಲ ಚಿತ್ರವೇ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಚಿತ್ರವನ್ನು ನಮ್ಮ ಅಂಕಲ್ ಅರ್ಜುನ್ ಸರ್ಜಾ ನಿರ್ಮಿಸುತ್ತಿದ್ದಾರೆ. ಈ ಎರಡು ವರ್ಷಗಳಲ್ಲಿ ನಾನು ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯವನ್ನು ಸ್ಥಿರವಾಗಿ ಕಾಪಾಡಿಕೊಂಡು ಬಂದಿದ್ದೇನೆ. ಇದಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದೆ ಎನ್ನುತ್ತಾರೆ.

ಈ ಎರಡು ವರ್ಷಗಳಲ್ಲಿ ನನ್ನ ತೂಕ ಒಂಚೂರು ಹೆಚ್ಚು ಕಡಿಮೆಯಾಗಿಲ್ಲ. ಇದಕ್ಕಾಗಿ ಸಿಹಿ ತಿಂಡಿ ತಿನಿಸುಗಳಿಂದ ದೂರವಾಗಿದ್ದೆ. ನಿಜಕ್ಕೂ ಇದು ಕಷ್ಟಸಾಧ್ಯ. ಇಷ್ಟೆಲ್ಲಾ ಕಷ್ಟಪಟ್ಟಿದ್ದಕ್ಕೂ ಕೊನೆಗೂ ಸಾರ್ಥಕವಾಗಿದೆ. ಮೊದಲ ಪ್ರಿಂಟ್ ನೋಡಿದಾಗ ಖುಷಿಯಾಯಿತು. ವಾಯುಪುತ್ರ ಉತ್ತಮವಾಗಿ ಮೂಡಿಬಂದಿದೆ ಎನ್ನುತ್ತಾರೆ ಚಿರಂಜೀವಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada