»   » ಮುಂಗಾರುಮಳೆ ಗಣೇಶನಿಗೆ ಕಂಕಣಬಲ

ಮುಂಗಾರುಮಳೆ ಗಣೇಶನಿಗೆ ಕಂಕಣಬಲ

Subscribe to Filmibeat Kannada

ಬೆಂಗಳೂರು, ಫೆ .11: ಕಾಮಿಡಿ ಟೈಂಸ್ ಗಣೇಶ, ಕನ್ನಡ ತೆರೆಯ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮದುವೆ ಇದೇ ಫೆ.18 ರಂದು ನಡೆಯುವುದಾಗಿ ಗುರು ಹಿರಿಯರು ನಿಶ್ಚಯಿಸಿರುತ್ತಾರೆ. ಉಡುಪಿಜಿಲ್ಲೆಯ ಬ್ರಹ್ಮಾವರದ ಒಂದು ದೇವಾಲಯದಲ್ಲಿ ಶಿಲ್ಪಾ ಎಂಬ ಕನ್ಯಾರತ್ನವನ್ನು ಕೈಹಿಡಿಯಲಿದ್ದಾರೆ. ಸರಳ ವಿವಾಹ ಸಮಾರಂಭದಲ್ಲಿ ಆಪ್ತ ಬಂಧುಮಿತ್ರರು ಮಾತ್ರ ಭಾಗವಹಿಸಲಿದ್ದಾರೆ ಎಂದು ದಟ್ಸ್ ಕನ್ನಡಕ್ಕೆ ವಿಶ್ವಸನೀಯವಾಗಿ ಗೊತ್ತಾಗಿದೆ. ಫೆ.23 ರಂದು ನಗರದ ವಿಂಡ್ಸನ್ ಮಾನ್ಯರ್ ಹೋಟೆಲ್ ನಲ್ಲಿ ಆರತಕ್ಷತೆ ನಡೆಯಲಿದೆ.

ವಿಶ್ವಸನೀಯವಾಗಿ ಗೊತ್ತಾಗಿದೆ ಏಕೆಂದರೆ, ನಮ್ಮ ವೆಬ್ ಸೈಟಿನ ಓದುಗರು ಹಾಗೂ ಮಿತ್ರರೂ ಆಗಿರುವ ಗಣೇಶ್ ತಮ್ಮ ಮದುವೆಯ ಆಹ್ವಾನಪತ್ರವನ್ನು ಪತ್ರಿಕೆಗೆ ಕಳಿಸಿರುವುದಿಲ್ಲ. ಅವರ ಹೊಸಬಾಳು ಆನಂದದಿಂದ ಕೂಡಿರಲಿ ಎಂದು ನಮ್ಮ ಆನ್ ಲೈನ್ ಪತ್ರಿಕೆ ಹಾರೈಸುತ್ತದೆ.

ಕಾಮಿಡಿಟೈಮ್ ನಿಂದ ಖ್ಯಾತಿಗೆ ಬಂದ ಗಣೇಶ್ ಅವರು, ತಮ್ಮ ವಿವಾಹದ ಗುಟ್ಟನ್ನು ಯಾರಿಗೂ ಹೇಳಿರಲಿಲ್ಲ. ಇದು ಪ್ರೇಮ ವಿವಾಹವೋ, ಅಥವಾ ಗುರು ಹಿರಿಯರ ನಿಶ್ಚಯವೋ ಎಂಬ ಕೆಟ್ಟ ಕುತೂಹಲ ಅವರ ಅಭಿಮಾನಿ ವಲಯಗಳಲ್ಲಿ ಇದೆ. ಮುಂಗಾರು ಮಳೆ ಗಣೇಶ್ ಅವರ ಆಪ್ತರಲ್ಲಿ ಒಬ್ಬರಾದ ನಿರ್ಮಾಪಕ ಕೆ.ಮಂಜು ಗಣೇಶ್ ಅವರ ಮದುವೆ ವಿಷಯವನ್ನು ಮಾಧ್ಯಮದವರಿಗೆ ಹೊರಗೆಡವಿದವರಲ್ಲಿ ಮೊದಲಿಗರಾಗಿದ್ದಾರೆ.

ಅಂತೂ ವ್ಯಾಲೇಂಟೈನ್ ಡೇ ಗೆ ಮುನ್ನವೇ ಈ ಸುದ್ದಿ ಹೊರಬಿದ್ದಿರುವುದು ಹಲವಾರು ಅಭಿಮಾನಿಗಳಿಗೆ ಅಚ್ಚರಿ, ಸಂಭ್ರಮ ತಂದಿದೆ. ಒಂದು ಮೂಲದ ಪ್ರಕಾರ ಗಣೇಶ್ ಅವರ ಭಾವಿ ಪತ್ನಿ ಶಿಲ್ಪಾ ಗಣೇಶ್ ನಡುವೆ ಎರಡುವರ್ಷಗಳಿಂದ ಒಡನಾಟವಿತ್ತು. ಶಿಲ್ಪಾ ಅವರು ಗಣೇಶ್ ಗೆ ತಾಯಿ ಕಡೆಯಿಂದ ಸಂಬಂಧಿ. ಶಿಲ್ಪಾ ಅವರ ಸ್ನೇಹ ಸಿಂಚನದಿಂದಲೇ ಅಡಕಮಾರನಹಳ್ಳಿಯ ಪೋರನಿಗೆ ಅದೃಷ್ಟ ಒಲಿದು ಬಂತು ಗಾಂಧೀನಗರ ಹುಡುಗರು ಹೇಳುತ್ತಾರೆ.

ಚಿನ್ನದಂಥ ಹುಡುಗ ಗಣೇಶ: ಕಿರುತೆರೆಯಲ್ಲಿ ಮೊದಲು ಕಾಣಿಸಿಕೊಂಡ ಗಣೇಶ್, ಅತ್ತಿಗೆ, ಪಾಪಪಾಂಡು, ಯದ್ವಾತದ್ವಾ, ವಠಾರದಲ್ಲಿ ಉತ್ತಮ ಅಭಿನಯ ನೀಡಿದ್ದರು. ಬೆಳ್ಳೆತೆರೆಯಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡನಂತರ, ಚೆಲ್ಲಾಟ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾದರು. ನಂತರ ಬಂದ ಮುಂಗಾರು ಮಳೆ, ಚೆಲುವಿನ ಚಿತ್ತಾರ, ಹುಡುಗಾಟ, ಕೃಷ್ಣ, ಪ್ರೇಕ್ಷಕರ ಮೆಚ್ಚುಗೆ ಪಾತ್ರವಾದವು. ಸದ್ಯ ಚಿತ್ರಮಂದಿರಗಳಲ್ಲಿ ಇವರ ಅಭಿನಯದ ಗಾಳಿಪಟ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಮ್ಯ ಜತೆ ಬೊಂಬಾಟ್ , ಅರಮನೆ ಸೇರಿದಂತೆ ಹಲವು ಚಿತ್ರಗಳಿಗೆ ಬುಕ್ ಆಗಿರುವ ಗಣೇಶ್ ಇನ್ನೆರಡು ವರ್ಷ ತುಂಬಾ ಬ್ಯುಸಿ.

ಸತತ ಐದು ಹಿಟ್ ಚಿತ್ರಗಳನ್ನು ನೀಡಿ ಯಶಸ್ಸಿನ ಮೆಟ್ಟಲೇರುತ್ತಿರುವ ಗಣೇಶ್ ಅವರು ಈಗಲೂ ತಮ್ಮ ಹಳೆಯ ದಿನಗಳನ್ನು ಮರೆತಿಲ್ಲ. ಎಂದಿನ ಮುಗುಳ್ನಗೆಯೊಂದಿಗೆ ಹೊಸ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಇವರ ಬಾಳು ಹಸನಾಗಿರಲಿ ಎಂದು ನಮ್ಮ ತಂಡದ ಶುಭ ಹಾರೈಕೆ.ಇವರ ವಿವಾಹಕ್ಕೆ ನೀವು ಶುಭ ಹಾರೈಸಿ.

(ದಟ್ಸ್‌ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada