»   » ಸರ್ಕಾರದ ವಿರುದ್ಧ ಪಾರ್ವತಮ್ಮ ರಾಜ್‌ಕುಮಾರ್‌ ಕಿಡಿ!

ಸರ್ಕಾರದ ವಿರುದ್ಧ ಪಾರ್ವತಮ್ಮ ರಾಜ್‌ಕುಮಾರ್‌ ಕಿಡಿ!

Posted By:
Subscribe to Filmibeat Kannada


ಬೆಂಗಳೂರು : ಡಾ. ರಾಜ್‌ ಅಗಲಿ ಶುಕ್ರವಾರ(ಏ.12)ಕ್ಕೆ ಒಂದು ವರ್ಷ. ಆದರೆ ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್‌ ಸಮಾಧಿಯನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸುವ ಕೆಲಸ ಇನ್ನೂ ಆರಂಭಗೊಂಡಿಲ್ಲ.

ನಾಡಿನ ಹಿರಿಯ ಕಲಾವಿದರ ಬಗ್ಗೆ ಸರ್ಕಾರ ಅಸಡ್ಡೆ ತೋರುತ್ತಿದೆ ಎಂಬುದು ರಾಜ್‌ ಅಭಿಮಾನಿಗಳು ಮತ್ತು ಅವರ ಕುಟುಂಬದವರ ದೂರು. ಈ ಬಗ್ಗೆ ಪಾರ್ವತಮ್ಮ ರಾಜ್‌ಕುಮಾರ್‌ ಸುದ್ದಿಗಾರರ ಬಳಿ ಮಾತನಾಡುತ್ತ, ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಕಿಡಿಕಾರಿದರು.

ಮುಖ್ಯಮಂತ್ರಿ ಹೆಚ್‌. ಡಿ. ಕುಮಾರ ಸ್ವಾಮಿ, ರಾಜ್‌ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ 10 ಕೋಟಿ ನೀಡುವುದಾಗಿ ಘೋಷಿಸಿದ್ದರು. ನಂತರ ಬಜೆಟ್‌ನಲ್ಲಿ ಉಪಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ, 3 ಕೋಟಿ ಮಂಜೂರು ಮಾಡಿದ್ದರು. ಆದರೆ ಯಾವುದೂ ಕಾರ್ಯರೂಪಕ್ಕೆ ಇಳಿದಿಲ್ಲ. ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಬೇಸರ ತಂದಿದೆ ಎಂದು ಪಾರ್ವತಮ್ಮ ಹೇಳಿದರು.

ರಾಜ್‌ ಸಮಾಧಿ ಸ್ಮಾರಕದ ಕೆಲಸವನ್ನು ಇನ್ನು 6 ತಿಂಗಳಲ್ಲಿ ಪೂರೈಸುವುದಾಗಿ ಮುಖ್ಯಮಂತ್ರಿಗಳು, ರಾಜ್‌ ಅವರ 11ನೇ ದಿನದ ತಿಥಿ ಸಂದರ್ಭದಲ್ಲಿ ಹೇಳಿದ್ದರು. ಆದರೆ ಒಂದು ಇಂಚು ಸಹ ಕೆಲಸ ಆಗಿಲ್ಲ. ಸರ್ಕಾರ ನಮ್ಮ ಕೈಲಿ ಆಗುವುದಿಲ್ಲ ಎಂದು ಬೇಕಿದ್ದರೆ ಕೈ ತೊಳೆದು ಕೊಳ್ಳಲಿ. ಈ ರೀತಿಯ ಅಸಡ್ಡೆ ತೋರಿಸುವುದು ನಿಜಕ್ಕೂ ಶೋಚನೀಯ ಸಂಗತಿ ಎಂದು ಪಾರ್ವತಮ್ಮ ತೀವ್ರವಾದ ದುಃಖದಿಂದ ಹೇಳಿದರು.

ಸಮಾಧಿ ಸುತ್ತ 5 ಎಕರೆ ಭೂಮಿ ಕೇಳಿ ಅಧಿಕೃತವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ರಾಜ್‌ ಅವರಿಗೆ ಸಂಬಂಧಿಸಿದ ಪುಸ್ತಕಗಳು, ಸಂಗೀತ ಉಪಕರಣಗಳು, ರಾಜ್‌ ನೆನಪಿನ ಚಿತ್ರಗಳು ಹೀಗೆ ಚಿತ್ರರಂಗಕ್ಕೆ ರಾಜ್‌ ಅವರ ಕೊಡುಗೆಯನ್ನು ಇಂದಿನ ಜನತೆಗೆ ಹಾಗೂ ಮುಂದಿನ ಜನರಿಗೂ ಸಾದರಪಡಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಆದರೆ ಸರ್ಕಾರ ನಮ್ಮ ಆಶಯಕ್ಕೆ ಬೆಂಬಲ ನೀಡುತ್ತಿಲ್ಲ. ರಾಜ್‌ ಸ್ಮಾರಕ ಸಮಿತಿಯ ಅಧ್ಯಕ್ಷರೂ ಆದ ಮುಖ್ಯಮಂತ್ರಿಗಳು, ಸಮಿತಿಯ ಯಾವ ಸಭೆಗೂ ಹಾಜರಾಗಿಲ್ಲ ಎಂದು ಪಾರ್ವತಮ್ಮ ತಿಳಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada