»   » ‘ಗುನ್ನ’ ಚಿತ್ರದಿ ಪ್ರೇಕ್ಷಕರಿಗೆ ಸುಗಂಧದ ಹಿತಾನುಭವ!

‘ಗುನ್ನ’ ಚಿತ್ರದಿ ಪ್ರೇಕ್ಷಕರಿಗೆ ಸುಗಂಧದ ಹಿತಾನುಭವ!

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ಎಲ್ಲವೂ ಸರಿಹೊಂದಿದರೆ ಚಿತ್ರ ಯಾವುದೇ ಇರಲಿ, ಪ್ರೇಕ್ಷಕ ದೊರೆಗಳಿಗೆ ಹಿತಾನುಭವಕ್ಕೇನು ಕಡಿಮೆಯಾಗುವುದಿಲ್ಲ! ಹೌದು ನರ್ತಕಿ ಚಿತ್ರಮಂದಿರದಲ್ಲಿ ಗುರುವಾರ(ಮೇ 12) ತೆರೆ ಕಾಣುತ್ತಿರುವ ‘ಗುನ್ನ’ ಚಿತ್ರ ನಿಮ್ಮನ್ನು ಹೊಸ ಅನುಭವಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ.

ಹಾಡುಗಳ ದೃಶ್ಯಗಳಲ್ಲಿ ಕಂಡು ಬರುವ ವಿವಿಧ ಹೂಗಳ ಪರಿಮಳವನ್ನು ನಾಯಕ-ನಾಯಕಿಯರೊಂದಿಗೆ ನೀವೂ ಆಸ್ವಾದಿಸಬಹುದು! ‘ಗುನ್ನ’ಚಿತ್ರವನ್ನು ನರ್ತಕಿ ಚಿತ್ರಮಂದಿರದಲ್ಲಿ ನೋಡುವವರಿಗೆ ಇದೊಂದು ಬೋನಸ್‌. ಏಷ್ಯಾದಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಆಧುನಿಕ ವ್ಯವಸ್ಥೆಯನ್ನು ಕನ್ನಡ ಚಿತ್ರವೊಂದಕ್ಕೆ ಅಳವಡಿಸಲಾಗುತ್ತಿದೆ.

ಡಿಡಿಎಸ್‌ ವ್ಯವಸ್ಥೆ ಕಿವಿಯನ್ನು, ಗ್ರಾಫಿಕ್ಸ್‌ ಕಣ್ಣನ್ನು ಸೆಳೆದರೆ, ಪರಿಮಳ ಮೂಗನ್ನು ತಟ್ಟಲಿದೆ. ಓಲ್‌ಫ್ಯಾಕ್ಷನ್‌ ಮೂವೀಸ್‌ ಎನ್ನಲಾಗುವ ಈ ಪದ್ಧತಿಯ ರೂವಾರಿ ದೆಹಲಿಯ ಐಐಎಂ ನ ಸಂಶೋಧಕ ಪುಷ್ಪ್‌ ಶರ್ಮ. ಥಿಯೇಟರ್‌ ಒಳಗೆ ಹನ್ನೆರಡು ಯಂತ್ರಗಳನ್ನು ಅಳವಡಿಸಿ, ಅವುಗಳ ಮೂಲಕ ಪರಿಮಳವನ್ನು ಹರಡಲಾಗುತ್ತದೆ. ಹಾಡು ಮುಗಿದ ತಕ್ಷಣ, ಅವುಗಳನ್ನು ಮತ್ತೊಂದು ಯಂತ್ರ ಹೀರಿಕೊಳ್ಳಲಿದೆ.

ಈ ವ್ಯವಸ್ಥೆಯಿಂದ ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳಾಗದು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆಂದು ಶರ್ಮ ತಿಳಿಸಿದ್ದಾರೆ. ಒಂದು ಲಕ್ಷ ರೂ. ವೆಚ್ಚದ ಈ ವ್ಯವಸ್ಥೆಯಿಂದ ಚಿತ್ರಗಳಲ್ಲಿ ಬಾಂಬ್‌ಗಳು ಬಂದಾಗ ಕಮಟು ವಾಸನೆ, ಪಾರ್ಕಲ್ಲಿ ಹೂವಿನ ಪರಿಮಳ ಪ್ರೇಕ್ಷಕರಿಗೆ ದಕ್ಕಿ, ಚಿತ್ರದ ನೈಜತೆ ಹೆಚ್ಚಲಿದೆ.

ಗುನ್ನ : ಮಯೂರ್‌ ಮತ್ತು ಚೈತ್ರಾ ಹಳ್ಳಿಕೆರೆ ಜೋಡಿಯಾಗಿ ನಟಿಸಿರುವ ಗುನ್ನ ಚಿತ್ರದಲ್ಲಿ ಸುದೀಪ್‌ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಕಥೆ, ಚಿತ್ರಕಥೆ, ಹಾಡು, ನಿರ್ದೇಶನ ಹೀಗೆ ಸುಮಾರು ಹೊರೆಯನ್ನು ದ್ವಾರ್ಕಿ ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ಸಾ.ರಾ.ಗೋವಿಂದ್‌ ನಿರ್ಮಾಣದ ಚಿತ್ರದ ಬಗ್ಗೆ, ಅದಕ್ಕೂ ಮಿಗಿಲಾಗಿ ಪರಿಮಳದ ವ್ಯವಸ್ಥೆ ಬಗೆಗೆ ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada