»   » ಸಾವನ್ನು ಜಯಿಸಿ ‘ಮುತ್ತಿನ ತೋರಣ’ ಕಟ್ಟುತ್ತಿರುವ ವೈಶಾಲಿ!

ಸಾವನ್ನು ಜಯಿಸಿ ‘ಮುತ್ತಿನ ತೋರಣ’ ಕಟ್ಟುತ್ತಿರುವ ವೈಶಾಲಿ!

Subscribe to Filmibeat Kannada


ದೀರ್ಘ ವಿರಾಮದ ನಂತರ ‘ಮೂಡಲಮನೆ‘ ಖ್ಯಾತಿಯ ನಟಿ-ನಿರ್ದೇಶಕಿ ವೈಶಾಲಿ ಕಾಸರವಳ್ಳಿ, ಮತ್ತೆ ಕಿರುತೆರೆಯಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಲು ಹೊರಟಿದ್ದಾರೆ.

ಅನಾರೋಗ್ಯದಿಂದ ತಿಂಗಳಾನುಗಟ್ಟಲೆ ಹಾಸಿಗೆ ಹಿಡಿದಿದ್ದ ವೈಶಾಲಿ, ಪವಾಡವೋ ಎಂಬಂತೆ ಸಾವನ್ನು ಗೆದ್ದು ನವೋತ್ಸಾಹದಿಂದ ಪುಟಿದೆದ್ದಿದ್ದಾರೆ. ಬಸಂತ್‌ ಕುಮಾರ್‌ಗಾಗಿ ಈಟೀವಿಯಲ್ಲಿ ಅವರು ಹೊಸ ಧಾರಾವಾಹಿ ‘ಮುತ್ತಿನ ತೋರಣ’ ನಿರ್ದೇಶಿಸುತ್ತಿದ್ದಾರೆ.

ಈ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸಂತ್‌ ಕುಮಾರ್‌, ಈ ಯೋಜನೆ ನನಗೆ ಖುಷಿ ನೀಡಿದೆ. ಹಿಂದೆ ನಾನು ಮತ್ತು ಗಿರೀಶ್‌ ಕಾಸರವಳ್ಳಿ ‘ನಾಯಿ ನೆರಳು’ ಮಾಡಿದ್ದೆವು. ಇನ್ನೊಂದು ಚಿತ್ರ ಮಾಡಿಕೊಡಿ ಎಂದು ಕೇಳುತ್ತಲೇ ಇದ್ದೆ. ಈ ಮಧ್ಯೆ ವೈಶಾಲಿ ಕಾಸರವಳ್ಳಿ, ನನ್ನ ಧಾರಾವಾಹಿ ನಿರ್ದೇಶನ ಮಾಡಲು ಮುಂದೆ ಬಂದದ್ದು ಸಮಾಧಾನ ನೀಡಿದೆ. ಧಾರಾವಾಹಿ ಜೂನ್‌ನಿಂದ ಈ ಟೀವಿಯಲ್ಲಿ ಪ್ರಸಾರಗೊಳ್ಳುತ್ತದೆ ಎಂದರು.

ತಮ್ಮ ಧಾರಾವಾಹಿ ಬಗ್ಗೆ ಮಾತನಾಡಿದ ವೈಶಾಲಿ, ಇದು ಸಂಗೀತವನ್ನೇ ಉಸಿರೆಂದು ಭಾವಿಸುವ ಸಂಗೀತ ಶಿಕ್ಷಕನೊಬ್ಬನ ಕತೆಯನ್ನು ಒಳಗೊಂಡಿದೆ. ಅವನ ನಾಲ್ವರು ಪುತ್ರಿಯರಿಗೆ ನಾಲ್ಕು ರಾಗಗಳ ಹೆಸರಿಡಲಾಗಿದೆ. ನಟ ಕೆ.ಎಸ್‌.ಎಲ್‌.ಸ್ವಾಮಿ, ಅನನ್ಯಾ, ಗಿರಿಜಾ ಲೋಕೇಶ್‌, ಮಹಾಲಕ್ಷ್ಮಿ ಮುಖ್ಯಪಾತ್ರದಲ್ಲಿರುತ್ತಾರೆ ಎಂದು ವಿವರಿಸಿದರು.

ಈ ಪಾತ್ರಕ್ಕಾಗಿಯೇ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದೇನೆ ಎಂದು ಕೆ.ಎಸ್‌.ಎಲ್‌.ಸ್ವಾಮಿ ಹೇಳಿದರು. ಇನ್ನೊಂದು ವಿಶೇಷವೆಂದರೆ, ಅವರು 5ಕೆ.ಜಿ. ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರಂತೆ. ವೈದೇಹಿ ಹಾಡು ಬರೆದಿದ್ದು, ಸಂಗೀತ ಕಟ್ಟಿ ಹಾಡಿಗೆ ಜೀವತುಂಬಿದ್ದಾರಂತೆ.

ಈ ಸಂದರ್ಭದಲ್ಲಿ ಸಾಹಿತಿ ಯು.ಆರ್‌.ಅನಂತಮೂರ್ತಿ, ಇನ್ಫೋಸಿಸ್‌ ಸುಧಾಮೂರ್ತಿ, ಗಿರೀಶ್‌ ಕಾಸರವಳ್ಳಿ ಹಾಜರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada