twitter
    For Quick Alerts
    ALLOW NOTIFICATIONS  
    For Daily Alerts

    ರಾಜ್‌ಕುಮಾರ್‌ ‘ಲೆಜೆಂಡ್ಸ್‌’ ಕ್ಯಾಸೆಟ್‌ ವಿಮರ್ಶೆ

    By ಎಸ್‌.ಆರ್‌.ರಾಮಕೃಷ್ಣ
    |

    ಡಾ.ರಾಜ್‌ಕುಮಾರ್‌
    'ಲೆಜೆಂಡ್ಸ್‌'
    ಎಚ್‌ಎಂವಿ
    250 ರುಪಾಯಿ (5 ಕ್ಯಾಸೆಟ್‌ಗಳು)

    ಇವತ್ತಿನ ಎಷ್ಟು ನಟರು ಹಾಡುತ್ತಾರೆ, ಹೇಳಿ? ಬಹುಶಃ ಯಾರೊಬ್ಬರೂ ಇಲ್ಲ. ಹೊಸತನ ಇರಲಿ ಅಂತ ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ನಾಯಕ ಹಾಡೋದು ಉಂಟು. ಅಂಥವರಿಗೆ ಸಂಗೀತದ ಸಾಣೆ ಸಿಕ್ಕಿರುವುದಿಲ್ಲ , ರಾಗ ವ್ಯಾಕರಣದ ಗಂಧ- ಗಾಳಿ ಇರುವುದಿಲ್ಲ. ಸಂಗೀತದ ಸೂಕ್ಷ್ಮವನ್ನು ಇಂಥವರಿಗೆ ಮನದಟ್ಟು ಮಾಡಿಸಿ, ಸಾಣೆ ಮಾಡಿಸಿ ಹಾಡಿಸಿನೋಡಿ. ಆಮೇಲೆ ಇವರಿಗೆ ಡಿಮ್ಯಾಂಡ್‌ ಬರದಿದ್ದರೆ ಕೇಳಿ.

    ಸಂಗೀತ ಗೊತ್ತಿರದಿದ್ದರೆ ನಟನಾಗಿ ಏಗೋಕಾಗಲ್ಲ ಎಂಬಂಥಾ ತುರ್ತಿನ ಕಾಲದಲ್ಲಿ ಚಿಗುರೊಡೆದ ಕಲಾವಿದ ರಾಜ್‌ಕುಮಾರ್‌. ಒಂದಷ್ಟು ವರ್ಷ ಕಂಪನಿ ನಾಟಕಗಳಲ್ಲಿ ಅವರು ನಟಿಸಿದರು. ಆ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಎಲ್ಲಾ ಕಲಾವಿದರು ನಟನೆಯಲ್ಲಷ್ಟೇ ಅಲ್ಲದೆ ಸಂಗೀತದಲ್ಲೂ ಪಳಗಿರುತ್ತಿದ್ದರು. ನಾಟಕದ ಹಾಡುಗಳ ಬಹುತೇಕ ಮಟ್ಟುಗಳು ರಾಗಗಳನ್ನು ಆಧರಿಸಿರುತ್ತಿದ್ದವು. ಅಂಥಾ ಹಾಡುಗಳನ್ನು ಹಾಡಲಾರದವ ನಟನಾ ರಂಗದಲ್ಲಿ ಎಲ್ಲಿಯೂ ಸಲ್ಲುತ್ತಿರಲಿಲ್ಲ. ಹಾಗಿತ್ತು ಆ ಸಮಯ.

    ರಾಜ್‌ಕುಮಾರ್‌ಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ಹಾಡು 'ನಾದಮಯ'. ಅದು ತುಂಬಾ ಅಸಾಮಾನ್ಯವಾದದ್ದೇನಲ್ಲ ಎಂದಿಟ್ಟುಕೊಂಡರೂ, ಭಾರತದ ಬೇರೆ ಯಾವ ನಟನೂ ಅದನ್ನು ಹಾಡೋಕಾಗುತ್ತಿರಲಿಲ್ಲ ಅನಿಸುತ್ತದೆ. ಸುಮಾರಾಗಿ ಹೆಸರು ಮಾಡಿರುವ ರಾಜ್‌ ಪುತ್ರತ್ರಯ ನಟರಿಗೂ ಇಂತಹ ಹಾಡು ಹಾಡುವ ಸಾಹಸ ಕಂಠಕ್ಕೆ ನಿಲುಕದ್ದೇ. ತೋಡಿ ರಾಗ ಆಧರಿಸಿದ ಈ ಹಾಡು ಸಂಕೀರ್ಣ ಸ್ವರೂಪದ್ದು. ಹಾಡು ಮುಂದುವರೆಯುತ್ತಾ ಹೋದಂತೆ ಇತರೆ ರಾಗಗಳನ್ನು ಒಡಲಿಗೆ ಸೇರಿಸಿಕೊಳ್ಳುತ್ತಾ ಸಾಗುತ್ತದೆ. ರಾಜ್‌ ಇಂತಹ ಹಾಡನ್ನು ಸುಲಿದ ಬಾಳೆಯ ಹಣ್ಣಿನಂದದಿ ಹಾಡಿದ್ದಾರೆ. ಸಂಕೀರ್ಣ ಸ್ವರ ಸ್ವರೂಪವನ್ನು ವೃತ್ತಿಪರ ಸಂಗೀತ ಕಲಾವಿದರಿಗೆ ಏನೇನೂ ಕಡಿಮೆ ಇಲ್ಲವೆಂಬಂತೆ ದಕ್ಕಿಸಿಕೊಂಡಿದ್ದಾರೆ.

    ನಾದಮಯ ಹಾಡೇ ಇಲ್ಲ : ಲೆಜೆಂಡ್ಸ್‌ ಮಾಲಿಕೆಯ 5 ಕ್ಯಾಸೆಟ್‌ಗಳಲ್ಲಿ ರಾಜ್‌ಕುಮಾರ್‌ ಹಾಡಿರುವ ಒಟ್ಟು 67 ಹಾಡುಗಳಿವೆ. ಆದರೆ, ಅವಾವುದರಲ್ಲೂ 'ನಾದಮಯ' ಹಾಡು ಇಲ್ಲ. ಜೀವನ ಚೈತ್ರ (1992) ಚಿತ್ರದ ಬೇರೆ ಹಾಡನ್ನು ಸೇರಿಸಿರುವುದನ್ನು ಗಮನಿಸಿದಾಗ, ಆ ಜಾಗದಲ್ಲಿ 'ನಾದಮಯ' ಇರಬೇಕಿತ್ತು ಅನಿಸುತ್ತದೆ. ಅಷ್ಟೇ ಅಲ್ಲ, ರಂಗಗೀತೆ ಧಾಟಿಯ 'ಬಭ್ರುವಾಹನ' ಚಿತ್ರದ 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ' ಹಾಡು ಕೂಡ 'ಲೆಜೆಂಡ್ಸ್‌' ಮಾಲಿಕೆಯಲ್ಲಿ ಇಲ್ಲ.

    ರಾಜ್‌ ಹಾಡಿದರು, ಪಿಬಿಎಸ್‌ ಕೆಲಸ ಕಳಕೊಂಡರು

    ಕನ್ನಡ ಚಿತ್ರ ಲೋಕದಲ್ಲಿ ನಾಯಕನಾಗಿ 5 ದಶಕಗಳ ಕಾಲ ಮಿಂಚಿದ ರಾಜ್‌ಕುಮಾರ್‌ ಗಾಯಕನಾಗಿ ಹೊಮ್ಮಿದ್ದು ತಮ್ಮ ನಟನಾ ಜೀವನದ ನಡು ಘಟ್ಟದಲ್ಲಿ. 1974ರಲ್ಲಿ ತೆರೆಕಂಡ ಸಂಪತ್ತಿಗೆ ಸವಾಲ್‌ ಚಿತ್ರದ 'ಯಾರೇ ಕೂಗಾಡಲಿ...' ಹಾಡಲ್ಲಿ ಮಿಂಚಿದ ಅವರ ಜೋರು ಕಂಠದ ಶಕ್ತಿ ಜನಪ್ರಿಯತೆಗೆ ಸೋಪಾನವಾಯಿತು. 'ಲೆಜೆಂಡ್ಸ್‌ ' ಮಾಲಿಕೆಯ ಮೊದಲ ಕ್ಯಾಸೆಟ್‌ನಲ್ಲೇ ಈ ಹಾಡು ಇದೆ. ಅದುವರೆಗೆ ರಾಜ್‌ ಹಾಡಿನ ಕಂಠವಾಗಿದ್ದುದು ಪಿ.ಬಿ.ಶ್ರೀನಿವಾಸ್‌. ಕನ್ನಡ ಚಿತ್ರ ಲೋಕಕ್ಕೆ ಅತ್ಯಂತ ಸುಮಧುರ ಹಾಗೂ ಶೈಲೀಕೃತ ('ಸ್ಟೈಲೈಸ್ಡ್‌') ಹಾಡುಗಳನ್ನು ಕೊಟ್ಟವರು ಪಿಬಿಎಸ್‌. ಶಾಸ್ತ್ರೀಯ ಸಂಗೀತದ ಬೇರುಗಳಿಂದ ಕಳಚಿಕೊಂಡು, ವಿವಿಧ ಶೃತಿಗಳು ಮತ್ತು ಸಂಗೀತ ವಾದ್ಯಗಳನ್ನು ದುಡಿಸಿಕೊಂಡು ಹಾಕಿದ ಮಟ್ಟುಗಳನ್ನು ನಾನು 'ಸ್ಟೈಲೈಸ್ಡ್‌' ಅಂತ ಕರೆದಿದ್ದೇನೆ. ಪಿ.ಬಿ.ಶ್ರೀನಿವಾಸ್‌ ಅವರ ಕಂಠದ ಗುಣಮಟ್ಟ ನೆನಪಿಸಲು 'ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ', 'ನೀ ಬಂದು ನಿಂತಾಗ'- ಈ ಎರಡು ಹಾಡುಗಳು ಸಾಕು. ಈ ಹಾಡುಗಳು ಅಗಾಧ ಪ್ರತಿಭೆಯ ಅದ್ಭುತ ಅಭಿವ್ಯಕ್ತಿಗಳು.

    ರಾಜ್‌ಕುಮಾರ್‌ ಗಾಯಕರಾಗಿ ಜನಪ್ರಿಯರಾದ ನಂತರ ಪಿ.ಬಿ.ಎಸ್‌. ಕೆಲಸ ಕಳಕೊಂಡರು. ಮುಖೇಶ್‌ ತರಹ ಪಿ.ಬಿ.ಶ್ರೀನಿವಾಸ್‌ ಅವರ ಕಂಠಕ್ಕೆ ವಿಷಾದದ ಹೊರೆ ಹೊರಹಾಕಿ ಗೆಲ್ಲುವಂಥಾ ತಾಕತ್ತಿತ್ತು. ಲೈಟ್‌ ಅನಿಸುವ ಹಾಡುಗಳನ್ನು ಅವರು ನಿಭಾಯಿಸುತ್ತಿದ್ದರಾದರೂ, ಛಾಪು ಮೂಡಿಸಿದ್ದು ವಿಷಾದ ಗೀತೆಗಳ ಮೂಲಕವೇ. ಆದರೆ ರಾಜ್‌ಕುಮಾರ್‌ ಕಂಠ ಗೆದ್ದಿದ್ದೇ ಅದರ ಭರಪೂರ ಜೀವಂತಿಕೆಯಿಂದ. 1976ರ ಚಿತ್ರದ ಟೈಟಲ್‌ ಗೀತೆ 'ನಾ ನಿನ್ನ ಮರೆಯಲಾರೆ', 77ರ ಗಿರಿಕನ್ಯೆ ಚಿತ್ರದ 'ಥೈ ಥೈ ಥೈಥೈ ಬಂಗಾರಿ' ಹಾಡುಗಳಲ್ಲಿ ಆ ಜೀವಂತಿಕೆಯ ಸೆಲೆ ಹರಳುಗಟ್ಟಿರುವುದನ್ನು ಕಾಣುತ್ತೇವೆ. ಗಿರಿಕನ್ಯೆ ಚಿತ್ರದ 'ಏನೆಂದು ನಾ ಹೇಳಲಿ' ಮತ್ತು ನಾ ನಿನ್ನ ಮರೆಯಲಾರೆ ಚಿತ್ರದ 'ನನ್ನಾಸೆಯಾ ಹೂವೆ' ಹಾಡುಗಳೊಟ್ಟಿಗೆ ಈ ಹಾಡುಗಳನ್ನೂ ಲೆಜೆಂಡ್ಸ್‌ನಲ್ಲಿ ಸೇರಿಸಲಾಗಿದೆ. ಎರಡೂ ಚಿತ್ರಗಳ ಹಾಡುಗಳ ಮಟ್ಟುಗಾರ ರಾಜನ್‌ ನಾಗೇಂದ್ರ.

    ರಾಜ್‌ಕುಮಾರ್‌ ಕೂಡ ಕೆಲವು ಒಳ್ಳೆಯ ವಿಷಾದ ಗೀತೆಗಳನ್ನು ಹಾಡಿದ್ದಾರೆ. ಉದಾಹರಣೆಗೆ- ಕೊಲೆ ದುರಂತ ಆಧಾರಿತ 'ಪ್ರೇಮದ ಕಾಣಿಕೆ' ಚಿತ್ರದ 'ಇದು ಯಾರು ಬರೆದ ಕಥೆಯೋ'. ಸಲೀಂ- ಜಾವೆದ್‌ ಬರೆದ ಕತೆಯುಳ್ಳ ಚಿತ್ರದ ಹಾಡಿನ ವಿಷಾದ ಭಾವವನ್ನು ರಾಜ್‌ ಸಹೃದಯರಿಗೆ ದಾಟಿಸಲು ಉಪೇಂದ್ರ ಕುಮಾರ್‌ ಅವರ ಮಟ್ಟು ನೆರವಾಗಿತ್ತು.

    ಅಷ್ಟೇ ವಿಷಾದ ತೀವ್ರತೆಯನ್ನು ಯಶಸ್ವಿಯಾಗಿ ಮುಟ್ಟಿಸಿದ ಇನ್ನೊಂದು ಗೀತೆ 'ಕಣ್ಣೀರ ಧಾರೆ ಇದೇಕೆ ಇದೇಕೆ'. ಹೊಸಬೆಳಕು ಚಿತ್ರದ ಈ ಹಾಡು ರಾಜ್‌ ಹಾಡಿದ ಅತ್ಯುತ್ತಮ ಗೀತೆಗಳಲ್ಲೊಂದು. ಲಲಿತ್‌ ರಾಗದ ಈ ಹಾಡಿನ ಟ್ಯೂನು ಜಗಜಿತ್‌ ಸಿಂಗ್‌ ಅವರ ಗಝಲ್‌ ಒಂದರಿಂದ ಅನಾಮತ್ತಾಗಿ ಎತ್ತುಕೊಂಡು ಬಂದದ್ದಾದರೂ, ರಾಜ್‌ಕುಮಾರ್‌ ಕೊಟ್ಟ ತಮ್ಮದೇ ಆದ ವೇಗ ಹಾಡನ್ನು ಸಹೃದಯರ ಮನಮುಟ್ಟಿಸಿತು. ಸ್ಟುಡಿಯೋದಲ್ಲಿ ಈ ಹಾಡು ರೆಕಾರ್ಡ್‌ ಆದಾಗ, ಮಟ್ಟು ಹಾಕಿದ್ದ ಎಂ.ರಂಗರಾವ್‌ ಕಣ್ಣಲ್ಲಿ ನೀರು ತುಂಬಿಕೊಂಡು ರಾಜ್‌ಕುಮಾರ್‌ ಅವರನ್ನು ತಬ್ಬಿಕೊಂಡಿದ್ದರಂತೆ.

    ಹಾಡುಗಾರನಾಗಿ ರಾಜ್‌ಕುಮಾರ್‌ ಯಶಸ್ವಿಯಾಗಿದ್ದರಲ್ಲಿ ಸುಮಾರು ಎರಡು ದಶಕಗಳ ಕಾಲ ಪಾರದರ್ಶಕ ಮತ್ತು ಸೆಳಕುಳ್ಳ ಹಾಡುಗಳ ಬರೆದ ಚಿ.ಉದಯ ಶಂಕರ್‌ ಅವರ ಪಾತ್ರವೂ ಉಂಟು.

    ಇಂಟರ್ಲ್ಯೂಡ್‌ಗಳ ಸರದಾರ ಜಿ.ಕೆ.ವೆಂಕಟೇಶ್‌

    1976ರಲ್ಲಿ ತೆರೆಕಂಡ ರಾಜಾ ನನ್ನ ರಾಜಾ ಚಿತ್ರದ 'ತನುವು ಮನವು' ಹಾಡು ನನಗೆ ಅಚ್ಚುಮೆಚ್ಚು. ರಾಜ್‌ ಕಂಠ ಕಳೆಗಟ್ಟುವುದೇ ಇಲ್ಲಿ. ಈ ಹಾಡಲ್ಲಿ ಏರಿಳಿತ ಸುಲಲಿತ, ಗಮಕ ಸರಾಗ. ರಾಜ್‌ ತನ್ನತನದ ಬೇರುಗಳನ್ನು ಬಿಟ್ಟಿದ್ದೇ ಈ ಹಾಡಿನ ಮೂಲಕ. ರಾಜ್‌ಕುಮಾರ್‌ ಕಂಠದಿಂದ ಅತ್ಯುತ್ತಮ ಹಾಡುಗಳ ಹೊಮ್ಮಿಸಿದ ಜಿ.ಕೆ.ವೆಂಕಟೇಶ್‌ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕ್ಯಾಸೆಟ್ಟಿನಲ್ಲಿರುವ 'ಬೆಳದಿಂಗಳಾಗಿ ಬಾ' ಮತ್ತು 'ನಿನಗಾಗಿ ಓಡೋಡಿ ಬಂದೆ' ವೆಂಕಟೇಶ್‌ ಸಂಯೋಜನೆಯ ಮೆಲುಕು ಹಾಕುವಂಥಾ ಹಾಡುಗಳು.

    ವೆಂಕಟೇಶ್‌ ಮಟ್ಟುಗಳಲ್ಲಿನ 'ಇಂಟರ್ಲ್ಯೂಡ್‌'ಗಳು ಹಾಡುಗಳಿಗೆ ವಿಶೇಷ ಸೆಳಕನ್ನು ಕೊಟ್ಟಿವೆ. 1980ರಲ್ಲಿ ಬಿಡುಗಡೆಯಾದ 'ಹಾಲು ಜೇನು' ಚಿತ್ರದಲ್ಲಿ ವೆಂಕಟೇಶ್‌ ಫಾರ್ಮ್‌ ಕಳಕೊಂಡಿದ್ದರು. ಅದಕ್ಕೆ ಒಂದು ವರ್ಷ ಮುಂಚೆಯಷ್ಟೇ ಬಂದಿದ್ದ ಹುಲಿಯ ಹಾಲಿನ ಮೇವು ಚಿತ್ರದ 'ಚಿನ್ನದ ಮಲ್ಲಿಗೆ ಹೂವೆ' ಹಾಡಿನಲ್ಲಿನ ರಾಗಲಾಪ ಮತ್ತು 'ಇಂಟರ್ಲ್ಯೂಡ್‌'ಗಳು ವೆಂಕಟೇಶ್‌ ಜಾಣ್ಮೆ ಎಂಥದೆಂಬುದಕ್ಕೆ ಸಾಕ್ಷಿ.

    ವೆಂಕಟೇಶ್‌ ಖದರಿನ 'ಇಂಟರ್ಲ್ಯೂಡ್‌'ಗಳ ಸೆಳಕಿಗೆ ಇನ್ನೊಂದು ಉದಾಹರಣೆ 'ಅದೇ ಕಣ್ಣು'. ಸುಮಾರಾಗಿ ಓಡಿದ ಈ ಚಿತ್ರದ ಟೈಟಲ್‌ ಗೀತೆಯಲ್ಲಿ ರಾಜ್‌ಕುಮಾರ್‌ ಅವರ ಏರು ಆಲಾಪ ಬಲು ಜೋರು. ಭಾರೀ ಸದ್ದಿನ, ಭಯ ಹುಟ್ಟಿಸುವಂಥಾ ಇಂಥ ಗೀತೆಗಳನ್ನು ಇಳಯ ರಾಜ ಕೊಟ್ಟಿದ್ದಾರೆ ಅಂತ ನನ್ನ ಅಂದಾಜು. ಇಳಯರಾಜ ಮಟ್ಟು ಹಾಕಿದ ಹಾಡುಗಳಲ್ಲಿ ವೆಂಕಟೇಶ್‌ ಖದರಿನ ವಾಸನೆ ಬಡಿಯುವುದರಲ್ಲೂ ಅರ್ಥವಿದೆ. ಯಾಕೆಂದರೆ, ಯಶಸ್ಸಿನ ಉತ್ತುಂಗ ಏರುವ ಮುನ್ನ ಇಳಯರಾಜ, ಅದೆಷ್ಟೋ ವರ್ಷಗಳ ಕಾಲ ವೆಂಕಟೇಶ್‌ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

    ರಾಜ್‌ಕುಮಾರ್‌ ಅವರ 'ನೀ ನನ್ನ ಗೆಲ್ಲಲಾರೆ' ಚಿತ್ರಕ್ಕೆ ಇಳಯರಾಜ ಮಟ್ಟು ಹಾಕಿದ್ದರು. 'ಲೆಜೆಂಡ್ಸ್‌'ನಲ್ಲಿ ಈ ಚಿತ್ರದ 'ಅನುರಾಗ ಏನಾಯ್ತು' ಮತ್ತು 'ಜೀವ ಹೂವಾಯಿತು' ಹಾಡುಗಳಿವೆ. ಸಂಪ್ರದಾಯ ನಿಷ್ಠವಲ್ಲದ ಹಾಗೂ ಇಂಟರ್ಲ್ಯೂಡ್‌ಗಳ ಮೆರುಗಿರುವ ಈ ಹಾಡುಗಳ ಪೈಕಿ ಎರಡನೆಯದನ್ನು ಇಳಯರಾಜ ಪ್ಯಾರಲೆಲ್‌ ಟ್ರ್ಯಾಕ್‌ನಲ್ಲಿ ಹಾಡಿಸಿದ್ದರು. ಅಲ್ಲಲ್ಲಿ ಅಲೆಗಳಂತೆ ಅನಿರೀಕ್ಷಿತವಾಗಿ ದನಿಗಳು ಅಪ್ಪಳಿಸುವಂಥಾ ಪರಿಣಾಮದ ಈ ಹಾಡು ವಿಲಕ್ಷಣ ಅನುಭವ ಕಟ್ಟಿಕೊಡುತ್ತದೆ.

    ಗುರುವಾರ ಬಂತಮ್ಮ : ರಾಜ್‌ಕುಮಾರ್‌ ಆಸ್ತಿಕ ಮನುಷ್ಯ. ಕೆಲಸವೇ ಆತನಿಗೆ ಪೂಜೆ. ಜನರನ್ನು ನಂಬುವ ರಾಜ್‌ಕುಮಾರ್‌ ಆಧ್ಯಾತ್ಮವನ್ನೇ ಮಾತಾಡುತ್ತಾರೆ ಅಂತ ಕಮಲ ಹಾಸನ್‌ ಹೇಳಿದ್ದರು. ಅನೇಕ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ರಾಜ್‌ಕುಮಾರ್‌ ಈ ಮಾತಿಗೆ ಪುಷ್ಟಿ ಕೊಟ್ಟಿದ್ದಾರೆ. 'ಲೆಜೆಂಡ್ಸ್‌'ನಲ್ಲಿ ಇಂಥಾ ಕೆಲವು ಭಕ್ತಿ ಗೀತೆಗಳೂ ಇವೆ. ರಾಘವೇಂದ್ರ ಸ್ವಾಮಿಗಳ ಕುರಿತ 'ಗುರುವಾರ ಬಂತಮ್ಮ' ಬಹುಶಃ ರಾಜ್‌ ಕಂಠದ ಜನಪ್ರಿಯ ಭಕ್ತಿ ಗೀತೆ. ಅಯ್ಯಪ್ಪನ ಸ್ತುತಿಸುವ 'ಹರಿಹರ ಸುತನೆ' ಹಾಡು ಶಬರಿ ಮಲೆ ದರ್ಶನದ ಸೀಝನ್ನಿನಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಪ್ರೆೃವೇಟ್‌ ಆಲ್ಬಂಗಳಿಂದ ಆಯ್ದ ಹಾಡುಗಳು ಮಾಲಿಕೆಯ 3ನೇ ಕ್ಯಾಸೆಟ್‌ನಲ್ಲಿ ತುಂಬಿವೆ. ಕೇಳಲು ಹಿತ ಎನಿಸುವಂಥಾ ಈ ಹಾಡುಗಳು ರಾಜ್‌ ಹಾಡಿರುವ ಡ್ರಮಾಟಿಕ್‌ ಚಿತ್ರಗೀತೆಗಳ ಮೇಲಿನ ತೇಪೆಯಾಗಿಲ್ಲ.

    ಗಟ್ಟಿಯಲ್ಲದ ಕಾಳುಗಳೂ ಉಂಟು : 'ಲೆಜೆಂಡ್ಸ್‌' ಮಾಲಿಕೆಯ ಕ್ಯಾಸೆಟ್ಟುಗಳಲ್ಲಿ ಕೆಲವು ಗಟ್ಟಿಯಲ್ಲದಂಥಾ ಕಾಳುಗಳೂ ಇವೆ. ಉದಾಹರಣೆಗೆ, ಸಪ್ತಪದಿ ಚಿತ್ರದ ಶೀರ್ಷಿಕೆ ಗೀತೆ. ರಾಜ್‌ ಕಂಠಕ್ಕೆ ತೀರಾ ಎತ್ತರದ ಶೃತಿ ಕೊಟ್ಟಿರುವುದರಿಂದ ಹಾಡು ತೀರಾ ಹಸನಾಗಿ ಕೇಳಿಬಂದಿಲ್ಲ. ಎತ್ತರದ ಶೃತಿಗೆ ರಾಜ್‌ ಕಂಠ ಆರಾಮಾಗಿ ಒಗ್ಗಿಲ್ಲ ಅನ್ನುವುದಕ್ಕೆ ಇತ್ತೀಚಿನ ಅವರ ಅನೇಕ ಹಾಡುಗಳು ಉದಾಹರಣೆಗಳಾಗಿ ಸಿಗುತ್ತವೆ.

    ಒಬ್ಬ ಗಾಯಕನಾಗಿ ರಾಜ್‌ಕುಮಾರ್‌ ಮಾಡಿರುವ ಕೆಲಸಗಳ ಪ್ರಾತಿನಿಧಿಕ ಸಂಗ್ರಹವಾಗಿ 'ಲೆಜೆಂಡ್ಸ್‌' ಕಾಣುತ್ತದೆಯೇ ವಿನಃ ಇದು ಸಮಗ್ರ ಸಂಗ್ರಹ ಎನ್ನಲಾಗದು. 1994ರ ನಂತರ ರಾಜ್‌ ಹಾಡಿರುವ ಯಾವ ಹಾಡುಗಳೂ ಈ ಕ್ಯಾಸೆಟ್ಟುಗಳಲ್ಲಿಲ್ಲ. ಒಟ್ಟಿನಲ್ಲಿ ಕನ್ನಡ ಚಿತ್ರ ಪ್ರೇಮಿಗಳು ಕೇಳಿ ಗುನುಗುನಿಸಲು ಅಡ್ಡಿಯಿಲ್ಲ.
    (ಕನ್ನಡಕ್ಕೆ : ವಿಶಾಖ ಎನ್‌.)

    English summary
    Legends brings 67 Rajkumar songs in five volumes. It walks you through energetic numbers like Yaare koogadali, devotional numbers like Guruvara banthamma, and melancholy hits like Idu yaaru bareda katheyo
    Friday, July 12, 2013, 11:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X