»   » ದುಡ್ಡು ಮಾಡಿದರೆ ಅವರು ಏನು ಮಾಡ್ತಾರಂತೆ ಗೊತ್ತಾ?

ದುಡ್ಡು ಮಾಡಿದರೆ ಅವರು ಏನು ಮಾಡ್ತಾರಂತೆ ಗೊತ್ತಾ?

Posted By: *ವಿಘ್ನೕಶ್ವರ ಕುಂದಾಪುರ
Subscribe to Filmibeat Kannada

ಣ..ಮ..ಸ್ಕಾ..ರ !"
ಆಸ್ಟ್ರೇಲಿಯಾ ಹುಡುಗಿಯ ಇಂಕನ್ನಡದ ಮಾತು ಕೇಳಿ ರಾಜಾ ಮಿಲ್ಲಿನ ಬಳಿ ನೆರೆದಿದ್ದ ಪತ್ರಕರ್ತರು ಬೇಸ್ತು . 'ಹಾಲಿವುಡ್‌" ಸಿನಿಮಾ ನಾಯಕಿ ಫೆಲಿಸಿಟಿಗೆ ಕನ್ನಡ ಬರುತ್ತೆ; ಇಂಗ್ಲೀಷಿನಲ್ಲಿ ಬರೆದು ಕೊಟ್ಟರೆ! ಫೆಲಿಸಿಟಿಯ ಕನ್ನಡ ಅರ್ಥವಾಗೋದು ಹೇಗೆ ಕಷ್ಟವೋ ಇಂಗ್ಲಿಷ್‌ ಕೂಡ ಒಂದೇ ಏಟಿಗೆ ಜೀರ್ಣವಾಗದು.

ಹಾಡು- ಹಸೆ ಮೊದಲಾದ ತಿರುಳೆಲ್ಲಾ ವಿದೇಶದಲ್ಲೇ ಚಿತ್ರೀಕರಣವಾಗಿ ಬಂದಿರುವ 'ಹಾಲಿವುಡ್‌" ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣವಾದದ್ದು ಬೆಂಗಳೂರಿನ ಮಲ್ಲೇಶ್ವರದ ಸಂಪಿಗೆ ರಸ್ತೆಯ ರಾಜಾ ಮಿಲ್‌ನಲ್ಲಿ. ಫೆಲಿಸಿಟಿಯ ಕತ್ತನ್ನು ಖಳ ಹಿಡಿಯುತ್ತಾನೆ. ಉಪ್ಪಿ ಜಿಗಿದು ಬಂದು, ಬಚಾವು ಮಾಡುತ್ತಾರೆ. ಎಲ್ಲವನ್ನೂ ಕಂಡ ದಿನೇಶ್‌ ಬಾಬು ಓಕೆ ಹೇಳುತ್ತಾರೆ.

ಹೆಚ್ಚು ಟೇಕ್‌ಗಳಿಲ್ಲದೆ ಮುಗಿದ ಈ ಶಾಟ್‌ ಕಂಡರೆ, ಫೆಲಿಸಿಟಿ ಸಾಕಷ್ಟು ಪಳಗಿದ್ದಾರೇನೋ ಅನಿಸುತ್ತದೆ.
ಎರಡು ಇಂಗ್ಲಿಷ್‌ ಸಿನಿಮಾ ಹಾಗೂ ಒಂದಷ್ಟು ಆಸ್ಟ್ರೇಲಿಯನ್‌ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಫೆಲಿಸಿಟಿ ಸಿನಿಮಾದುದ್ದಕ್ಕೂ ಖುದ್ದು ಕನ್ನಡ ಮಾತಾಡಿದ್ದಾರೆ. ಫೈಟ್‌ ಮಾಡಿದ್ದಾರೆ, ಕುಣಿದಿದ್ದಾರೆ. ದಿನೇಶ್‌ ಬಾಬೂನೇ ಕನ್ನಡ ಮಾತಾಡೋಲ್ಲ. ಈಕೆ ಮಾತಾಡಿದಾಳೆ ಅಂದರೆ ಮೆಚ್ಚಬೇಕು ಬಿಡ್ರಿ ಅನ್ನುವುದು ಕೆಲವರ ಪಟಾಕಿ.

ಕೊನೇ ಶಾಟ್‌ಗೆ ಹೋಗುವ ಮುಂಚೆ ಫೆಲಿಸಿಟಿ ನಗುನಗುತ್ತಾ ಪತ್ರಕರ್ತರ ಜೊತೆ ಮಾತಾಡಿದರು. ಬೆಂಗಳೂರು ಅವರಿಗೆ ತುಂಬಾ ಮೆಚ್ಚಾಗಿದೆ. ಭಾರತಕ್ಕೆ ಬಂದ ತಕ್ಷಣ ಅವರು ಇಷ್ಟ ಪಟ್ಟಿದ್ದು ಇಲ್ಲಿನ ಸೀರೆಯನ್ನ. ಆರು ರೇಷ್ಮೆ ಸೀರೆಗಳನ್ನು ಕೊಂಡು, ಅವನ್ನು ಉಟ್ಟುಕೊಳ್ಳುವುದನ್ನೂ ಕಲಿತಿದ್ದಾರೆ. ಇದನ್ನು ಹೇಳುವಾಗ ಅವರ ಮೊಗದಲ್ಲಿ ನಗುವಿನ ಜೊತೆಗೆ ಬೆಟ್ಟ ಕಿತ್ತಿಟ್ಟ ಸಾರ್ಥಕ್ಯ.

ಯುದ್ಧದ ಭೀತಿಯ ಕಾರಣ ರಾಮುಗೆ ಅವರು ಸ್ವಲ್ಪ ಕಾಲ ಕೈಕೊಡಬೇಕಾಯಿತು. ಭಾರತಕ್ಕೆ ಬರಲು ಅವರಿಗೆ ಆಸ್ಟ್ರೇಲಿಯಾ ಸ್ವಲ್ಪ ಕಾಲ ಅನುಮತಿ ಕೊಡಲಿಲ್ಲ. ಮೊದಲ ಭೇಟಿಯಲ್ಲೇ ಭಾರತವನ್ನು ಬಾಯಿತುಂಬಾ ಹೊಗಳುವ ಫೆಲಿಸಿಟಿಗೆ ಆಸ್ಟ್ರೇಲಿಯಾಗೆ ಹೋದ ನಂತರ ಭಾರತದ ಬಗ್ಗೆ ಡಾಕ್ಯುಮೆಂಟರಿಗಳನ್ನು ಮಾಡುವ ಬಯಕೆ. ಅದಕ್ಕೇ ಸಿನಿಮಾ ಶೂಟಿಂಗ್‌ ಮುಗಿದ ಮೇಲೆ ದೆಹಲಿ, ಮುಂಬಯಿ, ಕೋಲ್ಕತಾಗಳನ್ನು ಸುತ್ತುವುದಲ್ಲದೆ ತಾಜ್‌ಮಹಲನ್ನು ನೋಡುವುದು ಈಕೆಯ ಮಹದಾಸೆ.

ಫೆಲಿಸಿಟಿ ಕಣ್ಣಲ್ಲಿ 'ಹಾಲಿವುಡ್ಡಿಗಳು" ಹೀಗೆ...
ಉಪೇಂದ್ರ ಇಂಟ್ರಾವರ್ಟ್‌, ಕೆಲಸಕ್ಕೆ ಎಷ್ಟು ಬೇಕೋ ಅಷ್ಟೇ ಮಾತು. ರಾಮು ಸಂಕೋಚ ಸ್ವಭಾವದವರು. ಅವರ ಹೆಂಡತಿ ಮಾಲಾಶ್ರೀ ಒಂದೇ ಸಿನಿಮಾದಲ್ಲಿ ಏಳು ಪಾತ್ರಗಳಲ್ಲಿ ಅಭಿನಯಿಸಿರುವುದನ್ನು ಕೇಳಿ ದಂಗಾದೆ. ಆ ಸಿನಿಮಾ ನಾನು ನೋಡಲೇಬೇಕು. ಇನ್ನು ಅನಂತನಾಗ್‌ ನನಗೆ ಒಳ್ಳೆಯ ಫ್ರೆಂಡ್‌. ಅವರ ಜೊತೆ ಚೆಸ್‌ ಆಡ್ತಿದ್ದೆ. ರಾಜಕೀಯ, ಸಿನಿಮಾ, ಬಿಸಿನೆಸ್ಸು - ಅನಂತನಾಗ್‌ ಎಲ್ಲಾ ವಿಷಯಗಳ ಬಗೆಗೂ ನಿರರ್ಗಳವಾಗಿ ಮಾತಾಡುತ್ತಾರೆ. He is intellectual.

ಭಾರತದ ಸಂಸ್ಕೃತಿಗೆ ಫೆಲಿಸಿಟಿ ಮಾರುಹೋಗಿದ್ದಾರೆ. ದಿನಕ್ಕೊಂದು ಪ್ಯಾಕು ಸಿಗರೇಟು ಸೇದುತ್ತಿದ್ದ ಈಕೆಗೆ ಭಾರತದ ಹೆಣ್ಣು ಮಕ್ಕಳು ಸಿಗರೇಟು ಸೇದುವುದಿಲ್ಲ ಅಂತ ಯಾರೋ ಹೇಳಿದ್ದೇ ತಡ, ಸಿಗರೇಟು ಸೇದೋದನ್ನೇ ಬಿಟ್ಟಿದ್ದಾರೆ. ದೇವರಲ್ಲಿ ನಂಬಿಕೆ ಇರುವ ಈಕೆ ಹರೇ ಕೃಷ್ಣನ ಭಕ್ತೆ.

ಫೆಲಿಸಿಟಿ ಮಾತುಗಳನ್ನು ಕಷ್ಟ ಪಟ್ಟು ಜೀರ್ಣಿಸಿಕೊಳ್ಳುವುದರೊಳಗೆ ಅವರು ತಮ್ಮ ಸಮಾಜ ಸೇವೆಯ ಮುಖವನ್ನು ಬಿಚ್ಚಿಟ್ಟರು. ಅದೇನೆಂದರೆ- ಒಂದು ವೇಳೆ ಅವರು ಸಾಕಷ್ಟು ದುಡ್ಡು ಮಾಡಿದರೆ, ವಯಸ್ಸಾದವರಿಗಾಗೇ ಫೈವ್‌ ಸ್ಟಾರ್‌ ಹೊಟೇಲ್‌ ಕಟ್ಟುತ್ತಾರಂತೆ. ಅಪ್ಪಿ ತಪ್ಪಿ ಕೂಡ ಅದು ವಯಸ್ಸಿನವರಿಗೆ ಬಿಟ್ಟಿ ಊಟ ಹಾಕುತ್ತೆ ಅಂತ ಮಾತ್ರ ಫೆಲಿಸಿಟಿ ಹೇಳಲಿಲ್ಲ!ತಾರಾ ಸಂಚಯ

English summary
Australian star Felicity is in Bangalore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada