»   » ಸಿದ್ಧಗಂಗೆ ಸ್ವಾಮೀಜಿ ಪಾತ್ರಕ್ಕೆ ಜಿಕೆಜಿ ಹೊಂದುತ್ತಾರಾ?

ಸಿದ್ಧಗಂಗೆ ಸ್ವಾಮೀಜಿ ಪಾತ್ರಕ್ಕೆ ಜಿಕೆಜಿ ಹೊಂದುತ್ತಾರಾ?

Subscribe to Filmibeat Kannada


ಮುಖವನ್ನು ಸದಾ ಗಂಟುಹಾಕಿಕೊಂಡಂತೆ ಕಾಣಿಸುವ ಜಿ.ಕೆ.ಗೋವಿಂದ ರಾವ್ ಮಠ ಸೇರಿದ್ದಾರೆ! ಅರೇ,ನಾವು ಮಿಂಚುಧಾರಾವಾಹಿಯಲ್ಲಿ ಗೋವಿಂದರಾವ್ ನ ನೋಡ್ತಾನೇ ಇದ್ದೀವಲ್ಲ... ಅವರು ಯಾವಾಗ ಮಠ ಸೇರಿದರು ಎಂದು ನೀವು ಯೋಚಿಸಬೇಡಿ. ಅವರು ಮಠ ಸೇರಿದ್ದು ಸಿನಿಮಾದಲ್ಲಿ ಮಾತ್ರ!

ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾಎನ್ನುವ ಚಲನಚಿತ್ರದಲ್ಲಿ ಗೋವಿಂದರಾವ್ ಅವರಿಗೆ, ಸಿದ್ದಗಂಗಾ ಕ್ಷೇತ್ರದ ಶ್ರೀ ಶಿವಕುಮಾರಸ್ವಾಮಿಗಳ ಪಾತ್ರ. ಬುದ್ಧಿಜೀವಿ, ವಿಚಾರವಾದಿ ಎಂದು ತಮ್ಮನ್ನು ತಾವು ಗುರ್ತಿಸಿಕೊಳ್ಳುವ ಗೋವಿಂದರಾವ್, ಸ್ವಾಮೀಜಿ ಪಾತ್ರಕ್ಕೆ ನ್ಯಾಯ ಕೊಡಲು ಪ್ರಯತ್ನಿಸುತ್ತಿದ್ದಾರೆ.

ನಟ ಶ್ರೀಧರ್ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮೀಜಿ ಪಾತ್ರವನ್ನು ಮಾಡುತ್ತಿದ್ದಾರೆ. ಸಿದ್ದಗಂಗಾ ಮಠದ ಮೂಲ ಪುರುಷ ಗೋಸಾಲ ತಿಪ್ಪೇಶ್ವರ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ, ಗಂಗಾ ಮಾತೆ ಪಾತ್ರದಲ್ಲಿ ವಿನಯ ಪ್ರಸಾದ್, ಊರ ಗೌಡನ ಪಾತ್ರದಲ್ಲಿ ಸುಂದರರಾಜ್ ಇದ್ದಾರೆ. ಮಾಸ್ಟರ್ ಕಿಶನ್,ತಾರಾ, ಸುಧಾರಾಣಿ ತಾರಾಬಳಗದಲ್ಲಿರುವ ಪ್ರಮುಖರು.

ನಡೆದಾಡುವ ದೇವರೆಂದೇ ಗುರ್ತಿಸಲ್ಪಡುವ ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮಶತಮಾನೋತ್ಸವ ಮೊನ್ನೆಯಷ್ಟೇ ನಡೆಯಿತು. ಈ ಸಂದರ್ಭದಲ್ಲಿ ಶ್ರೀಗಳ ಬಗ್ಗೆ ಸಿನಿಮಾ ಮಾಡಲು, ಮಹಂತಪ್ಪ ಹಣ ಹೂಡಿದ್ದಾರೆ. ಶ್ರೀಗಳ ಮೇಲಿನ ಗೌರವದಿಂದ, ಶ್ರೀಗಳ ವಿಚಾರಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಚಿತ್ರ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

1500 ಕ್ಯಾಸೆಟ್ ಗಳಿಗೆ ಹಾಡು ಬರೆದಿರುವ ಓಂಕಾರ್, ಚಿತ್ರದ ನಿರ್ದೇಶಕರು. ನಾನು ರಾಮಾಯಾಣ ಮತ್ತು ಮಹಾಭಾರತ ನೋಡಿಲ್ಲ. ಆದರೆ ಶ್ರೀಗಳ ರೂಪದಲ್ಲಿರುವ ಜೀವಂತ ದೇವರನ್ನು ಕಂಡಿದ್ದೇನೆ. ಪುರಾಣ, ಇತಿಹಾಸ, ವರ್ತಮಾನಗಳನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ. ನಾವು ಲಾಭಕ್ಕಾಗಿ ಈ ಚಿತ್ರ ಮಾಡುತ್ತಿಲ್ಲ ಎನ್ನುವ ಓಂಕಾರ್ ಗೆ ಚಿತ್ರದ ಬಗ್ಗೆ ಅಪಾರ ಹೆಮ್ಮೆ. ಚಿತ್ರಕ್ಕೆ ಯುವರಾಜ್ ಸಂಗೀತ ನೀಡಿದ್ದಾರೆ.

ಇತ್ತೀಚೆಗಷ್ಟೇ ಶ್ರೀಕ್ಷೇತ್ರದ ಮಠದಲ್ಲಿ 13ಸಾವಿರ ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸುವ ದೃಶ್ಯವನ್ನು ಚಿತ್ರೀಕರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಗಳು ಹಾಜರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada