»   » ಅಪ್ಪು ಶತದಿನ : ಕನ್ನಡ ಬೆಳೆಯಬೇಕು, ವೀರಪ್ಪನ್‌ನ ಹಿಡೀಬೇಕು

ಅಪ್ಪು ಶತದಿನ : ಕನ್ನಡ ಬೆಳೆಯಬೇಕು, ವೀರಪ್ಪನ್‌ನ ಹಿಡೀಬೇಕು

Posted By: Super
Subscribe to Filmibeat Kannada

ಕೊನೆಗೂ ಅಣ್ಣಾವ್ರು ಸಮಾರಂಭವೊಂದರಲ್ಲಿ ಮೈಕು ಹಿಡಿದು ಮಾತನಾಡಿದರು. ಅಭಿಮಾನಿಗಳು ರಾಜ್‌ಕುಮಾರ್‌ ಅವರ ಭಾಷಣವನ್ನು ಕೇಳಿ ಅದೆಷ್ಟು ದಿನಗಳಾಗಿದ್ದವೋ... ಅಪ್ಪು ಚಿತ್ರದ ಶತದಿನೋತ್ಸವ ಸಂಭ್ರಮದಲ್ಲಿ ಅಭಿಮಾನಿಗಳ ನೂಕು ನುಗ್ಗಲು.

ಅಭಿಮಾನಿದೇವರುಗಳನ್ನು ಸಂಬೋಧಿಸಿ ಮಾತನಾಡಿದ ರಾಜ್‌ ಕನ್ನಡ ಭಾಷೆಯ ಬೆಳವಣಿಗೆಯ ಕುರಿತು ಮಾತನಾಡಿದರು.

ಕನ್ನಡ ಭಾಷೆಯ ಬಗ್ಗೆ ಬರೆಯ ಅಭಿಮಾನವಿದ್ದರೆ ಸಾಲದು. ಅಂತಃಕರಣ ಇರಬೇಕು. ಅಂತಃಕರಣದಿಂದ ಮಾತ್ರ ಭಾಷೆ ಬೆಳೆಯುವುದಕ್ಕೆ ಸಾಧ್ಯ. ಉಚ್ಚಾರ, ಅದರ ಅಂದ ಚೆಂದದ ಬಗ್ಗೆಯೂ ಅಭಿಮಾನ ಇರಬೇಕು. ನಾವೇ ಕನ್ನಡದ ಬಗ್ಗೆ ಅನಾದರ ತಳೆಯುವುದು ಅನ್ಯಾಯದ ಮಾತಲ್ಲವೇ .. ಎಂದು ರಾಜ್‌ ವಿಷಾದಿಸಿದರು.

ರಜನಿ ದುರ್ಬೀನಿನಲ್ಲಿ ಅಪಹರಣ ಪ್ರಕರಣ...

ಕಾರ್ಯಕ್ರಮದಲ್ಲಿ ಇಬ್ಬರು ದಿಗ್ಗಜರ ಸಮ್ಮಿಲನ. ರಾಜ್‌ ಹಾಗೂ ರಜನೀಕಾಂತ್‌. 'ರಾಜ್‌ ಕುಮಾರ್‌ ಅವರ ವ್ಯಕ್ತಿತ್ವದಿಂದಲೇ ನಾವೆಲ್ಲ ಪ್ರಭಾವಿತರಾದವರು. ಅಂಥ ಒಳ್ಳೆಯ ಮನುಷ್ಯನಿಗೆ ಹೀಗೇಕಾಯ್ತು ? ರಾಜ್‌ ಅವರನ್ನು ನರಹಂತಕ ವೀರಪ್ಪನ್‌ ಅಪಹರಣ ಮಾಡಿದ ಕೆಟ್ಟ ಪ್ರಕರಣ ಬೇಡಾಂದ್ರೂ ನೆನಪಿಗೆ ಬರುತ್ತೆ. ಎಲ್ಲಾ ದೇವರ ಆಟ. ಬಹುಶಃ ಹೀಗಿರಬಹುದು... ದೇವರ ಮಗ ರಾಜ್‌ ಅವರ ಬಗ್ಗೆ ಪ್ರಪಂಚಕ್ಕೆಲ್ಲ ಗೊತ್ತಾಗಬೇಕು ಎಂಬ ಕಾರಣಕ್ಕೇ ಈ ದುರದೃಷ್ಟಕರ ಘಟನೆ ನಡೆದಿರಬಹುದು ಅಲ್ವೇ..." ರಾಜ್‌ ಅಪರಹಣದ ದುರದೃಷ್ಟಕರ ಘಟನೆಯನ್ನು ಪಾಸಿಟಿವ್‌ ಆಗಿ ಸ್ವೀಕರಿಸಿದ ರಜನೀಕಾಂತ್‌ ಸ್ವಗತ ಎಂಬಂತೆ ಮಾತನಾಡುತ್ತಿದ್ದರು.

ರಜನಿ, ಅಪ್ಪು ಚಿತ್ರದ ಶತದಿನೋತ್ಸವ, ಕನ್ನಡ-ತಮಿಳು ಚಿತ್ರೋದ್ಯಮದ ಬಗ್ಗೆ ಮಾತನಾಡಲಿಲ್ಲ. ಅವರ ಮನಸ್ಸಿನಲ್ಲಿ ರಾಜ್‌ ಅಪಹರಣದ ಘಟನೆಯೇ ಗಿರಕಿ ಹಾಕುತ್ತಿತ್ತು. ವೀರಪ್ಪನ್‌ ಮೇಲೆ ಸಿಟ್ಟು ಉಕ್ಕುತ್ತಿತ್ತು. ಆ ಕಾಡುಗಳ್ಳ ನರಹಂತಕ ವೀರಪ್ಪನ್‌ ಒಬ್ಬ ರಾಕ್ಷಸ. ಆ ದುಷ್ಟನನ್ನು ಆದಷ್ಟು ಬೇಗೆ ಬಗ್ಗು ಬಡಿಯಬೇಕು ಎಂದು ಕರೆ ನೀಡಿದ ರು. ನರಹಂತಕ ವೀರಪ್ಪನ್‌ ಹಿಡಿತದಿಂದ ರಾಜ್‌ ಅವರನ್ನು ಬಿಡಿಸಿಕೊಂಡು ಬಂದ ನೆಡುಮಾರನ್‌ರನ್ನು ಶ್ಲಾಘಿಸಿದರು. ಆ ಸಂದರ್ಭದಲ್ಲಿ ಸಂಯಮದಿಂದ ವರ್ತಿಸಿದ ಮುಖ್ಯಮಂತ್ರಿ ಎಸ್ಸೆಂ ಕೃಷ್ಣರನ್ನು ಹೊಗಳಿದರು.

ಕಾರ್ಯಕ್ರಮದಲ್ಲಿ ಗಣ್ಯರ ದಂಡೇ ಭಾಗವಹಿಸಿತ್ತು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಮಾತನಾಡಿ, ದೇವಸ್ಥಾನಕ್ಕೆ ಹೋಗುವಾಗ ನಮ್ಮಲ್ಲಿರುವ ಶ್ರದ್ಧೆ ಚಿತ್ರಮಂದಿರಗಳಿಗೆ ಹೋಗುವಾಗಲೂ ಇರಬೇಕು. ಸದಭಿರುಚಿಯ ಚಿತ್ರಗಳನ್ನು ಮಾಡುವಲ್ಲಿ ರಾಜ್‌ಕುಟುಂಬದ್ದು ಎತ್ತಿದ ಕೈ ಎಂದು ಹೇಳಿ ಅಪ್ಪು ಚಿತ್ರವನ್ನೂ ಸದಭಿರುಚಿಯ ಚಿತ್ರಗಳ ಸಾಲಿಗೆ ಸೇರಿಸಿದರು. ಪೊಲೀಸ್‌ ಆಯುಕ್ತ ಎಚ್‌. ಟಿ. ಸಾಂಗ್ಲಿಯಾನಾ, ತಾವೂ ರಾಜ್‌ ಅವರ ಅಭಿಮಾನಿ ಎಂದು ಮಾತು ಸೇರಿಸಿದರು.

English summary
Veerappan is a monster - film star Rajnikant

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada