twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರಲ್ಲೊಂದು ಉಚಿತ ‘ಮುಕ್ತ’ ಸಂವಾದ

    By Super
    |

    ಅರ್ಥಪೂರ್ಣ ಜನಪ್ರಿಯ ಈ-ಟಿವಿ ಧಾರಾವಾಹಿ'ಮುಕ್ತ" ಸಂವಾದಕ್ಕಾಗಿ ಮೈಸೂರಿನ ಕಲಾಮಂದಿರ ಮುಕ್ತವಾಗಿ ತೆರೆದುಕೊಂಡದ್ದು ಸೆಪ್ಟಂಬರ್‌ 26 ರಂದು. ಇತ್ತೀಚಿನ ದಿನಗಳಲ್ಲಿ ತುಂಬುವುದೇ ಅಪರೂಪವಾಗಿದ್ದ ಕಲಾಮಂದಿರ ಅಂದು ಜನರ ಅಲೆ ಪಡೆದು ತುಂಬಿ ತುಳುಕುತ್ತಿತ್ತು. ಬಹುವರ್ಷಗಳ ನಂತರ ತುಂಬಿದ ಕನ್ನಂಬಾಡಿಯ ಸಂಭ್ರಮವನ್ನು ನೆನಪಿಸುತ್ತಿತ್ತದು.

    ಮುಕ್ತ ಸಂವಾದದ ಜನಸಾಗರವನ್ನು ಉಚಿತ ಪಾಸ್‌ ಹಂಚಿದ ದಿನದಿಂದ ಹಿಡಿದು ಅದುವರೆಗೂ ಸಮರ್ಥವಾಗಿ ವ್ಯವಸ್ಥೆಯನ್ನು ನಿರ್ವಹಿಸುತ್ತಾ ಬಂದ, ಸಂಘಟನೆಗೆ ಶ್ರೇಷ್ಠ ಹೆಸರಾದ ದಂಪತಿ ಜೋಡಿಯೆಂದರೆ, 'ಅಮೆರಿಕನ್ನಡ" ಪತ್ರಿಕೆ ಖ್ಯಾತಿಯ ಶಿಕಾರಿಪುರ ಹರಿಹರೇಶ್ವರ ಹಾಗೂ ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ. ಇಳಿವಯಸ್ಸಿನಲ್ಲಿಯೂ ಅವರ ಸಂಭ್ರಮ ಕಂಡು ಅನೇಕ ಜನ ಮೂಕರಾಗಿದ್ದರು; ಅವರಲ್ಲಿ ನಾನೂ ಕೂಡ ಒಬ್ಬ.

    ಸುಮಾರು ಒಂದು ವಾರದ ಮೊದಲೇ ಎಲ್ಲಾ ಕಡೆ ದೂರದರ್ಶನದ ಮಾಧ್ಯಮದ ಮೂಲಕ ಸಂವಾದದ ವಿಷಯ ಬಿತ್ತರಿಸಿ ಜನಕ್ಕೆ ತಲುಪಿಸಿ, ಕ್ಯೂನಲ್ಲಿ ನಿಂತ ಎಲ್ಲರಿಂದಲೂ ವಿಳಾಸ ಪಡೆದು, ನಿಜವಾಗಿ ಆಸಕ್ತಿ ಇದ್ದವರನ್ನು ಗುರುತಿಸಿ, ಅಂಥವರಿಗೆ ಮಾತ್ರ ವ್ಯವಸ್ಥಿತವಾಗಿ ಉಚಿತವಾಗಿ ಪಾಸ್‌ಗಳನ್ನು ನೀಡಿದ ಶ್ರೀಹರಿದಂಪತಿಗಳ ಪ್ರಯತ್ನ- ಅಂದು ಬಂದ ಅಷ್ಟು ಜನರಲ್ಲಿ ಸಫಲತೆ ಕಂಡಿತ್ತು. ಒಂದೊಂದು ಪ್ರವೇಶಪತ್ರಕ್ಕೆ ಒಬ್ಬರಿಗೆ ಮಾತ್ರ ಪ್ರವೇಶ; ಕುಟುಂಬವೊಂದಕ್ಕೆ ಹೆಚ್ಚೆಂದರೆ ಎರಡು ಪಾಸ್‌ ಮಾತ್ರ- ಎಂಬುದು ಅವರೇ ಹಾಕಿಕೊಂಡ ಕಡ್ಡಾಯ ನಿಯಮವಾಗಿತ್ತು. ಅದರಂತೆಯೇ ಪಾಸ್‌ಗಳನ್ನು ಕೊಟ್ಟಿದ್ದರು. ಪ್ರವೇಶಪತ್ರಗಳ ವಿತರಣೆಗಾಗಿ ಎರಡು ಕೇಂದ್ರಗಳನ್ನು ಏರ್ಪಡಿಸಿದ್ದರು. ನಗರದ ಎಲ್ಲಾ ಕಡೆಗಳಿಂದ ಜನ ಬಂದು ಕ್ಯೂನಲ್ಲಿ ನಿಂತು, ಬಹುತೇಕ ಜನ ತಮ್ಮ ವಿಳಾಸಗಳನ್ನು ಮತ್ತು ಫೋನ್‌ ನಂಬರ್‌ಗಳನ್ನು ಚೀಟಿಯಲ್ಲಿ ಬರೆದುಕೊಟ್ಟು ಪ್ರವೇಶಪತ್ರಗಳನ್ನು ಪಡೆದರು.

    ಪಾಸ್‌ ಪಡೆದವರಿಗೆ ಆಸನ ಒದಗಿಸುವುದಕ್ಕಾಗಿ, ಪಾಸ್‌ ಇರದ ಒಬ್ಬರೇ ಒಬ್ಬರನ್ನು ಕೂಡಾ ಒಳಹೋಗದಂತೆ ಪೋಲಿಸರ ಸಹಕಾರದೊಂದಿಗೆ ಸ್ವಯಂಸೇವಕ ಕಾರ್ಯಕರ್ತರು ನಿಗಾವಹಿಸಿ ಎಲ್ಲಾ ಕಡೆ ಶಿಸ್ತು ಕಾಪಾಡಿದ್ದರು. ಸ್ವಯಂಸೇವಕರು ಬಂದವರನ್ನು ಒಳಗೆ ಕರೆದುಕೊಂಡು ಹೋಗಿ ಕುಳ್ಳಿರಿಸುತ್ತಿದ್ದರು; ಸಭಿಕರನ್ನು ನಿಯಂತ್ರಿಸುತ್ತಿದ್ದರು. ಹೀಗೆ, ದೂರದ ಬನ್ನೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯ ಮೂವತ್ತು ಮಂದಿ ಅಧ್ಯಾಪಕರುಗಳು ಅಲ್ಲಿಂದ ಬೆಳಗ್ಗೆಯೇ ಹೊರಟು ಬಂದು, ಇಲ್ಲಿ ಸಂಜೆಯ ವರೆಗೂ ಇದ್ದು, ಈ ಸಂವಾದ ಕಾರ್ಯಕ್ರಮಕ್ಕೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿ, ಸಭಿಕರ ಮೆಚ್ಚುಗೆ ಪಡೆದರು.

    ಇನ್ನೂ ಮೆಚ್ಚಬೇಕಾದದ್ದೆಂದರೆ, ಆಶ್ಚರ್ಯವೆಂಬಂತೆ ನಿಗದಿಯಾದ ಸಮಯಕ್ಕೇ, ಅಂದರೆ ಮಧ್ಯಾಹ್ನ ಒಂದು ಗಂಟೆಗೇ ಕಾರ್ಯಕ್ರಮದ ಮೊದಲನೆಯ ಸರಿಯಾಗಿ ಪಾಳಿ ಪ್ರಾರಂಭವಾಯಿತು. ರಂಗಕರ್ಮಿ ಕಪ್ಪಣ್ಣ ನಗೆಚಾಟಿಕೆಯ ಸರಸೋಕ್ತಿಗಳಿಂದ ಸಮರ್ಥವಾಗಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಹರಿಹರೇಶ್ವರರ ಸ್ವಾಗತ ಮತ್ತು ಪರಿಚಯದ ಮಾತು, ನಾಡೋಜ ದೇ. ಜವರೇಗೌಡರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಉದ್ಘಾಟನೆ ಕಂಡು, ಕಾದಂಬರಿಕಾರ್ತಿ ಸಿ. ಎನ್‌. ಮುಕ್ತಾ ಅವರ ಅರ್ಥಪೂರ್ಣ ಆಶಯನುಡಿಯಲ್ಲಿ ಸಂಕ್ಷಿಪ್ತವಾಗಿ ಭಾಷಣಗಳು ಮುಗಿದವು. ಸಂವಾದ ಕಾರ್ಯಕ್ರಮಕ್ಕೆ ಇದು ಅನುವು ಮಾಡಿಕೊಟ್ಟು, ಆನಂತರದಲ್ಲಿ ನಡೆದ ಸಂವಾದದಲ್ಲಿ 'ಮುಕ್ತ" ನಿರ್ದೇಶಕ ಟಿ. ಎನ್‌. ಸೀತಾರಾಂ ಆದಿಯಾಗಿ ಎಲ್ಲ ನಟನಟಿಯರು, ತಾಂತ್ರಿಕ ವರ್ಗ, ಸಹನಿರ್ದೇಶಕರುಗಳು ವೇದಿಕೆಗೆ ಬಂದು ಸಂವಾದಕ್ಕೆ ನೇರವಾಗಿ ಸ್ಪಂದಿಸಿ ಭಾಗವಹಿಸಿದರು; ಅಂದು ಗಿಜಿಗುಡುತ್ತಿದ್ದ ಕಲಾಮಂದಿರ 'ಮುಕ್ತ"ದ ಅಪಾರ ಜನಪ್ರಿಯತೆಯನ್ನು ಪ್ರಚುರಪಡಿಸಿ, ಉತ್ತಮವಾಗಿ ಯಾವುದನ್ನೇ ಕೊಟ್ಟರೂ ಕನ್ನಡಿಗರು ಹೃದಯಪೂರ್ವಕವಾಗಿ ಸ್ವೀಕರಿಸುತ್ತಾರೆ, ಬೆನ್ನು ತಟ್ಟುತ್ತಾರೆ, ಸಂತೋಷಿಸುತ್ತಾರೆ- ಎಂಬುದನ್ನು ಸಾಕ್ಷೀಕರಿಸಿತು.

    ಸಂವಾದದ ಮೊದಲಿಗೆ ಸೀತಾರಾಂ ಅವರು ಮಾತನಾಡಿ- ''ಮುಕ್ತ" ದಲ್ಲಿ ಬರುವ ಸ್ವಾಮೀಜಿ ಮತ್ತು ವಿಧವೆ ಗೌರಿಯರ ಮದುವೆ ಆಗಬೇಕೆ? ಬೇಡವೆ?"- ಎಂದು ಎಸ್‌. ಎಂ. ಎಸ್‌. ಮೂಲಕ ಪ್ರತಿಕ್ರಿಯೆ ಕೇಳಿದಾಗ ಸುಮಾರು 21000 ಸಂದೇಶಗಳು ಮದುವೆ ಪರವಾಗಿಯೂ, 19000 ಸಂದೇಶಗಳು ಮದುವೆ ವಿರುದ್ಧವಾಗಿಯೂ ಬಂದವು, ಇದರಿಂದ ಬದಲಾದ ಸಾಮಾಜಿಕ ನಿಲುವಿನ ಅರಿವಾಗಿ ನನಗೆ ತುಂಬಾ ಸಂತಸವಾಯಿತು; ಹೀಗಿದ್ದರೂ ಸ್ವಾಮೀಜಿ ಮತ್ತು ಗೌರಿಗೆ ಮದುವೆ ಮಾಡಿಸಲು ಸಾಧ್ಯವಾಗಲಿಲ್ಲ! ಏಕೆಂದರೆ, ಅದಾಗಲೇ ಮದುವೆಯಾಗದ ಹಾಗೆ ಕಥೆ ಚಿತ್ರೀಕರಣ ಮುಂದುವರಿಸಿ ಮುಗಿಸಿಯಾಗಿತ್ತು..!""- ಎಂದು ತಮ್ಮಿಂದ ಪ್ರೇಕ್ಷಕ ವರ್ಗಕ್ಕೆ ಆಗಿರಬಹುದಾದ 'ನಿರಾಶೆ", ಒಂದು ಬಗೆಯ 'ಮೋಸ"ದ ಬಗ್ಗೆ ಕ್ಷಮೆ ಕೇಳಿದಾಗ ಎಲ್ಲರ ಹುಬ್ಬುಗಳೂ ಮೇಲೇರಿದ್ದವು.

    ''ನಿಮ್ಮಲ್ಲಿ ಕುತೂಹಲ ಕ್ರಿಯೇಟ್‌ ಮಾಡಲಿಕ್ಕಾಗಿ ಹಾಗೆ ಮಾಡಿದೆ"" ಎನ್ನುತ್ತಾ ಮಾತು ಮುಂದುವರೆಸಿದ ಅವರು, ಕೆಲವು ಮಠಾಧೀಶರಿಂದ 'ಮದುವೆ ಮಾಡಿಸಬೇಡಿ" ಎಂದು ಸಂದೇಶಗಳೂ ಒತ್ತಡರೂಪದಲ್ಲಿ ಬಂದದ್ದನ್ನು ಹೇಳಲು ಮರೆಯಲಿಲ್ಲ.

    ಸಭಿಕರ ಪ್ರಶ್ನೆಗಳಿಗೆ ಸೀತಾರಾಂ ಉತ್ತರಿಸತೊಡಗಿದಾಗ ಪ್ರಶ್ನೆ ಕೇಳಲು ಸ್ಪರ್ಧೆಯೇ ಏರ್ಪಟ್ಟ ಸ್ಥಿತಿ ನಿರ್ಮಾಣವಾಯಿತು. ನಿಯಂತ್ರಣ ವ್ಯವಸ್ಥೆಗಾಗಿ, ಕೊನೆಗೆ ಗಾಯಕ ಸಿ. ಅಶ್ವಥ್‌ವರು ಮತ್ತು ಹನುಮಂತರಾಯಪ್ಪ ಅವರು ಆರಿಸಿ, ಕೈತೋರಿದವರು ಮಾತ್ರ ಪ್ರಶ್ನೆಗಳನ್ನು ಕೇಳಲು ಸೂಚಿಸಲಾಯಿತು. ಈ ನಿರ್ಬಂಧ ಅನಿವಾರ್ಯವಾಗಿತ್ತಾದರೂ, ಭಾರೀ ಸಂಖ್ಯೆಯ ಅಭಿಮಾನಿಗಳ ಉತ್ಸಾಹಕ್ಕೆ ತಡೆಯಾಡ್ಡಿದಂತಾಯಿತು. ಆನಂತರದಲ್ಲಿ ಪ್ರಶ್ನೆಗಳಿಗೆ ಸೀತಾರ್‌ಾಂ ಹಾಗೂ ಪಾತ್ರಧಾರಿಗಳು ಉತ್ತರಿಸತೊಡಗಿದರು.

    ಪ್ರಶ್ನೆಗಳನ್ನು ಬರವಣಿಗೆಯ ರೂಪದಲ್ಲಿ ಮೊದಲೇ ಪಡೆದು ಸೂಕ್ತವಾದದ್ದನ್ನಾಯ್ದು ಅಲ್ಲಿ ಪ್ರಶ್ನೆಕೇಳಿದವರನ್ನೂ ಕೂಗಿ ಎಬ್ಬಿಸಿ ಉತ್ತರಿಸಬಹುದಿತ್ತೇನೋ ಎನಿಸಿತು. ಏಕೆಂದರೆ ಪ್ರಶ್ನೆ ಕೇಳಲು ಅವಕಾಶ ಪಡೆದವರಲ್ಲಿ ಅನೇಕರು, ಧಾರಾವಾಹಿಗೆ ಸಂಬಂಧಿಸಿದ ಪ್ರಶ್ನೆ ನೇರವಾಗಿ ಕೇಳದೆ, ಬರೀ ಹೊಗಳುವುದಕ್ಕೆ ಸಮಯ ವ್ಯಯ ಮಾಡುತ್ತಿದ್ದರು. (ಇನ್ನೂ ಕೆಲವರು ತಮ್ಮ ಪ್ರಶ್ನೆ ಸರಿಯಾಗಿ ಕೇಳಲಾಗದೆ ತಡಬಡಾಯಿಸಿ ಗೋಜಲುಗೊಳಿಸಿದರೆ, ಇನ್ನು ಕೆಲವರು ಕೇಳಿದ್ದನ್ನೇ ಕೇಳಿ ಬೇಸರ ತರಿಸಿದರು.)

    ಕೋರ್ಟ್‌ ದೃಶ್ಯದಲ್ಲಿ ಕವಿಗಳ ಕಾವ್ಯವನ್ನು ಉದ್ಧರಿಸುವ ಬಗ್ಗೆ ''ಕೋರ್ಟಿನಲ್ಲಿ ಹಾಗೆ ಅವಕಾಶ ಉಂಟೆ?""- ಎಂದು ಕೇಳಿದ ಡಾ। ಸಿ. ಕೆ. ಎನ್‌. ರಾಜಾ ಅವರಿಗೆ 'ಕನ್ನಡದ ಪ್ರೀತಿಗಾಗಿ, ಕವಿಗಳನ್ನು ಕನ್ನಡಿಗರಿಗೆ ನೆನಪಿಸುವುದಕ್ಕಾಗಿ ತಾವು ಹಾಗೆ ಮಾಡುತ್ತಿರುವುದಾಗಿ" ಸೀತಾರಾಂ ಅವರಿಂದ ಸಮರ್ಥನೆಯ ಉತ್ತರ ಬಂತು.

    ಮಗುವೊಂದು 'ಎಲ್ಲರೂ ಕಿಟಕಿ ಬಳಿ ಹೋಗಿ ಏಕೆ ಅಳುತ್ತಾರೆ?" ಎಂದು ಕೇಳಿದ ಪ್ರಶ್ನೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಅದಕ್ಕೆ ಗೌರಿ ಪಾತ್ರಧಾರಿ 'ಯಾರೂ ಕಾಣುವುದಿಲ್ಲವೆಂದು ಹಾಗೂ ಶೂಟಿಂಗ್‌ಗೆ ಅನುಕೂಲವಾಗಲೆಂದು"- ಎಂದು ತಮಾಷೆಯಾಗಿ ಹೇಳಿದಾಗ ಮತ್ತೆ ಕಲಾಮಂದಿರ ಕುಲುಕುಲುಕಿಸಿತು.

    ''ಸಿ. ಇ. ಟಿ. ಸಮಸ್ಯೆಯನ್ನು ಏಕೆ ಎತ್ತಿಕೊಂಡಿಲ್ಲ?"" ಎಂಬ ಪ್ರಶ್ನೆಗೆ, ಸೀತಾರಾಂ ''ಅದನ್ನು ಎತ್ತಿಕೊಳ್ಳಲೇಬೇಕೆನ್ನುವವರು ಕೈ ಎತ್ತಿರಿ"" ಎಂದಾಗ, ಇಡೀ ಸಭೆ ಕೈ ಎತ್ತಿ ಸಮ್ಮತಿ ಸೂಚಿಸಿತು. ಅದನ್ನು ನೋಡಿದ, ಸೀತಾರಾಂ ಮುಂದೆ ಅದನ್ನು ಎತ್ತಿಕೊಳ್ಳುವುದಾಗಿ ಭರವಸೆ ನೀಡಿ, ಸಭಿಕರನ್ನು ತೃಪ್ತಗೊಳಿಸಿದರು. ಹೀಗೆ ಅನೇಕ ಪ್ರಶ್ನೆಗಳು ಹಾಸ್ಯಮಯವಾಗಿ, ಅರ್ಥಗರ್ಭಿತವಾಗಿ ಉತ್ತರ ಪಡೆದು ನೆರೆದವರನ್ನು ಖುಷಿ ಪಡಿಸಿದವು. ಬಂದಿದ್ದ ಅನೇಕ ಗಣ್ಯಾತಿಗಣ್ಯರನ್ನು ಕೊನೆಯವರೆಗೂ ಕುಳ್ಳಿರಿಸಿಕೊಂಡು, ನೋಡಿಸಿಕೊಂಡ ಕಾರ್ಯಕ್ರಮವಾಗಿ 'ಮುಕ್ತ" ಸಂವಾದ ಕವಿ ಎಚ್‌. ಎಸ್‌. ವೆಂಕಟೇಶಮೂರ್ತಿ ಬರೆದ ಶೀರ್ಷಿಕೆ ಗೀತೆಯನ್ನು ಖ್ಯಾತ ಗಾಯಕ ಸಿ. ಅಶ್ವಥ್‌ ಹಾಡಿದಾಗ, ಮೊದಲ ಸಮಾವೇಶ ಮುಕ್ತಾಯ ಕಂಡದ್ದು ಸಂಜೆ 5 ಗಂಟೆಗೆ. ಸತತವಾಗಿ ಸುಮಾರು 5 ಗಂಟೆ ಕುಳಿತಿದ್ದ, ಅಂದರೆ ಉಚಿತ ಪಾಸ್‌ ದೊರೆತರೂ ಬೆಳಗಿನ 11 ಗಂಟೆಯಿಂದಲೇ ಆಸನಕ್ಕಾಗಿ ಆಶಿಸಿ, ಬಂದು ಕಾದು ಕ್ಯೂ ನಿಂತು ಆಸನ ಪಡೆದುಕೊಂಡಿದ್ದ ಪ್ರೇಕ್ಷಕರಿಗೆ ಒಟ್ಟು 5 ಗಂಟೆ ಕುಳಿತಿದ್ದರೂ ಹೊರ ಹೋಗುವ ಮನಸ್ಸು ಖಂಡಿತಾ ಇರಲಿಲ್ಲ. ''ಯಾಕಾದರೂ ಮುಗಿಯಿತೋ""- ಎಂದೆನಿಸುತ್ತಿದ್ದುದು ಸಂವಾದದ ಯಶಸ್ಸು ಸಾರುತ್ತಿತ್ತು. (ಮೊದಲನೆಯ ಸಮಾವೇಶದಲ್ಲಿ ಕಲಾಮಂದಿರ ತುಂಬಿ, ಸುಮಾರು ಒಂದು ಸಾವಿರದ ನಾಲ್ಕುನೂರು ಜನ ಇದ್ದರು; ಸಂಜೆ ಐದರಿಂದ ಸುಮಾರು ಎಂಟೂ ಮುಕ್ಕಾಲರವರೆಗೆ ನಡೆದ ಎರಡನೆಯ ಪಾಳಿಗೆ ಸಹ ಸುಮಾರು ಒಂದು ಸಾವಿರದ ಐದುನೂರು ಜನ ಇದ್ದಿರಬಹುದು)

    ನಾಗಲಕ್ಷ್ಮಿ ಹರಿಹರೇಶ್ವರ ಅವರು ವಂದನಾರ್ಪಣೆ ಮಾಡುತ್ತಾ, ''ಎಲ್ಲರಿಗೂ ಉಚಿತವಾಗಿ ಪ್ರವೇಶಪತ್ರ ಹಂಚುವಾಗ ಮತ್ತು ಇಂದು ಎರಡೂ ದಿನ ಬಿಸಿಲಲ್ಲಿ ನಿಮ್ಮನ್ನು ಸರದಿಯಲ್ಲಿ ನಿಲ್ಲಿಸಿ ನೋಯಿಸಿದೆವು; ಕ್ಷಮಿಸಿ. ಇಂದು ಇಲ್ಲಿ ಕೆಲವರು ಅಕ್ಕಪಕ್ಕದಲ್ಲಿಯೇ ಪೂರ್ಣ ನಿಂತೇ ಕಾರ್ಯಕ್ರಮ ವೀಕ್ಷಿಸಿದ್ದೀರಿ; ಭಾರೀ ಸಂಖ್ಯೆಯಲ್ಲಿ ನಮ್ಮ ನಿರೀಕ್ಷೆ ಮೀರಿ ಬಂದಿರಿ; ನಿಂತವರಿಗೆ ಆಸನ ವ್ಯವಸ್ಥೆ ಹೆಚ್ಚುವರಿಯಾಗಿ ಒದಗಿಸಲಾಗಲಿಲ್ಲ, ಅದಕ್ಕಾಗಿ ಕೂಡಾ ಕ್ಷಮೆ ಇರಲಿ"" ಎಂದಾಗ, ಅವರ ಪ್ರಾಮಾಣಿಕತೆಯ ಅರಿವಿದ್ದವರಿಗೆಲ್ಲ ಇಂಥದ್ದೊಂದು ಕಾರ್ಯಕ್ರಮ ಸಂಘಟಿಸಿದ್ದಕ್ಕಾಗಿ ಅವರ ಬಗ್ಗೆ ಕೃತಜ್ಞತೆ ಮೂಡಿತ್ತು. ದಂಪತಿಗಳಿಬ್ಬರೂ ಬಂದಿದ್ದ ಪ್ರತಿಯಾಬ್ಬ ನಟನಟಿಯರಿಗೆ ಹಾಗೂ ತಾಂತ್ರಿಕ ವರ್ಗದವರಿಗೆಲ್ಲಾ ಶಾಲು ಹೊದಿಸಿ, ಸೀರೆ ಇತ್ತು, 'ನೆನಪಿ"ನ ಕಾಣಿಕೆಯ ಕನ್ನಡ ಪುಸ್ತಕ ಕೊಡುತ್ತಿರುವುದನ್ನು ಕಂಡಾಗ ನಮಗೆಲ್ಲ ಆಶ್ಚರ್ಯವಾಗದಿರಲಿಲ್ಲ. ಮೊದಲಿಗೆ ನಿರ್ದೇಶಕ ಸೀತಾರಾಂ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದ್ದ- ''ಈ ದಂಪತಿಗಳಿಗೆ ಕನ್ನಡದ ಹುಚ್ಚು, ಇವರು ಅಮೆರಿಕಾದಲ್ಲಿಯೂ ಕನ್ನಡಿಗ ಅತಿಥಿಗಳನ್ನು ಹೀಗೇ ನೋಡಿಕೊಳ್ಳುತ್ತಿದ್ದರು"" ಎಂದಿದ್ದ ಮಾತಿನಲ್ಲಿ ಅತಿಶಯೋಕ್ತಿ ಇರಲಿಲ್ಲ- ಎಂದೆನಿಸಿತ್ತು.

    ಮೈಸೂರ ಕನ್ನಡಿಗರಿಗೆ ಇಂಥದ್ದೊಂದು ಉತ್ತಮ ಉಚಿತ ಕಾರ್ಯಕ್ರಮ ದೊರಕಿಸಿಕೊಟ್ಟಿದ್ದಕ್ಕಾಗಿ ಹರಿ ದಂಪತಿಗಳಿಗೊಂದು ಉಚಿತ ಥ್ಯಾಕ್ಸ್‌ ಹೇಳಿ, ಮುಂದಿನ ಎರಡನೇ ಅವಧಿ ಸಂವಾದಕ್ಕೆ ಅನುವು ಮಾಡಿಕೊಡಲು ಒಲ್ಲದ ಮನಸ್ಸಿನಿಂದ ನಾನೂ ಎಲ್ಲರೊಡನೆ ಕಲಾಮಂದಿರದಿಂದ ದೂರ ಬಂದೆ. ಆಗ ನನ್ನಲ್ಲಿದ್ದುದು ಸಮಯ ಸದ್ವಿನಿಯೋಗವಾದ 'ಮುಕ್ತ" ಭಾವ ಮಾತ್ರ. ಹಾಗಾಗಿ 'ಮುಕ್ತ ಸಂವಾದ" ಸಾರ್ಥಕವಾದಂತೆ ಎನಿಸಿ ಅಶ್ವತ್ಥರ 'ಮುಕ್ತ-ಮುಕ್ತ-ಮುಕ್ತ" ಕಿವಿಯಲ್ಲಿ ಆತ್ಮೀಯವಾಗಿ ರಿಂಗಣಿಸುತ್ತಿತ್ತು.

    English summary
    Titbits of T.N. Seetharams Kannada Tele serial Muktha discussion in Mysore on Sep. 26th 2004. A report by Jayappa Honnali, Mysore
    Sunday, June 30, 2013, 15:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X