»   » ಅಮಿತಾಬ್‌ ಪುತ್ರಿಯಾಗಿ ರಮ್ಯ

ಅಮಿತಾಬ್‌ ಪುತ್ರಿಯಾಗಿ ರಮ್ಯ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಈಗಿನ ಹೆಸರು- ರಮ್ಯ. ನಿಜ ಹೆಸರು- ಸ್ಪಂದನ.

2003ನೇ ಇಸವಿಯಲ್ಲಿ ಎರಡು ಕನ್ನಡ ಚಿತ್ರಗಳು, ಒಂದು ತೆಲುಗು ಹಾಗೂ ಒಂದು ತಮಿಳು ಚಿತ್ರ ತೆರೆ ಕಂಡಿವೆ. ನವೆಂಬರ್‌ 29ನೇ ತಾರೀಕಿನ ಆಕೆಯ ಹುಟ್ಟುಹಬ್ಬದ ಹಿಂದಿನ ದಿನ ಇನ್ನೊಂದು ಕನ್ನಡ ಚಿತ್ರದ ಅವಕಾಶ. ಚಿನ್ನೇಗೌಡರ ಮಗ ಮುರಳಿ ಇದರ ನಾಯಕ. ಅದಕ್ಕೂ ಕೆಲವು ದಿನಗಳ ಮುಂಚೆ ಉಪೇಂದ್ರ ಚಿತ್ರದ ಒಂದು ಆಫರ್‌. ಕನಕಪುರ ಶ್ರೀನಿವಾಸ್‌ ಅದರ ನಿರ್ಮಾಪಕ. ಇದರ ನಡುವೆಯೇ ಬಾಲಿವುಡ್‌ನ ದೊಡ್ಡದೊಂಡು ಆಫರ್‌ !

ರಮ್ಯ ಮುಖದ ತುಂಬಾ ಈಗ ಭರ್ತಿ ನಗು. ‘ಎಕ್ಸ್‌ಕ್ಯೂಸ್‌ ಮಿ’ ಚಿತ್ರಕ್ಕೆ ಒಳ್ಳೆಯ ಓಪನಿಂಗ್‌ ಸಿಕ್ಕಿದೆ. ಅದಕ್ಕೂ ಮಿಗಿಲಾಗಿ ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌ ಹಾಗೂ ಶಿಲ್ಪಾ ಶೆಟ್ಟಿ ನಟಿಸಲಿರುವ ಹಿಂದಿ ಚಿತ್ರದಲ್ಲಿ ಈಕೆಗೊಂದು ಪಾತ್ರ ಸಿಕ್ಕಿದೆ. ಚಿತ್ರದ ಹೆಸರು ಜೋಕರ್‌. ತೆಲುಗಿನ ಅಭಿಮನ್ಯು ಚಿತ್ರ ಪರವಾಗಿಲ್ಲ ಎಂಬಂತೆ ಓಡುತ್ತಿದೆ. ಕುತ್ತು ಎಂಬ ತಮಿಳು ಚಿತ್ರದ ಶೂಟಿಂಗ್‌ ಮುಗಿಸಿ ಆಗಿದೆ. ಇನ್ನೇನಿದ್ದರೂ ಮುಂಬಯಿ ಪಯಣ, ಅಮಿತಾಬ್‌ ಗಾರುಡಿಯ ದರ್ಶನ ಬಾಕಿ.

ಕನ್ನಡದ ಯಾವ ಹೊಸ ತಾರೆಯರಿಗೂ ಸಿಗದ ಇಂಥಾ ಅವಕಾಶ ರಮ್ಯಾಗೆ ಸಿಕ್ಕಿದ್ದು ಒಂದು ಆಕಸ್ಮಿಕ. ತೆಲುಗು ಚಿತ್ರ ಅಭಿಮನ್ಯು ಕನ್ನಡದ ‘ಅಭಿ’ಯ ರೀಮೇಕು. ರಾಕ್‌ಲೈನ್‌ ವೆಂಕಟೇಶ್‌ ಇದರ ನಿರ್ಮಾಪಕ. ಬೆಂಗಳೂರಿನಲ್ಲಿ ಇತ್ತೀಚೆಗೆ ರಾಕ್‌ ಈ ಚಿತ್ರ ಪ್ರದರ್ಶನ ಏರ್ಪಾಟು ಮಾಡಿದ್ದರು. ಅಶೋಕ್‌ ಶರ್ಮ ಹಾಗೂ ಗೋಪಿ ಮಲ್ಯ ಎಂಬಿಬ್ಬರು ದೊಡ್ಡ ಕುಳಗಳು ಚಿತ್ರ ನೋಡಲು ಬಂದಿದ್ದರು. ಯಾವುದೋ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದ ಅವರು ಚಿತ್ರ ನೋಡಿದ್ದು ಅಕಸ್ಮಾತ್ತಾಗಿ. ಆಮೇಲೆ ಫೋನ್‌ ಬಂತು. ಅಮಿತಾಬ್‌ ಬಚ್ಚನ್‌ ಮಗಳಾಗಿ ನಟಿಸುತ್ತೀಯಾ ಅಂತ ಶರ್ಮ ಕೇಳಿದರು. ರಮ್ಯಾಗೆ ಪರಮಾಶ್ಚರ್ಯ. ಅವರು ಬೆಂಗಳೂರಿಗೆ ಬಂದಿದ್ದೇ ಅಮಿತಾಬ್‌ ಮಗಳ ಪಾತ್ರಕ್ಕೆ ಒಂದು ಒಳ್ಳೆಯ ಮುಖವನ್ನು ಹುಡುಕಲು ಅನ್ನೋದು ರಮ್ಯಾಗೆ ಗೊತ್ತಾಗಿದ್ದೇ ಆಗ.

ರಮ್ಯಾ ಹುಟ್ಟುಹಬ್ಬಕ್ಕೆ ರಕ್ಷಿತಾ ಬಂದಿರಲಿಲ್ಲ. ಈಚೀಚೆಗೆ ನಾನು ಹಾಗೂ ರಕ್ಷಿತಾ ಶತ್ರುಗಳು ಅಂತ ಕೆಲವರು ಚುಚ್ಚುತ್ತಿದ್ದಾರೆ ಅಂತ ಖುದ್ದು ರಮ್ಯಾ ಮೆಲ್ಲಗೆ ಮಾತಿಗೆ ಕೂತರು. ‘ನಾನು ಹಾಗೂ ರಕ್ಷಿತಾ ಒಳ್ಳೆಯ ಸ್ನೇಹಿತೆಯರು. ನಾನು ಆಕೆಯನ್ನು ಈವರೆಗೆ ನೋಡೇ ಇಲ್ಲ. ಆದರೆ ಫೋನಿನಲ್ಲಿ ಸಾಕಷ್ಟು ಹರಟಿದ್ದೇವೆ. ಮನೆಯಿಂದ ದೂರ ಉಳಿದಿರುವ 50 ಮಕ್ಕಳಿಗೆ ನನ್ನ ಹುಟ್ಟುಹಬ್ಬದ ದಿನ ಊಟ ಹಾಕಿದ್ದು ದೊಡ್ಡ ಸುದ್ದಿಯಾಯಿತು. ನಾನೀಗ ತಾರೆ ಎಂಬ ಕಾರಣಕ್ಕೆ ಹೀಗಾಯಿತು. ನಾನು ಸಿನಿಮಾದಲ್ಲಿ ನಟಿಸುವ ಮುಂಚೆಯೂ ಇಂತಹ ಕೆಲಸ ಮಾಡುತ್ತಿದ್ದೆ. ರಕ್ಷಿತಾ ಜೊತೆ ಕೂಡ ಈ ವಿಷಯದ ಬಗ್ಗೆ ಮಾತಾಡಿದ್ದೇನೆ. ಆಕೆಗೂ ಇಂತಹ ಕೆಲಸ ಮಾಡುವುದು ತುಂಬಾ ಇಷ್ಟ. ನನ್ನ ಹುಟ್ಟುಹಬ್ಬಕ್ಕೆ ರಕ್ಷಿತಾಗೂ ಬುಲಾವು ಕೊಟ್ಟಿದ್ದೆ. ಆದರೆ ಲವ್‌ ಚಿತ್ರದ ಶೂಟಿಂಗ್‌ಗೆ ದುಬೈಗೆ ಹೋಗಿದ್ದ ಕಾರಣ ಬರಲಿಲ್ಲ. ಬಂದ ನಂತರ ಆಕೆ ಹಾಗೂ ನನ್ನ ಮುಖಾಮುಖಿ. ಅದಕ್ಕೆ ಕಾತುರಳಾಗಿದ್ದೇನೆ’ ಎಂದು ರಮ್ಯ ವರದಿ ಒಪ್ಪಿಸಿದರು.

ಆರೋಪಗಳನ್ನು ತಳ್ಳಿಹಾಕುವ ಉಮೇದಿಯ ಅವರ ಮಾತು ಮುಂದುವರೆಯಿತು... ‘ಕೆಲವರು ನಾನು ವಲಸೆ ಹೋಗಿಬಿಟ್ಟೆ, ಕನ್ನಡ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ ಅಂತ ಪುಕಾರೆಬ್ಬಿಸಿದರು. ನಾನು ಕಾಲ್‌ಷೀಟ್‌ ಕೊಡುವ ಅವಕಾಶ ಇದ್ದರೆ ಕನ್ನಡ ಚಿತ್ರಗಳನ್ನು ಬಿಡೋದೇ ಇಲ್ಲ. ಹಾಗೆ ಮಾಡೋದಿದ್ರೆ ಉಪೇಂದ್ರ ಹಾಗೂ ಮುರಳಿ ನಟನೆಯ ಚಿತ್ರಗಳನ್ನು ನಾನೇಕೆ ಒಪ್ಪಿಕೊಳ್ಳುತ್ತಿದ್ದೆ’ ಅತ ಪ್ರಶ್ನೆ ಎಸೆಯುವ ರಮ್ಯ, ಅಲ್ಲಿಗೆ ಸುಮ್ಮನೆ ಇಲ್ಲೇ ನಮ್ಮನೆ ಅಂತ ನಗುತ್ತಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada