»   » ಶಿವರಾಜಕುಮಾರ್ 47 : ಹುಟ್ಟುಹಬ್ಬದ ಶುಭಾಶಯಗಳು

ಶಿವರಾಜಕುಮಾರ್ 47 : ಹುಟ್ಟುಹಬ್ಬದ ಶುಭಾಶಯಗಳು

Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇಂದು ತಮ್ಮ 47ನೇ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿಕೊಂಡರು. ಮುಂಜಾನೆಯಿಂದಲೇ ಅವರ ಮನೆ ಮುಂದೆ ನೆರದಿದ್ದ ಅಭಿಮಾನಿಗಳ ಶುಭ ಹಾರೈಕೆಯನ್ನು ಸ್ವೀಕರಿಸಿ ಮಾತನಾಡಿದ ಶಿವಣ್ಣ, ಬರುವ ವರ್ಷದಿಂದ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಮನರಂಜನೆ ನೀಡುವುದಾಗಿ ಹೇಳಿದರು.

*ದಟ್ಸ್ ಕನ್ನಡ ಸಿನಿ ಡೆಸ್ಕ್

ನಗರ ವಿವಿಧೆಡೆಗಳಲ್ಲಿ ಶಿವರಾಜ್ ಅಭಿಮಾನಿ ಸಂಘದ ವತಿಯಿಂದ ದಿನವಿಡಿ, ರಕ್ತದಾನ ಶಿಬಿರ, ಸಿಹಿ ಹಂಚಿಕೆ, ಪೂಜೆ ಪುನಸ್ಕಾರಗಳು ಸಾಂಗವಾಗಿ ನಡೆದ ವರದಿಗಳು ಬಂದಿವೆ. 40 ದಾಟಿದರೂ ಸಪೂರ ಮೈಯನ್ನು ಉಳಿಸಿಕೊಂಡಿರುವ ರಹಸ್ಯವೇನು ಎಂದು ಕೇಳಿದರೆ, ಮುಗುಳ್ನಗೆ ಬೀರಿದ ಶಿವಣ್ಣ, ಅದೆಲ್ಲಾ ಅಪ್ಪಾಜಿ ಅವರ ವರ. ಮೈಯಿ ಮನಸ್ಸು ಯಾವಾಗಲೂ ದಂಡಿಸಬೇಕು. ಆಗಲೇ ಸರಿಯಾದ ಫಲ ಸಿಗುವುದು ಎಂದು ಹೇಳುತ್ತಿದ್ದರೂ. ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೀನಿ ಅಷ್ಟೇ. ಕರ್ನಾಟಕ ಜನತೆಯ ಅಭಿಮಾನ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುವಂತೆ ಪ್ರೇರೆಪಿಸುತ್ತದೆ ಎಂದರು ನಿಮ್ಮನ್ನು ನಿರ್ದೇಶಕರಾಗಿ ನೋಡುವುದು ಯಾವಾಗ? ಎಂದರೆ, ಸದ್ಯಕ್ಕಂತೂ ಇಲ್ಲ. ವರ್ಷವಿಡೀ ತುಂಬಾ ಪ್ರಾಜೆಕ್ಟ್ ಇದೆ. ಖಂಡಿತಾ ನಿರ್ದೇಶನ ಮಾಡುವ ಆಸೆ ಇದೆ. ಕಾಲ ಕೂಡಿಬರಬೇಕು ಎಂದರು. ಬದಲಾಗುತ್ತಿರುವ ಕೇಶ ಶೈಲಿಯ ಬಗ್ಗೆ ಕೇಳಿದಾಗ. ಪಾತ್ರ ಬೇಡಿದಂತೆ ಅದಕ್ಕೆ ತಕ್ಕ ವೇಷ ಧರಿಸುವುದು ಅವಶ್ಯ. ಜೋಗಿಯ ಯಶಸ್ಸಿಗೆ ಅವನ ಗೆಟೆಪ್ ಕೂಡ ಕಾರಣ ಅನ್ನೋದು ಮರೆಯಂಗಿಲ್ಲ. ಜನ ಮೆಚ್ಚಿಗೆಯಾದರೆ ಸಾಕು ಕೊಡಂಗಿ ವೇಷ ಹಾಕಿ ಕುಣಿಯಲಿಕ್ಕೂ ತಯಾರು ಎಂದು ಶಿವರಾಜ್ ನಕ್ಕರು.

ಶಿವರಾಜ್ ಈಗ ಬಿಡುವಿಲ್ಲದೇ ದುಡಿಯುತ್ತಿದ್ದಾರೆ. ಬಹು ನಿರೀಕ್ಷೆಯ 'ಮಾದೇಶ' ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಹಾಡುಗಳು, ಪ್ರೋಮೋಸ್ ನೋಡಿ ಜನ ಮೆಚ್ಚಿದ್ದಾರೆ. ರವಿಶ್ರೀವತ್ಸ ಚಿತ್ರವನ್ನು ಅದ್ದೂರಿಯಾಗಿ ಚಿತ್ರೀಕರಿಸಿದ್ದಾರೆ. ಇದರ ನಂತರ 'ನಂದ', 'ಪರಮೇಶ್ ಪಾನ್ ವಾಲ' ಕಾದಿದೆ. 'ಎಕೆ 47' ಚಿತ್ರದ ನಂತರ ಓಂ ಪ್ರಕಾಶ್ ರಾವ್ ಜತೆಗೂಡಿ 'ಎಕೆ 97' ಚಿತ್ರ ನೀಡಲು ಮುಂದಾಗಿದ್ದಾರೆ. 'ನಂದ ನಂದಿತ' ಚಿತ್ರ ಕೊಟ್ಟ ರಮೇಶ್ ಕಶ್ಯಪ್ ಶಿವರಾಜ್ ಗೆ 'ಭಾಗ್ಯದ ಬಳೆಗಾರ ' ಗೆಟೆಪ್ ಹಾಕಿಸುತ್ತಿದ್ದಾರೆ. ಸಾಯಿಪ್ರಕಾಶ್ ನಿರ್ದೇಶನದ ಈಚಿತ್ರಕ್ಕೆ ಅಜಯ್ ಕುಮಾರ್ ಕಥೆ ಬರೆದಿದ್ದಾರೆ.

ಎನ್ ಎಂ ಸುರೇಶ್ ನಿರ್ಮಾಣದ 'ಚೆಲುವೇ ನಿನ್ನ ನೋಡಲು' ಚಿತ್ರವನ್ನು ರಘುರಾಂ ನಿರ್ದೇಶನ ಮಾಡುತ್ತಿದ್ದಾರೆ. ಗಾಂಧಿ ಸ್ಮೈಲ್ ಎಂಬ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲು ಶಿವರಾಜ್ ತಯಾರಾಗಿದ್ದಾರೆ. ಇದರ ಜೊತೆಗೆ ಪಿ. ಸತ್ಯ ಹಾಗೂ ಶಿವರಾಜ್ ಜೋಡಿ 'ಡಾನ್' ಚಿತ್ರದ ನಂತರ ಮತ್ತೆ ಒಂದಾಗಿ 'ಹೊಡಿಮಗ ' ಎಂಬ ಚಿತ್ರವನ್ನು ನೀಡಲಿದೆ. ಈ ಚಿತ್ರ ಅಗಸ್ಟ್ ಎರಡನೇ ವಾರ ಸೆಟ್ಟೇರಲಿದೆ. ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ ಕೆ. ಮಂಜು ನಿರ್ಮಾಣದ ಹೆಸರಿಡದ ಚಿತ್ರಕ್ಕೆ ಕೂಡ ಶಿವರಾಜ್ ನಾಯಕರಾಗಿದ್ದಾರೆ. ಶಿವರಾಜ್ ಗೆ 'ಸತ್ಯ ಇನ್ ಲವ್' ಯಶಸ್ವಿ ಗೊಳಿಸಿದ ನಿರ್ದೇಶಕ ರಾಘವಲೋಕಿ ಅವರ ಇನ್ನೊಂದು ಚಿತ್ರದಲ್ಲಿ ಕೂಡ ಶಿವರಾಜ್ ನಾಯಕ. 'ಸೆಪ್ಟೆಂಬರ್ 11' ಎಂಬ ಥ್ರಿಲ್ಲರ್ ಚಿತ್ರ ಕೂಡ ಕಾದಿದೆ. ಕೌಟುಂಬಿಕ ಹಿನ್ನೆಲೆಯ ಕಥೆಯುಳ್ಳ ಮೀರಾಜಾಸ್ಮಿನ್ ಜತೆಗಿನ 'ದೇವರುಕೊಟ್ಟತಂಗಿ' ಯನ್ನು ಮರೆಯುವಂತಿಲ್ಲ.

ಒಟ್ಟಿನಲ್ಲಿ ಶಿವಣ್ಣನಿಗೆ ನಲವತ್ತರ ನಂತರ ಯೌವನ ಹುರುಪು, ಅವಕಾಶಗಳು ಮತ್ತೆ ಚಿಗುರೊಡೆದಿದೆ. 90 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ಕೂಡ ಕನ್ನಡದ ಬಹುಬೇಡಿಕೆಯ ನಟ ಎಂಬ ಕೀರ್ತಿಯನ್ನು ಉಳಿಸಿ ಕೊಂಡಿರುವ ಪುಟ್ಟಸ್ವಾಮಿ ಅಲಿಯಾಸ್ ಶಿವರಾಜ್ ಅವರ ಯಶಸ್ಸು ಹೀಗೆ ಮುಂದುವರೆಸಲಿ ಎಂದು ನಮ್ಮ ತಂಡದ ಹಾರೈಕೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada