ತಮ್ಮ ಅಮೂಲ್ಯ ಮತ ಚಲಾಯಿಸಿದ ನಟಿ ರಮ್ಯಾ
ರಾಜ್ಯ ಯುವ ಕಾಂಗ್ರೆಸ್ ಚುನಾವಣೆಗೆ ಬುಧವಾರ (ಅ.12) ಹಾಗೂ ಗುರುವಾರ (ಅ.13) ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು ಕಣದಲ್ಲಿ ಒಟ್ಟು 18 ಮಂದಿಯ ಹಣೆಬರಹ ಅ.15ರಂದು ನಿರ್ಧಾರವಾಗಲಿದೆ. ಇಂದು ಗೋಲ್ಡನ್ ಗರ್ಲ್ ರಮ್ಯಾ ತಮ್ಮ ಅಮೂಲ್ಯ ಮತವನ್ನು ಚಲಾಯಿಸಿದರು.
ತಮ್ಮ ಬೆಂಬಲಿಗರ ಜೊತೆ ಬಂದ ನಟಿ ರಮ್ಯಾ ಶಿವಾಜಿನಗರ ಬೂತ್‌ನಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ರಾಜಕೀಯ ಕ್ಷೇತ್ರಕ್ಕೆ ಯುವ ಜನತೆಯನ್ನು ಸೆಳೆಯುವುದು ನನ್ನ ಗುರಿ. ಪಕ್ಷವನ್ನು ಬಲಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.
ಇಷ್ಟಕ್ಕೂ ಲಕ್ಕಿ ಗರ್ಲ್ ಯಾರಿಗೆ ಮತ ಹಾಕಿದರು? ಯೋಗ್ಯ ಅಭ್ಯರ್ಥಿಗೆ ಮತ ಹಾಕಿದ್ದಾಗಿ ತಿಳಿಸಿದರು. ಇಷ್ಟು ದಿನ ಯೂರೋಪ್ ಪ್ರವಾಸದಲ್ಲಿ ರಮ್ಯಾ ಮತದಾನದ ಸಲುವಾಗಿ ಬೆಂಗಳೂರಿಗೆ ಹಿಂತಿರುಗಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನಿರೀಕ್ಷೆ ಹುಟ್ಟಿಸಿ ಚುನಾವಣೆ ಬಗ್ಗೆ ತೀವ್ರ ಕುತೂಹಲ ಕೆರಳುವಂತೆ ಮಾಡಿದ್ದರು.
ಈ ಚುನಾವಣೆಯಲ್ಲಿ 36 ಸಾವಿರ ಮಂದಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಒಂಭತ್ತು ಸಾವಿರ ಮತಗಳನ್ನು ಪಡೆಯುವವರು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಡಿಕೆಶಿ ಬೆಂಬಲಿಗ ಶ್ರೀನಿವಾಸ್, ಶಾಸಕ ಕೃಷ್ಣಬೈರೇಗೌಡ ಬೆಂಬಲಿಗ ರಿಜ್ವಾನ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು. (ಒನ್‍ಇಂಡಿಯಾ ಕನ್ನಡ)


Click it and Unblock the Notifications











