ರೆಬೆಲ್ ಸ್ಟಾರ್ ಅಂಬರೀಷ್‌ಗೆ ಮುಖ್ಯಮಂತ್ರಿ ಸ್ಥಾನ!
ರೆಬೆಲ್ ಸ್ಟಾರ್ ಅಂಬರೀಷ್ ಕಡೆಗೂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ! ಮುಖ್ಯಮಂತ್ರಿ ಸ್ಥಾನಕ್ಕೆ ಮಂಡ್ಯ ಗಂಡು ಬಿಲ್ ಕುಲ್ ಅಂದ್ರು ಒಪ್ಪಿರಲಿಲ್ಲ. ಈ ಸ್ಥಾನವನ್ನು ಸ್ವೀಕರಿಸಬೇಕು ಎಂದು ಅವರನ್ನು ಒಪ್ಪಿಸುವಲ್ಲಿ ನಿರ್ಮಾಪಕ ವೀರೇಂದ್ರ ಬಾಬು ಕಡೆಗೂ ಯಶಸ್ವಿಯಾಗಿದ್ದಾರೆ. ಇದೆಲ್ಲಾ 'ಸ್ವಯಂಕೃಷಿ' ಚಿತ್ರದ ಝಲಕ್!
'ಸ್ವಯಂಕೃಷಿ' ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಗಮನಾರ್ಹ ಪಾತ್ರದಲ್ಲಿ ಅಂಬರೀಷ್ ಕಾಣಿಸಲಿದ್ದಾರೆ. ಈ ಪಾತ್ರಕ್ಕಾಗಿ ನಾಲ್ಕು ದಿನಗಳ ಕಾಲ್ ಶೀಟ್‌ಗೆ ಅಂಬಿ ಸಹಿ ಹಾಕಿದ್ದಾರೆ. ಚಿತ್ರದ ಆರಂಭದ ಹಾಡಿನಲ್ಲಿ ಅಂಬರೀಷ್ ಕಾಣಿಸಲಿದ್ದು, ಇದಕ್ಕಾಗಿ 25 ಅಡಿ ಎತ್ತರದ ಗಣೇಶ ಮೂರ್ತಿಯನ್ನು ವಿಶೇಷವಾಗಿ ತಯಾರಿಸಿ ಚಿತ್ರೀಕರಿಸಲಾಗಿದೆ.
ಚಿತ್ರದ ನಾಯಕ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಹೀಗೆ ಸಮಸ್ತ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತವರು ವೀರೇಂದ್ರ ಬಾಬು. ಚಿತ್ರದಲ್ಲಿ ಸುಮನ್ ಖಳನಟನಾಗಿ ಅಭಿನಯಿಸಿದ್ದಾರೆ. ಸಂಕ್ರಾಂತಿಗೆ (ಜ.14) 'ಸ್ವಯಂಕೃಷಿ' ಧ್ವನಿಸುರುಳಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ರಾಕಿ, ಗೌತಮ್, ಸುಗ್ರೀವ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಸುಧಾಕರ್ ಛಾಯಾಗ್ರಹಣ 'ಸ್ವಯಂಕೃಷಿ' ಚಿತ್ರಕ್ಕಿದೆ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು 40 ಕಾರುಗಳು ಹಾಗೂ 500 ಮಂದಿ ಸಹ ಕಲಾವಿದರೊಂದಿಗೆ ಚಿತ್ರೀಕರಿಸಲಾಗಿದ್ದು ಮೈನವಿರೇಳಿಸುವಂತಿದೆ. ಕ್ಲೈಮ್ಯಾಕ್ಸ್ ನೈಜವಾಗಿರಲಿ ಎಂದು ನಿರ್ಮಾಪಕರು ಹೊಸ ಕಾರುಗಳನ್ನು ತರಿಸಿಕೊಟ್ಟಿದ್ದರು. ಅವರು ಯಾವುದಕ್ಕೂ ಕೊರತೆ ಇಲ್ಲದಂತೆ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ ಎನ್ನುತ್ತಾರೆ ಸುಧಾಕರ್.
ಆಗ್ರಾ, ನವದೆಹಲಿ, ಕೆಂಪುಕೋಟೆ, ಸೇಂಟ್ ಮೇರಿ ದ್ವೀಪ, ಮಂಗಳೂರು ಹಾಗೂ ಇನ್ನೋವೇಟೀವ್ ಫಿಲಂ ಸಿಟಿಯಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಚಿತ್ರಕತೆಗೆಯನ್ನು ಸಾಕಷ್ಟು ಜಾಣ್ಮೆಯಿಂದಹೆಣೆದಿದ್ದೇವೆ ಎನ್ನುತ್ತಾರೆ ಚಿತ್ರಕತೆಯನ್ನು ಹೊಸೆದಿರುವ ವಿಜಯ್ ಚಂದ್ರು. ಗಾಂಧಿನಗರದಲ್ಲಿ 'ಸ್ವಯಂಕೃಷಿ' ಚಿತ್ರದ ಬಗ್ಗೆ ಒಳ್ಳೆ ಟಾಕ್ ಇದೆ. [ಸ್ವಯಂಕೃಷಿ]


Click it and Unblock the Notifications











