ಅದ್ಭುತ ಕಲೆಗಾರ ಜಾನ್ ನ ಮಕ್ಕಳ ಚಿತ್ರ

ಬಾಲ ಕಾರ್ಮಿಕರ ಸಮಸ್ಯೆಗಳು, ಪರಿಹಾರ, ಶಿಕ್ಷಣ ವ್ಯವಸ್ಥೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಮಕ್ಕಳ ಕರುಣಾಜನಕ ಕಥೆಯನ್ನು ಪ್ರೇಕ್ಷಕರ ಮುಂದಿಡಲಿದೆ. ಬಡತನ, ಅನಕ್ಷರತೆ ಹಾಗೂ ಸೈನ್ಯಕ್ಕೆ ದೇಶ ವ್ಯಯಿಸುತ್ತಿರುವ ಖರ್ಚು ವೆಚ್ಚ ಕುರಿತು ಕೂಡಾ ಈ ಕಿರುಚಿತ್ರದಲ್ಲಿ ಹೇಳಲಾಗಿದೆ ಎನ್ನುತ್ತಾರೆ ಜಾನ್ .
ಬಾರ್ನ್ ಫ್ರೀ ಆರ್ಟ್ ಸ್ಕೂಲ್ ಬ್ಯಾನರ್ ಅಡಿಯಲ್ಲಿ ಚಿತ್ರಿತವಾಗಿರುವ "ಅನಂದ" ಸಿನಿಮಾದಿಂದ ಸಮಾಜಿಕ ಸಂದೇಶ ರವಾನೆ ಮಾಡಲು ಜಾನ್ ಇಚ್ಛಿಸಿದ್ದಾರೆ. ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಬಾಲ ಕಾರ್ಮಿಕ ಸಮಸ್ಯೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಬೇಕು ಎಂಬ ಉದ್ದೇಶದಿಂದ ಆನಂದ ಚಿತ್ರವನ್ನು ಇತರೆ ಭಾಷೆಗಳಿಗೆ ಡಬ್ ಮಾಡುವ ಯೋಜನೆ ಕೂಡಾ ಹಾಕಿಕೊಂಡಿದ್ದಾರೆ.
ಯಾರಿದು ಜಾನ್ ದೇವರಾಜ್ : ತೆರೆ ಹಿಂದಿನ ಕಲಾತ್ಮಕ ಶತಿ ಜಾನ್ ದೇವರಾಜ್ ಎಲ್ಲ ಬಗೆಯ ಕಲೆ , ಸಾಂಸ್ಕೃತಿಕ ರಂಗದಲ್ಲಿ ಪಳಗಿದವರು. ಬೀದಿ ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ, ಚಿತ್ರಕಲೆ, ಶಿಲ್ಪಕಲೆ ಹೀಗೆ ಹತ್ತು ಹಲವು ರಂಗದಲ್ಲಿ ತೊಡಗಿಸಿಕೊಂಡವರು. ಇದರ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಸದಾ ಪಾಲ್ಗೊಳ್ಳುವುದು ಇವರ ವೃತ್ತಿ ಹಾಗೂ ಪ್ರವೃತ್ತಿಯಾಗಿದೆ.
ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕಥೆಯಲ್ಲಿ ಬರುವ ಊರಿನ ಚಿತ್ರಣಕ್ಕೆ ನೈಜ ರೂಪ ಕೊಟ್ಟ ಕಲಾವಿದ ಜಾನ್. ಶಂಕರ್ ನಾಗ್ ನಿರ್ದೇಶನದಂತೆ ಅದ್ಭುತ ಸೆಟ್, ಶಿಲ್ಪಗಳನ್ನು ರೂಪಿಸಿ ಯಶಸ್ವಿಯಾದವರು. ಕುಬಿ ಮತ್ತು ಇಯಾಲಾ, ಮನೆ, ಮುತ್ತಿನ ಹಾರ, ಹರಕೆಯ ಕುರಿ, ಹಗಲು ವೇಷ ಮುಂತಾದ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದಾರೆ.
ಮೈಮ್ ಕಲೆ ಆಧಾರಿಸಿ 19 ನಿಮಿಷಗಳ ಚಿತ್ರ ತಯಾರಿಸಿದ್ದಾರೆ. ಬಾಷಾ ಎಂಬ ಮೂಕಿ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಂಡಿದೆ. ಈಗ ಮಕ್ಕಳ ಚಿತ್ರದ ಮೂಲಕ ಮತ್ತೊಮ್ಮೆ ಜಾನ್ ಸಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ


Click it and Unblock the Notifications











