»   » ರಾತ್ರೋರಾತ್ರಿ ಸುಮುಹೂರ್ತ ಸುಲಗ್ನ ಸಾವಧಾನ

ರಾತ್ರೋರಾತ್ರಿ ಸುಮುಹೂರ್ತ ಸುಲಗ್ನ ಸಾವಧಾನ

Posted By:
Subscribe to Filmibeat Kannada

ಬೆಂಗಳೂರು, ಫೆ.12: ಹುಡುಗಿಯರನೇಕರ ಕನಸಿನ ನಾಯಕ ಗಣೇಶ್ ಸೋಮವಾರ ರಾತ್ರಿ ಸದ್ದುಗದ್ದಲವಿಲ್ಲದೆ ಮದುವೆಯಾಗಿದ್ದಾರೆ. ಈ ಮುಂಚೆ ಗಣೇಶ್ ಮದುವೆ ಫೆ.18ಕ್ಕೆ ನಡೆಯುವುದೆಂದು ನಿಗದಿಯಾಗಿತ್ತು. ಆದರೆ, ಜೆ.ಪಿ.ನಗರ ಸಮೀಪದ ಪುಟ್ಟೇನಹಳ್ಳಿ ಕ್ರಾಸ್‌ನ ವಧುವಿನ ಮನೆಯಲ್ಲಿ ಆಯ್ದ ಹಲವು ಗಣ್ಯರ ಸಮ್ಮುಖದಲ್ಲಿ ಮದುವೆ ಶಾಸ್ತ್ರಗಳು ನೆರವೇರಿದವು. ರಾತ್ರಿ 9ರಿಂದ 11 ಗಂಟೆ ನಡುವಿನ ಮುಹೂರ್ತದಲ್ಲಿ ಗಣೇಶ್ ದಾಂಪತ್ಯಕ್ಕೆ ಕಾಲಿಟ್ಟರು.

ಶಿಲ್ಪಾ ಬಾರ್ಕೂರಿನ ಶೆಟ್ಟಿಗಾರ್ ಕುಟುಂಬಕ್ಕೆ ಸೇರಿದ, ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಬಾರ್ಕೂರಿನವರು. ಶಿಲ್ಪಾರ ತಂದೆ ಶಿವರಾಂ, ತಾಯಿ ಶಕುಂತಲಾ ಪ್ರಸ್ತುತ ದುಬೈ ವಾಸಿಗಳು. ಶಿಲ್ಪಾರ ಸೋದರ ಶರಣ್ ಆಸ್ಟ್ರೇಲಿಯಾದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ.

ಮೈಸೂರಿನ ರೆಸಾರ್ಟ್‌ವೊಂದರ ಮಾಲೀಕ ವಿಕ್ರಮ್ ಜೊತೆ ಶಿಲ್ಪಾರಿಗೆ ಈ ಮೊದಲೇ ಮದುವೆ ಆಗಿತ್ತು. ಕಾರಣಾಂತರಗಳಿಂದ ವಿಕ್ರಮ್ ಮತ್ತು ಶಿಲ್ಪಾರ ನಡುವಿನ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ವಿಚ್ಛೇದಿತ ಯುವತಿಗೆ ಬಾಳು ಕೊಟ್ಟ ಉದಾಹರಣೆ ಗಣೇಶ್ ಹೊರತುಪಡಿಸಿದರೆ ಕನ್ನಡ ಚಿತ್ರರಂಗದಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ. ಅವರ ದಾಂಪತ್ಯ ಜೀವನ ನೂರ್ಕಾಲ ಹಸನಾಗಿರಲಿ.

ಆರು ತಿಂಗಳ ಹಿಂದೆಯೇ ಗಣೇಶ್‌ಗೆ ಶಿಲ್ಪಾರ ಪರಿಚಯವಾಗಿತ್ತು. ಅವರಿಬ್ಬರ ನಡುವೆ ಮೊದಲು ಸ್ನೇಹ ಸಂಬಂಧವಿತ್ತು, ನಂತರ ಅದು ಪ್ರೀತಿಯಾಗಿ ಬದಲಾಗಿ ಈಗ ಮದುವೆಯಲ್ಲಿ ದಾಂಪತ್ಯ ಜೀವನ ಆರಂಭವಾಗಿದೆ. ಈ ವಿಶೇಷ ವಿವಾಹಕ್ಕೆ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಕೆ.ಮಂಜು, 'ಅರಮನೆ' ಚಿತ್ರದ ನಿರ್ದೇಶಕ ನಾಗಶೇಖರ್ ಸೇರಿದಂತೆ ಚಿತ್ರೋದ್ಯಮದ ಹಲವು ಗಣ್ಯರು, ಹಿತೈಷಿಗಳು ಆಗಮಿಸಿದ್ದರು.

ಜೀವನ ಚೆಲ್ಲಾಟ ಅಲ್ಲ, ಜೀವನ ಹುಡುಗಾಟ ಅಲ್ಲ ಎಂಬುದನ್ನು ಗಣೇಶ್ ನಿಜಜೀವನದಲ್ಲೂ ಸಾಬೀತುಪಡಿಸಿದ್ದಾರೆ. ಜೀವನವೆಂಬ ಗಾಳಿಪಟದ ಸೂತ್ರ ಗಣೇಶ್ ಕೈಯಲ್ಲಿ ಭದ್ರವಾಗಿರಲಿ. ಶಿಲ್ಪಾ ಜೊತೆ ಗಣೇಶ್ ಜೀವನ ಬೊಂಬಾಟಾಗಿರಲಿ.

ಗಣೇಶ ಮತ್ತು ಶಿಲ್ಪಾ ಮದುವೆ ಆಲ್ಬಂ

(ದಟ್ಸ್‌ಕನ್ನಡ ಸಿನಿವಾರ್ತೆ)

ಪೂರಕ ಓದಿಗೆ:
ಮುಂಗಾರುಮಳೆ ಗಣೇಶನಿಗೆ ಕಂಕಣಬಲ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada