»   » ಈ ಚಿತ್ರದ ಟೈಟಲ್ ಹೊಳೆದದ್ದು ಹರಿಶ್ಚಂದ್ರ ಘಾಟ್‌ನಲ್ಲಿ!

ಈ ಚಿತ್ರದ ಟೈಟಲ್ ಹೊಳೆದದ್ದು ಹರಿಶ್ಚಂದ್ರ ಘಾಟ್‌ನಲ್ಲಿ!

Subscribe to Filmibeat Kannada

ಒಂದು ಚಿತ್ರದ ಟೈಟಲ್, ಒಂದು ಚಿತ್ರಕಥೆ, ಒಂದು ಅತ್ಯುದ್ಭುತವಾದ ಹಾಡು ಹುಟ್ಟಲು ಇಂಥದೇ ಸಂದರ್ಭದಲ್ಲಿ ಸ್ಫೂರ್ತಿ ಸಿಗುತ್ತದೆಂದು ಹೇಳಲಾಗದು. ಬಸ್‌ಸ್ಟಾಪಿನಲ್ಲಿ ಬಸ್‌ಗಾಗಿ ಕಾಯುವಾಗ, ಸುಡುಸುಡು ಬಿಸಿಲಿನಲ್ಲಿ ಒಬ್ಬಂಟಿಯಾಗಿ ಸಿಗರೇಟು ಸೇದುವಾಗ, ಇನ್ನೇನು ತಾಳಿಕಟ್ಟಬೇಕೆನ್ನುವ ಅಮೃತ ಘಳಿಗೆಯಲ್ಲಿ, ಗಾಢ ನಿದ್ರೆಯಲ್ಲಿ ಎಲ್ಲೆಂದರಲ್ಲಿ ಇಂಥ ಸ್ಫೂರ್ತಿಯ ಸೆಲೆ ಉಕ್ಕಿ ಬರಬಹುದು. ಒಟ್ಟಿನಲ್ಲಿ ಕಣ್ಣು ಮನಸ್ಸನ್ನು ತೆರೆದುಕೊಂಡಿದ್ದರೆ ಸ್ಮಶಾನದಲ್ಲೂ ಒಂದು ಅತ್ಯದ್ಭುತ ಕಥೆ ಹುಟ್ಟಿಕೊಳ್ಳುತ್ತದೆ. ಬಿ.ಪಿ.ಶ್ರೀನಿವಾಸ್‌ಗೆ ಇಂಥದೊಂದು ಚಿತ್ರ ನಿರ್ಮಿಸುವ ಐಡಿಯಾ ಹೊಳೆದದ್ದೂ ಸ್ಮಶಾನದಲ್ಲಿ ಅರ್ಥಾತ್ ಹರಿಶ್ಚಂದ್ರ ಘಾಟ್‌ನಲ್ಲಿ.

ಅದಕ್ಕೆಂದೇ ಈ ಚಿತ್ರದ ಹೆಸರನ್ನೂ 'ಹರಿಶ್ಚಂದ್ರ ಘಾಟ್' ಎಂದೇ ಇಟ್ಟಿದ್ದಾರೆ. ಮುಹೂರ್ತವೂ ಕಳೆದ ವಾರ ನಡೆದಿದೆ ಫಟಾಫಟ್. ಚಿತ್ರೀಕರಣ ಕೂಡ ಮುಂದಿನ ತಿಂಗಳು ಆರಂಭವಾಗಲಿದೆ, ಆಬ್ವಿಯಸ್‌ಲಿ ಹರಿಶ್ಚಂದ್ರ ಘಾಟ್‌ನಲ್ಲೇ.

ಒಬ್ಬ ಶ್ರೀಮಂತ ಹುಡುಗಿ ಸ್ಮಶಾನ ಕಾಯುವ ಸ್ಫುರದ್ರುಪಿ ಯುವಕನನ್ನು ಪ್ರೀತಿಸುವ ಎಳೆಯನ್ನು ಚಿತ್ರಕಥೆ ಹೊಂದಿದೆ. ಹರಿಶ್ಚಂದ್ರ ಘಾಟ್‌ನಲ್ಲೇ ಜೀವನ ಸಾಗಿಸುತ್ತಿದ್ದರೂ ಉತ್ತಮ ಜೀವನ ಸಾಗಿಸುವ ಕನಸು ಕಾಣುತ್ತಿರುವ ಪ್ರಿಯತಮನಾಗಿ 'ಗಂಗಾ ಕಾವೇರಿ' ಚಿತ್ರದ ನಾಯಕ ಅಕ್ಷಯ್ ಆಯ್ಕೆಯಾಗಿದ್ದಾರೆ. ನಾಯಕಿಯ ಆಯ್ಕೆ ಇನ್ನೂ ನಡೆಯುತ್ತಿದೆ. 21 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಹಾಡುಗಳ ಧ್ವನಿಮುದ್ರಣವೂ ಮುಗಿದಿದೆ.

ಸಂಭಾಷಣೆ, ಹಾಡುಗಳನ್ನು ಬರೆದುಕೊಂಡಿದ್ದ ಶಿವಸಮಯ ಎಂಬ ಯುವಕ ಮೊದಲಬಾರಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಅನು ಮಲ್ಲಿಕ್, ಗುರುಕಿರಣ್, ಮನೋಮೂರ್ತಿ ಗರಡಿಯಲ್ಲಿ ಕೀಬೋರ್ಡ್ ಪ್ಲೇಯರಾಗಿ ಪಳಗಿರುವ ಜೈಪಾಲ್ ರಾಜ್ ಪ್ರಥಮ ಬಾರಿಗೆ ಸಂಗೀತ ನಿರ್ದೇಶಿಸುತ್ತಿದ್ದಾರೆ.

ಚಿತ್ರದ ಕೆಲ ಸನ್ನಿವೇಶಗಳನ್ನು ಕಾಠ್ಮಂಡು ಮತ್ತು ಮಾರಿಷಸ್‌ನಲ್ಲಿ ಚಿತ್ರೀಕರಿಸಲಾಗುವುದು ಎಂದು ಶಿವ ಹೇಳಿದ್ದಾರೆ. ಉಳಿದ ತಾರಾಗಣದಲ್ಲಿ ರಂಗಾಯಣ ರಘು, ಅರುಣ್ ಸಾಗರ್ ಇದ್ದಾರೆ. ಸ್ಮಶಾನದಲ್ಲಿ ಕಥೆ ಹೇಳುವವನಾಗಿ ವಿಶೇಷ ಭೂಮಿಕೆಯಲ್ಲಿ ರವಿ ಬೆಳಗೆರೆ ನಟಿಸುತ್ತಿದ್ದಾರೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada