ರಮ್ಯಾ 'ಜೊತೆಗಾರ'ನಿಗೆ ಕಡೆಗೂ ಬಿಡುಗಡೆ ಭಾಗ್ಯ
ಸುದೀರ್ಘ ಸಮಯದಿಂದ ಬಿಡುಗಡೆಗಾಗಿ ಹಂಬಲಿಸುತ್ತಿದ್ದ 'ಜೊತೆಗಾರ' ಚಿತ್ರಕ್ಕೆ ಕಡೆಗೂ ಮೋಕ್ಷ ಲಭಿಸಿದೆ. ಈ ವಿಷಯವನ್ನು ಸ್ವತಃ ಚಿತ್ರದ ನಾಯಕಿ ರಮ್ಯಾ ಸ್ಪಷ್ಟಪಡಿಸಿದ್ದಾರೆ. ಇದೀಗ ಚಿತ್ರಕ್ಕೆ ಮತ್ತೊಂದು ಹಾಡನ್ನು ಸೇರ್ಪಡೆ ಮಾಡಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
ಸದ್ಯಕ್ಕೆ ಚಿಕ್ಲಿ ಹೊಳೆಯಲ್ಲಿ ರಮ್ಯಾ ಮತ್ತು ಚಿರಂಜೀವಿ ಸರ್ಜಾ ಅಭಿನಯದ 'ದಂಡಂ ದಶಗುಣಂ' ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು ಸೆಪ್ಟೆಂಬರ್ 10ರಂದು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ ಚಿತ್ರ ನಿರ್ಮಾಪಕ ಗಣೇಶ್.
ಅಂದಹಾಗೆ 'ಜೊತೆಗಾರ' ಚಿತ್ರದ ನಾಯಕ ನಟ ಪ್ರೇಮ್ ಕುಮಾರ್ ಮತ್ತು ಜೆನ್ನಿಫರ್ ಕೊತ್ವಾಲ್ ನಡುವಿನ ಹಾಡಿನ ಚಿತ್ರೀಕರಣ ಬೆಂಗಳೂರಿನ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆದಿದೆ. ಒಟ್ಟು ರು.25 ಲಕ್ಷದಲ್ಲಿ ಹಾಡಿನ ಚಿತ್ರೀಕರಣ ನಡೆದಿದೆ ಎನ್ನುತ್ತವೆ ಮೂಲಗಳು. ಈ ಹಾಡಿಗೆ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಆಕ್ಷನ್, ಕಟ್ ಹೇಳಿರುವುದು ವಿಶೇಷ.
ಈ ಚಿತ್ರಕ್ಕಾಗಿ ಐಡಿಬಿಐ ಸಾಲ ನೀಡಿತ್ತು. ಸಾಲ ತೀರಿಸದೆ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಐಡಿಬಿಐ ಪಟ್ಟುಹಿಡಿಯಿತು. ಹಾಗಾಗಿ ಜೊತೆಗಾರ ಡಬ್ಬದಲ್ಲೇ ಕೊಳೆಯುವಂತಾಗಿತ್ತು. ನಿರ್ಮಾಪಕ ಅಶ್ವಿನಿ ರಾಂ ಪ್ರಸಾದ್ ಸಂಪೂರ್ಣವಾಗಿ ದಿವಾಳಿಯಾಗಿದ್ದಾರೆ ಎಂಬ ಮಾತುಗಳು ಚಿತ್ರೋದ್ಯಮದಲ್ಲಿ ಕೇಳಿಬಂದಿದ್ದವು. ಈಗ ಎಲ್ಲ ಸಮಸ್ಯೆಗಳಿಂದ ಮುಕ್ತನಾಗಿರುವ ಜೊತೆಗಾರ ಶೀಘ್ರದಲ್ಲೆ ತೆರೆಗೆ ಅಪ್ಪಳಿಸಲಿದೆ.


Click it and Unblock the Notifications











