ಭಗವಂತನ ಅವತಾರ 'ಬೀರ'ನಿಗೆ ನಾಯಕಿ ಶುಭಾ ಪೂಂಜಾ
ಅಣಜಿ ನಾಗರಾಜ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೆ ಅವರ ನಿರ್ಮಾಣದ 'ಭೀಮಾ ತೀರದಲ್ಲಿ' ಹಾಗೂ 'ಪರಮಶಿವ' ಎಂಬ ಚಿತ್ರಗಳ ಶೂಟಿಂಗ್ ಮುಗಿದಿದೆ. ಈಗ ಕೈಗೆತ್ತಿಕೊಂಡಿರುವ ಚಿತ್ರಕ್ಕೆ 'ಬೀರ' ಎಂದು ಹೆಸರಿಡಲಾಗಿದೆ.
ಈ ಚಿತ್ರದ ಮುಹೂರ್ತವನ್ನು ದಾವಣಗೆರೆಯಲ್ಲಿ ನಡೆಸಲು ಅಣಜಿ ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ಈ ಹಿಂದೆ ದರ್ಶನ್ ಮುಖ್ಯಭೂಮಿಕೆಯಲ್ಲಿದ್ದ 'ನಮ್ಮ ಪ್ರೀತಿಯ ರಾಮು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಂಜಯ್ ನಿರ್ದೇಶಕರು. 'ಭಗವಂತನ ಅವತಾರ' ಎಂಬ ಅಡಿಬರಹವನ್ನು ಈ ಚಿತ್ರಕ್ಕೆ ನೀಡಲಾಗಿದೆ.
'ಆ ದಿನಗಳು' ಖ್ಯಾತಿಯ ಸತ್ಯ ಚಿತ್ರದ ನಾಯಕ ನಟ. ಚಿತ್ರದ ನಾಯಕಿಯಾಗಿ ಶುಭಾ ಪೂಂಜಾ ಆಯ್ಕೆಯಾಗಿದ್ದಾರೆ. ಮತ್ತೊಬ್ಬ ನಾಯಕಿಯಾಗಿ ರೂಪಿಕಾ ಆಯ್ಕೆಯಾಗುವ ಸಾಧ್ಯತೆಗಳಿವೆ. ಈ ಚಿತ್ರಕ್ಕೂ ಶೀರ್ಷಿಕೆ ವಿವಾದ ಎದುರಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿವೆ.
ಈಗಾಗಲೆ ಫಿಲಂ ಚೇಂಬರ್‌ನಲ್ಲಿ 'ಬೀರ' ಎಂಬ ಟೈಟಲ್ ರಿಜಿಸ್ಟರ್ ಆಗಿದೆಯಂತೆ. ಆದರೆ ತಾವು ತಮ್ಮ ಬ್ಯಾನರ್‌ನಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಅಣಜಿ ತಿಳಿಸಿದ್ದಾರೆ. ಇದೊಂದು ಪಕ್ಕಾ ಮಾಸ್ ಚಿತ್ರ ಎನ್ನುತ್ತಾರೆ ಅವರು. ಶೀಘ್ರದಲ್ಲೆ 'ಭೀಮಾತೀರದಲ್ಲಿ' ಹಾಗೂ 'ಪರಮಶಿವ' ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











