ಬಿಜೆಪಿಗೆ ರಜನಿಕಾಂತ್ ಪಾದಾರ್ಪಣೆ ಸನ್ನಿಹಿತ

ತಾವು ಇನ್ನೆರಡು ವರ್ಷಗಳಲ್ಲಿ ರಾಜಕೀಯ ಪ್ರವೇಶ ಮಾಡುವುದಾಗಿ ರಜನಿಕಾಂತ್ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ತಾವು ರಾಣಾ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಮಹತ್ವಾಕಾಂಕ್ಷಿ ಚಿತ್ರ ನನ್ನ ಕೊನೆಯ ಚಿತ್ರವಾಗಲಿದೆ. ಅದು ತೆರೆಗೆ ಬರಲು ಇನ್ನೂ ಎರಡು ವರ್ಷಗಳಾಗುತ್ತದೆ. ಆ ಬಳಿಕ ತಾವು ರಾಜಕೀಯ ರಂಗ ಪ್ರವೇಶ ಮಾಡುವುದಾಗಿ ರಜನಿ ತಿಳಿಸಿದ್ದಾರೆ. ಏಪ್ರಿಲ್ 2ರಂದು ನಡೆದ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ರಜನಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ನಡುವೆ ಮಾತುಕತೆ ನಡೆದಿರುವ ಸುದ್ದಿಯೂ ಇದೆ. ಅಂದರೆ ರಜನಿ ಬಿಜೆಪಿ ಪಕ್ಷ ಸೇರುವುದು ಖಚಿತ ಎನ್ನುತ್ತವೆ ಮೂಲಗಳು.
ಗಡ್ಕರಿ ಜೊತೆ ಮಾತನಾಡುತ್ತಾ ಸದ್ಯಕ್ಕೆ ರಾಜಕೀಯ ಸೇರುವ ಆಲೋಚನೆ ಇಲ್ಲ. ಇನ್ನೆರಡು ವರ್ಷಗಳಲ್ಲಿ ರಾಜಕೀಯಕ್ಕೆ ಅಡಿಯಿಡುವುದಾಗಿ ರಜನಿ ತಿಳಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಫೈನಲ್ ಪಂದ್ಯ ವೀಕ್ಷಿಸಿದ ಬಳಿಕ ರಜನಿಗೆ ಅಭಿಮಾನಿಗಳು ಮುಗಿಬಿದ್ದರು. ಗಡ್ಕರಿ ಅವರು ಅವರನ್ನು ಅಭಿಮಾನಿಗಳಿಂದ ಪಾರು ಮಾಡಿ ಸುರಕ್ಷಿತವಾಗಿ ರಜನಿಯನ್ನು ಮನೆ ಮುಟ್ಟಿಸಿದ್ದರು.
ಆಗ ಇವರಿಬ್ಬರ ನಡುವೆ ಮತ್ತಷ್ಟು ಆತ್ಮೀಯತೆ ಬೆಳೆದಿದೆ ಎಂದು ಹೇಳಲಾಗಿದೆ. ಈ ಹಿಂದೆ ರಜನಿ ಅವರು ಪ್ರಾದೇಶಿಕ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಈಗ ಅವರು ಬಿಜೆಪಿ ಸೇರಲಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ರಜನಿಕಾಂತ್ ರಾಜಕೀಯ ನಿರ್ಧಾರ ಅವರ ಅಭಿಮಾನಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.


Click it and Unblock the Notifications











