»   » ಜೀ ವಾಹಿನಿಯ ವಿನೂತನ ಹಾಸ್ಯ ಕಾರ್ಯಕ್ರಮ

ಜೀ ವಾಹಿನಿಯ ವಿನೂತನ ಹಾಸ್ಯ ಕಾರ್ಯಕ್ರಮ

Subscribe to Filmibeat Kannada

ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಪ್ರಸಾರವಾಗುವ ವಿನೂತನ ಕಾರ್ಯಕ್ರಮ "ಕಾಮಿಡಿ ಕಿಲಾಡಿಗಳು" ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ವಿನೂತನ ಹಾಸ್ಯ ಕಾರ್ಯಕ್ರಮವಾಗಿದೆ. ಈ ಸ್ಪರ್ಧೆಗೆ ಕರ್ನಾಟಕದಾದ್ಯಂತದಿಂದ ಸುಮಾರು ನಲವತ್ತಕ್ಕೂ ಹೆಚ್ಚು ಹಾಸ್ಯ ಕಲಾವಿದರನ್ನು ಹಾಸನ, ಮೈಸೂರು, ಗುಲ್ಬರ್ಗ, ಮಂಗಳೂರು, ದಾವಣಗೆರೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸುವ ಮೂಲಕ ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದ ಪ್ರಥಮ ಹಂತವಾಗಿ ಈಗ ಕರ್ನಾಟಕದ ಖ್ಯಾತ ಕಲಾವಿದರ ಹಾಸ್ಯ ವಿನೋದಾವಳಿ ಪ್ರಸಾರ ಕಾಣುತ್ತಿದೆ. ಮಾರ್ಚ್15ರಿಂದ ಕರ್ನಾಟಕದಾದ್ಯಂತದಿಂದ ಆಯ್ಕೆಯಾದ ಕಲಾವಿದರ ನಡುವೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜಯಶಾಲಿಯಾಗುವ ಕಲಾವಿದರಿಗೆ ಸುಮಾರು ಐದು ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಗುವುದು.

'ಸುತ್ತಲಿರುವ ಪ್ರಪಂಚವನ್ನು ನೋಡು ಮತ್ತು ನಗು" ಎಂಬ ಉದ್ದೇಶವುಳ್ಳ ಜೀ ಕನ್ನಡದ "ಕಾಮಿಡಿ ಕಿಲಾಡಿಗಳು" ಕರ್ನಾಟಕದ ವೀಕ್ಷಕರಿಗೆ ಮನರಂಜನೆಯನ್ನು ಒದಗಿಸುವುದಲ್ಲದೇ ವಿನೂತನ ಕಾರ್ಯಕ್ರಮಕ್ಕೆ ವೇದಿಕೆಯೊಂದನ್ನು ಕಲ್ಪಿಸಲಿದೆ. ಕನ್ನಡದ ವಾಹಿನಿಗಳು ಧಾರಾವಾಹಿ, ಸುದ್ದಿ, ಸಿನಿಮಾ ಮತ್ತು ಸರಿಗಮಪ ರೀತಿಯ ಸಂಗೀತಮಯ ಕಾರ್ಯಕ್ರಮಗಳಿಗೆ ಮಾತ್ರವೇ ಫೇಮಸ್ಸು ಎಂಬ ಮಾತನ್ನು ಜೀ ಕನ್ನಡ ವಾಹಿನಿಯು ಈಗಾಗಲೇ ತನ್ನ ಕುಣಿಯೋಣು ಬಾರಾ, ಎಸ್ಸೆಲ್ ಶ್ರೇಷ್ಠ ಕರ್ನಾಟಕ ಪ್ರಶಸ್ತಿ ಪ್ರಧಾನ ಸಮಾರಂಭ ಮುಂತಾದ ಕಾರ್ಯಕ್ರಮಗಳ ಮೂಲಕ ಅಲ್ಲಗಳೆದಿದ್ದು, ಈಗ "ಕಾಮಿಡಿ ಕಿಲಾಡಿಗಳು" ಎಂಬ ವಿನೂತನ ಹಾಸ್ಯಮಯ ಪ್ರದರ್ಶನದಿಂದ ಕನ್ನಡದ ಕಿರುತೆರೆ ಏನೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಪಡಿಸಲಿದೆ.

ಸದಾ ಹೊಸತನವನ್ನು ಹುಡುಕುವ ಜೀ ಕನ್ನಡ ಈ ಬಾರಿ ಹಾಸ್ಯವನ್ನೇ ಪ್ರಧಾನ ಅಂಶವನ್ನಾಗಿ ಆಯ್ಕೆ ಮಾಡಿದ್ದು 'ಕಾಮೆಡಿ ಕಿಲಾಡಿಗಳು" ಎಂಬ ಮನೋರಂಜನಾ ಸ್ಪರ್ಧಾ ಕಾರ್ಯಕ್ರಮವನ್ನು ವೀಕ್ಷಕರಿಗೆ ನೀಡಲಿದೆ, ಕರ್ನಾಟಕದ ವಿವಿದೆಡೆ ಅಡಗಿರುವ ಹಾಸ್ಯ ಕಲಾವಿದರನ್ನು ಬೆಳಕಿಗೆ ತರಲು "ಕಾಮಿಡಿ ಕಿಲಾಡಿಗಳು" ಸಹಕಾರಿಯಾಗಲಿದೆಎಂದು ಜೀ ಕನ್ನಡ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada