twitter
    For Quick Alerts
    ALLOW NOTIFICATIONS  
    For Daily Alerts

    ಉತ್ಸಾಹದಿಂದ ಹುಚ್ಚಾದ ಜನತೆ ; ಬರದ ಊರಲ್ಲಿ ಸಿನಿಮಾ ತಂಪು!

    By Super
    |

    Kannada Film
    ಇಂಥದೊಂದು ಸಂಭ್ರಮಕ್ಕೆ ತುಮಕೂರು ತುಂಬಾ ದಿನಗಳಿಂದ ಕಾದಿತ್ತು .
    ವರನಟ ಡಾ.ರಾಜ್‌ಕುಮಾರ್‌ ತುಮಕೂರಿಗೆ ಕೊನೆಯ ಸಲ ಬಂದದ್ದು ಯಾವಾಗ? ರಾಜ್‌ ಮಾತಿರಲಿ, ಎರಡನೇ ಪಂಕ್ತಿಯ ನಾಯಕ ನಟ ನಟಿಯರು ತುಮಕೂರಿಗೆ ಬಂದು ಸುದ್ದಿಯಾದದ್ದು ಯಾವಾಗ? ಉಹುಂ, ಸಿನಿಮಾ ಮಂದಿಗೆ ತುಮಕೂರು ಆಕರ್ಷಣೆಯ ಕ್ಷೇತ್ರ ಅಲ್ಲವೇ ಅಲ್ಲ . ಜಿಲ್ಲೆಯಲ್ಲಿ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂಥ ಸ್ಥಳ ಸವಲತ್ತುಗಳೂ ಇಲ್ಲ . ಇಲ್ಲಿರುವುದು ಜಾಲಿ ಮುಳ್ಳುಗಳ ಬಯಲು ಮತ್ತು ನುಸಿ ತೆಂಗಿನ ತೋಟಗಳು ಮಾತ್ರ. ಬರಗೂರು ರಾಮಚಂದ್ರಪ್ಪನವರಂಥ ನಿರ್ದೇಶಕರು ಈ ಪರಿಯ ಜಾಲಿ ಬಯಲುಗಳಲ್ಲೇ ಸೃಜನಶೀಲತೆಯ ಸೆಲೆ ಕಾಣುತ್ತಾರೆ ; ತಮ್ಮ ಚಿತ್ರಗಳನ್ನು ತುಮಕೂರಿನ ಹಳ್ಳಿಗಳಲ್ಲೇ ಚಿತ್ರೀಕರಿಸುತ್ತಾರೆ. ಆ ಚಿತ್ರಗಳು ತೆರೆ ಕಾಣುವುದಿಲ್ಲ ಎನ್ನುವುದು ಬೇರೆಯ ಮಾತು !

    ಆದರೆ, ಸಿನಿಮಾ ಪ್ರಿಯರ ಮಟ್ಟಿಗೆ ಮಾತ್ರ ತುಮಕೂರು ಜಿಲ್ಲೆ ಯಾವತ್ತೂ ಹಿಂದೆ ಬಿದ್ದಿದ್ದಿಲ್ಲ . ತುಮಕೂರಿನ ಚಿತ್ರಗಳಲ್ಲಿ ಹಿಂದಿ-ತಮಿಳು ಅಥವಾ ತೆಲುಗು ಚಿತ್ರಗಳು ಕಾಸು ಮಾಡುವುದಿಲ್ಲ . ಇಲ್ಲಿನ ಜನರದು- 'ಕನ್ನಡವೇ ನಮ್ಮಮ್ಮ , ಅವಳಿಗೆ ಕೈಮುಗಿಯಮ್ಮ " ಎನ್ನು ವ ಅಭಿಮಾನ. ಗಾಂಧಿನಗರದಲ್ಲಿ ಚಾಲ್ತಿಯಲ್ಲಿರುವ 'ಬಿಕೆಟಿ" ಎನ್ನುವ ಭಾಷಾ ಪ್ರಯೋಗದಲ್ಲಿ ತುಮಕೂರಿಗೂ ಸ್ಥಾನವಿದೆ. ಆ ಮಟ್ಟಿಗೆ ತುಮಕೂರಿಗೆ ಕನ್ನಡ ಚಿತ್ರರಂಗದಲ್ಲೊಂದು ಸ್ಥಾನವಿದೆ.

    ಗಲ್ಲಾಪೆಟ್ಟಿಗೆ ದೃಷ್ಟಿಯಿಂದ ಮಾತ್ರ ತುಮಕೂರನ್ನು ನೆನಪಿಸಿಕೊಳ್ಳುವ ಚಿತ್ರೋದ್ಯಮದ ಮಂದಿ ಜನವರಿ 11ರ ಭಾನುವಾರ ತುಮಕೂರನ್ನು ಬೇರೆಯ ಕಾರಣದಿಂದ ನೆನಪಿಸಿಕೊಂಡರು. ವರನಟ ರಾಜ್‌ಕುಮಾರ್‌ ಸೇರಿದಂತೆ ಅನೇಕ ನಟ ನಟಿಯರ ದಂಡು ತುಮಕೂರಿಗೆ ಪಾದ ಬೆಳೆಸಿತ್ತು . ಇದೆಲ್ಲರದ ಕ್ರೆಡಿಟ್‌ ವಾರ್ತಾ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಸಲ್ಲಬೇಕು. ಬಳ್ಳಾರಿಯಲ್ಲಿ ನಿಗದಿಯಾಗಿದ್ದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ತುಮಕೂರಿಗೆ ಬಂದಿದ್ದು ಪರಮೇಶ್ವರ ಅವರ ಪಟ್ಟಿನಿಂದಲೇ.

    ಬೆಂಗಳೂರಿನ ಎಂಜಿ ರೋಡಿನ ಮಂದಿ ಸಿನಿಮಾದವರನ್ನು ಕ್ಯಾರೆ ಅನ್ನದಿರಬಹುದು. ಆದರೆ, ತುಮಕೂರಿನಂಥ ಜಿಲ್ಲಾ ಕೇಂದ್ರಗಳಲ್ಲಿ ಸಿನಿಮಾ ಮಂದಿಯ ಬಗ್ಗೆ ಜನರಲ್ಲಿ ಗಾಢವಾದ ಸೆಳೆತವಿದೆ. ಅದರಲ್ಲೂ ಅಣ್ಣಾವ್ರು ಬರುತ್ತಾರೆಂದರೆ ಕೇಳಬೇಕೆ ? ಅಭಿಮಾನಿಗಳ ಉತ್ಸಾಹಕ್ಕೆ ನೂರು ರೆಕ್ಕೆ!

    ತುಮಕೂರಿನ ರಸ್ತೆಗಳಲ್ಲಿ ಒಂದು ವಾರದ ಮುಂಚಿನಿಂದಲೇ ರಾಜ್‌ಕುಮಾರ್‌ಗೆ ಹಾಗೂ ನಟನಟಿಯರಿಗೆ ಸ್ವಾಗತ ಕೋರುವ ಕಮಾನುಗಳು, ಬ್ಯಾನರ್‌ಗಳು ಕಾಣಿಸುತ್ತಿದ್ದವು. ಭಾನುವಾರ ಅದೆಲ್ಲ ರಸ್ತೆಗಳೂ ಮಹಾತ್ಮಗಾಂಧಿ ಮೈದಾನಕ್ಕೆ ಹೋಗಿ ಸೇರುತ್ತಿದ್ದವು. ಸಾಮಾನ್ಯ ಜನರ ಪಾಡಿರಲಿ, ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ನಟನಟಿಯರಿಗೂ ಕೂರಲು ಜಾಗವಿರಲಿಲ್ಲ . ಜನತೆಯ ಅತಿ ಉತ್ಸಾಹದ ಕಾರಣದಿಂದಾಗಿ ಕಲ್ಪಿಸಿದ್ದ ವ್ಯವಸ್ಥೆಗಳಲ್ಲಿ ತಾರುಮಾರು. ಪತ್ರಕರ್ತರ ಜಾಗದಲ್ಲಿ ನಾಯಕ ನಟರಿಗೆ ಜಯಕಾರ ಕೂಗುವ ಅಭಿಮಾನಿಗಳು ತುಂಬಿಕೊಂಡಿದ್ದರು. ಆ ಕಾರಣದಿಂದಾಗಿ ಪತ್ರಕರ್ತರು ಮುನಿಸಿಕೊಂಡ ಪ್ರಸಂಗವೂ ನಡೆಯಿತು.

    ಶ್ರೇಷ್ಠ ನಟ ಪ್ರಶಸ್ತಿ ವಿಜೇತ ಸುದೀಪ್‌, ನಿರ್ದೇಶಕ ಸಿದ್ಧಲಿಂಗಯ್ಯ, ತಿಪಟೂರು ರಘು, ಅರ್ಥ ಚಿತ್ರದ ಸುರೇಶ್‌, ಜಾನಕಿರಾಮ್‌ ಮುಂತಾದವರು ಒಂದು ಹಂತದಲ್ಲಿ ಕಾರ್ಯಕ್ರಮ ಬಹಿಷ್ಕಾರದ ನಿರ್ಣಯಕ್ಕೂ ಬಂದರು. ವಾರ್ತಾ ಸಚಿವ ಪರಮೇಶ್ವರ್‌ ತಾವೇ ಮುಂದಾಗಿ ಮುನಿಸಿಕೊಂಡವರನ್ನು ಸಮಾಧಾನಿಸುವ ಪ್ರಯತ್ನ ನಡೆಸಿದರು. ಅಂತಿಮವಾಗಿ ಸುದೀಪ್‌ ಬಳಗ ಕಾರ್ಯಕ್ರಮದಲ್ಲಿ ಭಾಗವಹಿಸಿತು. ಅನೇಕರು ನೆಲದ ಮೇಲೆಯೇ ಚಕ್ಕಳಮಕ್ಕಳ ಹಾಕಿ ಕುಳಿತರು.

    ಮಧ್ವರ ಕಾರಣದಿಂದಾಗಿ ಜನರು ಮತ್ತೆ ನೆನಪಿಸಿಕೊಂಡಿರುವ 'ಜಯ ಭಾರತ ಜನನಿಯ ತನುಜಾತೆ" ನಾಡಗೀತೆ ಕಾರ್ಯಕ್ರಮದಲ್ಲಿ ಮೊಳಗುವಾಗ ಜನರಿಗೆ ಮೈಯೆಲ್ಲಾ ಕಿವಿ. ನಾಡಗೀತೆಯನ್ನು ಪರಿಷ್ಕರಿಸಿ ಶನಿವಾರ ಸಂಜೆಯಷ್ಟೇ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಭಾನುವಾರ ಶಂಕರ ರಾಮಾನುಜರ ಹೆಸರುಗಳೂ ತುಮಕೂರು ಜನತೆಯ ಕಿವಿಯ ಮೇಲೆ ಬಿತ್ತು .

    ಕೆ.ಸಿ.ಎನ್‌. ಗೌಡ ಡಾ। ರಾಜ್‌ಕುಮಾರ್‌ ಪ್ರಶಸ್ತಿ ಯನ್ನು ಸ್ವೀಕರಿಸಿದರೆ, ಹಿರಿಯ ನಿರ್ದೇಶಕ ವಿಜಯಾ ರೆಡ್ಡಿಯವರಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಜ್ಜ ಎಸ್‌.ಕೆ.ಕರೀಂಖಾನ್‌ ಅವರಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಅಣ್ಣಾವ್ರ ಹಾಡು, ಭಾವನಾ ಭರತನಾಟ್ಯ!

    ಐಟಂ ಸಾಂಗ್‌ಗಳಲ್ಲಿ ಇನ್ನು ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವ ಚಂದ್ರಮುಖಿ ಭಾವನಾ ಅವರ ಭರತನಾಟ್ಯ ಕೆಲವರಿಗೆ ಖುಷಿಯನ್ನೂ ಹಲವರಿಗೆ ನಿರಾಶೆಯನ್ನೂ ಉಂಟುಮಾಡಿತು. 'ಕ್ಷಾಮ" ಚಿತ್ರಕ್ಕಾಗಿ ಭಾವನಾ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸುವಾಗ ನಿರಾಶೆ ಹೊಂದಿದ್ದ ರಸಿಕರು ಕೂಡ ಚಪ್ಪಾಳೆ ತಟ್ಟಿದ್ದು ವಿಶೇಷ. ಅದು ಭಾವನಾ ಅವರ ಜನಪ್ರಿಯತೆಗೆ ಸಾಕ್ಷಿ .

    ತುಂಬಾ ದಿನಗಳ ನಂತರ ವರನಟ ರಾಜ್‌ಕುಮಾರ್‌ ಸಾರ್ವಜನಿಕವಾಗಿ ಮತ್ತೆ ಹಾಡಿದರು, ಕುಣಿದರು. ಮಂಡಿ ಹಾಗೂ ಸೊಂಟದ ಶಸ್ತ್ರಚಿಕಿತ್ಸೆಯ ನಂತರ ರಾಜ್‌ಕುಮಾರ್‌ ಸಾರ್ವಜನಿಕವಾಗಿ ಕುಣಿದದ್ದು ಇದೇ ಮೊದಲು. 'ಹುಟ್ಟಿದರೆ ಕನ್ನಡ ನಾಡಲ್‌ ಹುಟ್ಟಬೇಕು" ಗೀತೆಯನ್ನು ಹಾಡುತ್ತಾ ಹಾಡುತ್ತಾ ರಾಜ್‌ ಕುಣಿಯತೊಡಗಿದಾಗ ಅವರೊಂದಿಗೆ ನಟನಟಿಯರೂ ಸೇರಿಕೊಂಡರು. ಕ್ರೀಡಾಂಗಣದ ತುಂಬಾ ಹಾಡು ನೃತ್ಯ ಸಾಂಕ್ರಾಮಿಕವಾಯಿತು.
    ಇದು ಸ್ವರ್ಗ ಸ್ವರ್ಗ !

    ಸಾಗರದಂತೆ ನೆರೆದಿರುವ ಅಭಿಮಾನಿ ದೇವರುಗಳ ನಡುವೆ ಇರುವುದು ಸ್ವರ್ಗದಲ್ಲಿ ಇರುವಂತೆ ಕಾಣುತ್ತಿದೆ. ತುಂಬಾ ದಿನಗಳ ನಂತರ ಇಂಥದೊಂದು ಸಂತೋಷ ಅನುಭವಿಸುತ್ತಿದ್ದೇನೆ. ತುಂಬಾ ಸಲ ತುಮಕೂರಿಗೆ ಬಂದಿದ್ದೇನೆ. ರಂಗಭೂಮಿ ಹಾಗೂ ಚಿತ್ರೋದ್ಯಮವನ್ನು ಬೆಳೆಸಿದ ಗುಬ್ಬಿವೀರಣ್ಣನವರ ಕಾರ್ಯಕ್ಷೇತ್ರವಿದು. ಇಂಥ ಊರಿನಲ್ಲಿ ಸಿನಿಮಾ ಸಂಭ್ರಮ ನೋಡಿ ತುಂಬಾ ಸಂತೋಷವಾಗುತ್ತಿದೆ ಎಂದು ರಾಜ್‌ ಭಾವುಕರಾದರು.

    ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಕನ್ನಡ ಚಿತ್ರಗಳು ಬರುತ್ತಿವೆ ಎಂದ ರಾಜ್‌ಕುಮಾರ್‌- ಹೊಸ ಪೀಳಿಗೆಯ ನಟರಾದ ಸುದೀಪ್‌ ಹಾಗೂ ದರ್ಶನ್‌ ಅವರನ್ನು ಪ್ರತಿಭಾವಂತರು ಎಂದು ಬಣ್ಣಿಸಿದರು. ಸುದೀಪ್‌ ಅವರ 'ಹುಚ್ಚ" ಚಿತ್ರ ತುಂಬಾ ಚೆನ್ನಾಗಿದೆ ಎಂದಾಗ, ಆವರೆಗೂ ಕಾರ್ಯಕ್ರಮದ ಅವ್ಯವಸ್ಥೆಯ ಬಗ್ಗೆ ಮುನಿಸಿಕೊಂಡಿದ್ದ ಸುದೀಪ್‌ ಅವರ ಕಂಗಳಲ್ಲಿ ಸ್ವಾತಿಮುತ್ತು .

    ರಿಮೇಕ್‌ ಚಿತ್ರಗಳಿಗೂ ಸಬ್ಸಿಡಿ

    ಕನ್ನಡದಲ್ಲಿ ತಯಾರಾಗುವ ಎಲ್ಲ ಚಿತ್ರಗಳಿಗೂ (ರಿಮೇಕ್‌ ಸೇರಿದಂತೆ) ಸಹಾಯಧನ ನೀಡುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್‌.ರಮೇಶ್‌ ಕಾರ್ಯಕ್ರಮದಲ್ಲಿ ಸರ್ಕಾರವನ್ನು ಕೋರಿದರು. ರಮೇಶ್‌ ಅವರ ಮನವಿಗೆ ಪ್ರತಿಕ್ರಿಯಿಸಿದ ವಾರ್ತಾ ಸಚಿವ ಡಾ.ಜಿ.ಪರಮೇಶ್ವರ್‌- ಎಲ್ಲ ಚಿತ್ರಗಳಿಗೂ ತಲಾ 5 ಲಕ್ಷ ಸಬ್ಸಿಡಿ ನೀಡುವ ಕುರಿತು ಸರ್ಕಾರ ಚಿಂತಿಸಲಿದೆ ಎಂದರು.

    ಬಾಲಿವುಡ್‌ ನಟ ಜಾಕಿ ಶ್ರಾಫ್‌ ಗೈರು ಹಾಜರಾಗಿದ್ದುದು ಜನತೆಯ ನಿರಾಶೆಗೆ ಕಾರಣವಾಯಿತು. ಪಾರ್ವತಮ್ಮ , ರಾಘೕಂದ್ರ ರಾಜ್‌ಕುಮಾರ್‌, ಸಚಿವ ಜಯಚಂದ್ರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಚಿತ್ರೋದ್ಯಮ ಹಾಗೂ ಸರ್ಕಾರದ ಮಟ್ಟಿಗೆ ಕಾರ್ಯಕ್ರಮದ ಮುಕ್ತಾಯದೊಂದಿಗೆ ವಾರ್ಷಿಕ ಸಂಪ್ರದಾಯ ಮುಕ್ತಾಯವಾದಂತಾಯಿತು. ಆದರೆ, ಈ ಸಂಭ್ರಮ ತುಮಕೂರಿನ ಜನತೆಯ ಪಾಲಿಗೆ ತುಂಬಾ ದಿನಗಳವರೆಗೂ ನೆನಪಿನಲ್ಲಿರುತ್ತದೆ. ಸದ್ದುಗದ್ದಲದ ನಂತರ ಉಳಿಯುವುದು ನೆನಪುಗಳು ಮಾತ್ರ.

    Monday, July 22, 2013, 15:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X