twitter
    For Quick Alerts
    ALLOW NOTIFICATIONS  
    For Daily Alerts

    ಪ್ರೀತಿಯ ಅಂಬ್ರೀಷಣ್ಣಾ, ಸುಮ್ನಿರೋದು ಸರಿಯಾ?

    By Super
    |

    Ambarish
    ಸಿನಿಮಾಗಳಲ್ಲಿ ಕಾವೇರಿ-ಮಂಡ್ಯ ಅನ್ನುತ್ತ ಭಾಷಣ ಬಿಗಿಯುವ, ನಿಮ್ಮ ಇತ್ತೀಚಿನ ಮಾತು ಕೇಳಿ ನೋವಾಯಿತು. ಬೇಸರವಾಯಿತು. ಪಿಚ್‌ ಅನ್ನಿಸ್ತು. ಅಯ್ಯಯ್ಯೋ, ಅಂಬ್ರೀಷ್‌ ಅಂದ್ರೆ ಇಷ್ಟೇನಾ ಅಂತ ಕೂಡ ಅನ್ನಿಸಿಬಿಡ್ತು. ಹೀಗಾಗಿ ಈ ಪತ್ರ!

    ಮಾನ್ಯ ಕೇಂದ್ರ ಸಚಿವರಾದ ಅಂಬರೀಷ್‌ ಅವರಿಗೆ- ನೆನಪು ಮತ್ತು ನಮಸ್ಕಾರ.
    ಸಾಹೇಬರೆ, ನಿಮಗೇ ಗೊತ್ತಿರುವ ಹಾಗೆ, ಕಾವೇರಿಯ ನೆಪದಲ್ಲಿ ಮಂಡ್ಯ ಕುದಿಯುತ್ತಿದೆ. ಮೈಸೂರು ಮಹಾ ಸಂಗ್ರಾಮಕ್ಕೆ ಅಣಿಯಾಗಿದೆ. ಬೆಂಗಳೂರು ಬೆಂಕಿಯಾಗಿದೆ. ನಮ್ಮ ಜನ ಜಾತಿಧರ್ಮ-ಪಕ್ಷ ಎಲ್ಲವನ್ನೂ ಮರೆತು ಬೀದಿಗೆ ಬಂದಿದ್ದಾರೆ. ''ಜೀವ ಕೊಟ್ಟೇವು, ಹನಿ ನೀರು ಬಿಡೆವು'' ಎಂದು ಸಾರಿ ಹೇಳಿದ್ದಾರೆ. ತಮ್ಮ ಧಿಕ್ಕಾರದ ಧ್ವನಿ ದೆಹಲಿಯ ಧಣಿಗಳಿಗೆ ಗೊತ್ತಾಗಲಿ ಎಂದೇ ರೈಲು ತಡೆದಿದ್ದಾರೆ. ಬಸ್ಸು ತಡೆದಿದ್ದಾರೆ. ರಸ್ತೆಯಲ್ಲೇ ಇರುಳು ಕಳೆದಿದ್ದಾರೆ. ಹಗಲಿಡೀ ಹೋರಾಡಿ ದಣಿದಿದ್ದಾರೆ. ಹತ್ತಾರು ಬಾರಿ ಪೊಲೀಸರ ಲಾಠಿಗೆ ಮೈ ಒಡ್ಡಿದ್ದಾರೆ. ಅಕಸ್ಮಾತ್‌ ಕಾವೇರಿ ಕೈ ತಪ್ಪಿ ಹೋದರೆ ಬದುಕುವುದು ಹೇಗೆ ಎಂದು ಯೋಚಿಸಿ ಕಂಗಾಲಾಗಿದ್ದಾರೆ.

    ಕಂಬನಿ ಹರಿಸಿದ್ದಾರೆ. ಇಂಥ ಸಂದರ್ಭದಲ್ಲಿ ಮೊನ್ನೆ ಮೊನ್ನೆಯವರೆಗೂ ಎಲ್ಲರಿಗೂ ಒಂದು ನಂಬಿಕೆಯಿತ್ತು. ಏನೆಂದರೆ- ಕಾವೇರಿ ವಿಷಯವಾಗಿ ಅನ್ಯಾಯವಾದ್ರೆ ನಮ್‌ ಅಂಬ್ರೀಷು ಸುಮ್ನೆ ಇರೋದಿಲ್ಲ... ಅಂಬ್ರೀಷ್ದು ಮಂಡ್ಯ. ಅಂಬ್ರೀಷು ಓದಿದ್ದು ಮೈಸೂರಲ್ಲಿ ಹೆಸರು ಮಾಡಿದ್ದು ಬೆಂಗ್ಳೂರಲ್ಲಿ! ಕಾವೇರಿ ಈ ಮೂರೂ ಜಿಲ್ಲೆಗೆ ಜೀವ ಇದ್ದಂತೆ. ಹಾಗಾಗಿ ಅಂಬ್ರೀಷು ಸಿಡಿದೇಳುವುದು ಗ್ಯಾರಂಟಿ...

    ಹೀಗೆಲ್ಲ ಅಂದುಕೊಂಡಿದ್ರು ಜನ. ವಾರದ ಹಿಂದೆ ನೀರು ಕುರಿತು ನ್ಯಾಯಮಂಡಳಿಯ ತೀರ್ಪು ಹೊರಬಿತ್ತಲ್ಲ? ಆ ಕ್ಷಣವೇ ಜನ ನಿಮ್ಮ ಧಿಕ್ಕಾರದ ಮಾತಿಗಾಗಿ ಕಾಯ್ತಾ ಇದ್ರು. ನಿಮ್ಮ ಸಾಂತ್ವನದ ನುಡಿಗೆ ಕಿವಿಯಾಗಿದ್ರು. ನೀವು ಪ್ರತಿಭಟನೆಗೆ ಬಂದು, ದಿಲ್ಲಿ ದಿಕ್ಕಿಗೆ ಕೈ ತೋರುತ್ತಾ -

    ''ಲೋ ನನ್ಮಕ್ಳ, ನಮ್‌ ಜನ ನೀರಿಲ್ದೆ ಸಾಯ್ತಾ ಅವ್ರೆ. ಅವ್ರ ಬದುಕಿನ ಜೊತೆ ಆಟ ಆಡ್ತಾ ಇದ್ದೀರೇನ್ರೋ? ಕಾವೇರಿ ತಂಟೇಗ್‌ ಬಂದ್ರೆ ನಿಮ್ಮಯ್ಯನ್‌....'' ಎಂದು ಅಬ್ಬರಿಸ್ತೀರಿ ಅಂದುಕೊಂಡಿದ್ರು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಯಿತು! ನೀವು ನಾಲ್ಕು ದಿನದ ನಂತರ ಮಂಡ್ಯಕ್ಕೆ ಬಂದ್ರಿ. ಜನ ಸುಮ್ನೆ ಬಿಟ್ರಾ? ಕಾರು ತಡೆದ್ರು. ಅಂಬೀ ಸುಮ್ನೆ ಇದೀಯಲ್ಲೋ, ಮಾತಾಡಪ್ಪಾ. ಕಾವೇರಿ ನೀರಿಲ್ದೆ ಹೋದರೆ ಬದುಕೋಕಾಯ್ತದಾ? ಪ್ರತಿಭಟನೆಯ ಮುಂದಾಳತ್ವವಹಿಸಿಕೊಳ್ಳಪ್ಪಾ ಅಂದ್ರು.

    ಸರ್‌, ನೀವು ಅದಕ್ಕೆ- ಆಯ್ತು ಎನ್ನಲಿಲ್ಲ. ಆಗಲ್ಲ ಅಂತಾನೂ ಹೇಳಲಿಲ್ಲ. ಬದಲಿಗೆ, ಎಲ್ಲ ರಾಜಕಾರಣಿಗಳ ಥರಾನೇ- ''ರೈತರ ಹಿತ ಕಾಪಾಡಲು ನಾನು ಸಿದ್ಧ. ನಿಮಗೆ ಒಳ್ಳೆಯದಾಗುತ್ತೆ ಅಂದ್ರೆ ರಾಜೀನಾಮೆ ಕೊಡಲೂ ಸಿದ್ಧ! ಎಲ್ಲಕ್ಕೂ ನನ್ನನ್ನೇ ಯಾಕೆ ಕೇಳ್ರೀರಿ? ಯಾರಾದ್ರೂ ಚಳವಳಿ ನೇತೃತ್ವ ವಹಿಸಿಕೊಳ್ಳಿ. ನಾನು ಜತೆಗಿರ್ತೀನಿ'' ಎಂದು ಕಾರು ಹತ್ತೇಬಿಟ್ರಿ.

    ಆ ಮಾತು ಕೇಳಿ ನೋವಾಯಿತು. ಬೇಸರವಾಯಿತು. ಪಿಚ್‌ ಅನ್ನಿಸ್ತು. ಅಯ್ಯಯ್ಯೋ, ಅಂಬ್ರೀಷ್‌ ಅಂದ್ರೆ ಇಷ್ಟೇನಾ ಅಂತ ಕೂಡ ಅನ್ನಿಸಿಬಿಡ್ತು. ಕಾವೇರಿ ವಿಷಯವಾಗಿ ಜನ ನಿಮ್ಮಿಂದ ಏನು ನಿರೀಕ್ಷಿಸಿದಾರೆ? ನೀವು ಹೇಗಿರಬೇಕು ಅಂತ ಬಯಸ್ತಾರೆ ಅನ್ನೋದನ್ನ ಹೇಳಿಬಿಡಬೇಕು ಅನಿಸಿದ್ದರಿಂದ-ಈ ಪತ್ರ!

    ''ಎಲ್ಲಕ್ಕೂ ನನ್ನನ್ನೇ ಯಾಕಪ್ಪ ಹೊಣೆಗಾರನನ್ನಾಗಿ ಮಾಡ್ತೀರಿ?'' ಅಂದಿರಿ ನೀವು. ಕೇಳಿ ಸಾರ್‌- ''ಯಾವುದೇ ವಿಷಯವಾಗಿ ಹೋರಾಡಿದ್ರೂ ಅಂಬ್ರೀಷು ಗೆದ್ದೇ ಗೆಲ್ತಾನೆ ಎಂಬ ನಂಬಿಕೆ ಜನರಿಗಿದೆ. ಯಾಕಂದ್ರೆ-ನಾವೆಲ್ಲ ನಿಮ್ಮನ್ನು ರೆಬಲ್‌ ಸ್ಟಾರ್‌ ಎಂದು ಗುರುತಿಸಿದವರು. ನಿಮ್ಮನ್ನು ಚಿತ್ರನಟ ಎಂಬ ಕಾರಣದಿಂದಲೇ ಚುನಾವಣೇಲಿ ಗೆಲ್ಲಿಸಿದವರು. ಬೆಳ್ಳಿತೆರೆಯ ಮೇಲೆ ರಾಜಕಾರಣಿಗಳು ಮೇಲೆ ಮುರಕೊಂಡು ಬೀಳುವ ಅಂಬರೀಷ್‌-ದಿಲ್ಲಿಯಲ್ಲೂ ಹಾಗೇ ವರ್ತಿಸಬಹುದೇನೋ ಎಂಬ ಆಸೇನ ಈಗಲೂ ಇಟ್ಟುಕೊಂಡವರು.

    English summary
    An open letter to Noted Actor and Loksabha Member Ambarish by A.R.Manikanth, Bangalore.
    Friday, July 12, 2013, 11:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X