»   » ಪ್ರೀತಿಯ ಅಂಬ್ರೀಷಣ್ಣಾ, ಸುಮ್ನಿರೋದು ಸರಿಯಾ?

ಪ್ರೀತಿಯ ಅಂಬ್ರೀಷಣ್ಣಾ, ಸುಮ್ನಿರೋದು ಸರಿಯಾ?

Posted By:
Subscribe to Filmibeat Kannada


ಎಂ.ಪಿ. ಆದ ನಂತರ ಕೂಡ ಅದೊಂದು ಸಂದರ್ಭದಲ್ಲಿ- ‘‘ನನ್ಮಕ್ಳು ಅಧಿವೇಶನದ ಹೆಸರಲ್ಲಿ ಕೂಗಾಡ್ತಾ ಇರ್ತಾರೆ. ಸುಮ್ನೆ ಕೂರುವ ಬದಲು ಇಲ್ಲೇ ಇದ್ದು ನಮ್ಮ ಜನರ ಕಷ್ಟ-ಸುಖ ಕೇಳ್ತೀನಿ’’ ಅಂದಿರಲ್ಲ? ಆ ಮಾತು ಮೆಚ್ಚಿಕೊಂಡವರು. ಅಸಹಾಯಕರಿಗೆ ಅದೆಷ್ಟೋ ಸಂದರ್ಭದಲ್ಲಿ ನೀವು ನೆರವಾದಾಗ -ಅಂಬ್ರೀಷು ಅಂದ್ರೆ ಸುಮ್ನೆ ಅಲ್ಲ ಕಣ್ರೀ. ಅವ್ನು ಕಲಿಯುಗ ಕರ್ಣ ಎಂದು ಖುಷಿಪಟ್ಟವರು! ಈ ಎಲ್ಲ ಕಾರಣದಿಂದಾನೇ ಅಂಬ್ರೀಷು ನಾಯಕತ್ವವಹಿಸಿಕೊಳ್ಳಲಿ ಅಂತ ಇಷ್ಟ ಪಡ್ತಾರೆ ಜನ.

ಈಗ ಸುಮ್ನೇ ಒಂದ್ಸಲ ಯೋಚನೆ ಮಾಡಿ, ಮಂಡ್ಯಕ್ಕೂ-ಕಾವೇರಿಗೂ; ಮಂಡ್ಯಕ್ಕೂ-ಅಂಬರೀಷ್‌ಗೂ ನೇರ ಸಂಬಂಧ ಇದೆ. ಕಾವೇರಿ ಮಂಡ್ಯದ ಜೀವನದಿ. ನೀವೋ ಮಂಡ್ಯದ ಎಂಪಿ. ಹೀಗಿರುವಾಗ ನ್ಯಾಯಮಂಡಳಿಯ ತೀರ್ಪು ಕೇಳಿದ್ದೇ ರೇಗಬೇಕಿತ್ತು. ಉಗ್ರವಾಗಿ ಪ್ರತಿಭಟಿಸಬೇಕಿತ್ತು. ಹೋರಾಟಕ್ಕೆ ಮುಂದಾಗಬೇಕಿತ್ತು. ಇಡೀ ಮಂಡ್ಯದ; ಆ ಮೂಲಕ ಇಡೀ ಕನ್ನಡಿಗರ ಕೆಚ್ಚು ನಿಮ್ಮ ಮಾತಾಗಿ ಸಿಡಿಯಬೇಕಿತ್ತು. ಆದರೆ, ಹಾಗೇನೂ ಆಗಲಿಲ್ಲ. ನೀವು -‘‘ಕೇಂದ್ರದ ಮೇಲೆ ಒತ್ತಡ ಹಾಕೋಣ. ಅನ್ಯಾಯ ಆಗೊಲ್ಲ ಅಂತ ನಂಬಿಕೆಯಿದೆ ಕಣ್ರಿ. ರೈತರಿಗೆ ಅನ್ಯಾಯ ಆಗಲು ನಾನು ಬಿಡಲ್ಲ ಕಣ್ರೀ’’ ಎಂದು ಡೈಲಾಗ್‌ ಹೊಡೀತಾ ಇದೀರ!

ಪ್ರೀತಿಯ ಅಂಬ್ರೀಷಣ್ಣಾ, ಇದು ಸರಿಯಾ? ಸಾರ್‌, ಸ್ವಲ್ಪ ತಮಿಳ್ನಾಡಿನ ಕಡೆ ನೋಡಿ. ಅಲ್ಲಿ ಕರುಣಾನಿಧಿ ಆ ಪುಣ್ಯಾತ್ಮ-ಒಂದು ಕಾಲದಲ್ಲಿ ಸಿನಿಮಾಕ್ಕೆ ಕಥೆ -ಡೈಲಾಗ್‌ ಬರೀತಾ ಇದ್ದವನು. ಅಂಥ ಭೂಪ ಈಗ ತಮಿಳ್ನಾಡಿನ ಮುಖ್ಯಮಂತ್ರಿ! ಕೆ.ಆರ್‌.ಎಸ್‌.ನಲ್ಲಿರೋ ಮುಕ್ಕಾಲು ಭಾಗ ನೀರು ಹರಿಯಲಿ ಎಂದು ನ್ಯಾಯಾಧೀಕರಣ ತೀರ್ಪು ನೀಡಿದ್ರೂ, ನೀರೇ ಸಾಕಾಗ್ತಾ ಇಲ್ಲ. ಇನ್ನೂ ಜಾಸ್ತಿ ಬಿಡ್ದೇ ಇದ್ರೆ ಸರಕಾರ ಉರುಳಿಸಿಬಿಡ್ತೀನಿ. ನಾನೇ ಚಳವಳಿಗೆ ಬಂದು ಬಿಡ್ತೀನಿ. ಹಾಂ, ಹೂಂ ಎಂದೆಲ್ಲ ಅಬ್ಬರಿಸ್ತಾ ಇದಾನೆ!

ಇಂಥ ಸಂದರ್ಭದಲ್ಲಿ ನೀವು ಅಟ್‌ಲೀಸ್ಟ್‌ ಅವನಿಗಾದ್ರೂ ಸಡ್ಡು ಹೊಡೆದು- ಯೋವ್‌, ನೀನು ಬಾಯ್ಮುಚ್ಕಂಡು ಇರ್ತೀಯೋ ಇಲ್ವೊ? ನಮ್‌ ತಂಟೇಗ್‌ ಬರ್ಬೇಡ. ಬಂದ್ರೆ ನಾನು ಸುಮ್ನಿರಲ್ಲ ನೋಡ್‌ ಅಂತಾದ್ರೂ ಅಂದಿದ್ರೆ... ಹೌದು ಸಾರ್‌, ಜನ ಸಖತ್‌ ಖುಷಿಪಡ್ತಿದ್ರು. ಆದ್ರೆ-ನೀವು ಏನೂ ಆಗದೇ ಇರೋರ ಥರಾ ಇದೀರಲ್ಲ, ಅದಕ್ಕೆ ಜನ ಏನಂತಿದಾರೆ ಗೊತ್ತ? ‘‘ಓಹೋ, ನಮ್‌ ಅಂಬ್ರೀಷು ಹೈಕಮಾಂಡ್‌ಗೆ ಹೆದರ್ಕೊಂಡ ಹಾಗೆ ಕಾಣ್ತಾ ಇದೆ. ಪ್ರತಿಭಟನೆಗೆ ಬಂದ್ರೆ ಮಿನಿಸ್ಟ್ರು ಪೋಸ್ಟ್‌ ಹೋಗುತ್ತೆ ಅಂತ ಹಾಗೆ ಮಾಡ್ತಾ ಇದಾರೆ. ನಮ್ಮ ಹೀರೋ ಅಂಬ್ರೀಷ್‌ ಕಳೆದು ಹೋಗಿದಾನೆ. ಅಂಬ್ರೀಷೇ ಹೀಗೆ ಮಾಡಿಬಿಟ್ರೆ, ನಾವು ಇನ್ಮೇಲೆ ಯಾರ್ನಾ ನಂಬಬೇಕು? ಯಾರ ಮೇಲೆ ವಿಶ್ವಾಸ ಇಡಬೇಕು? ಇಂತಹ ಮಾತುಗಳು ಈಗಾಗ್ಲೇ ನಿಮಗೂ ಕೇಳಿಸಿರಲಿಕ್ಕೆ ಸಾಕು. ಆದ್ರೂ ಜನ ಏನಂತಿದಾರೆ ಅನ್ನೋದು ನಿಮ್ಗೂ ಗೊತ್ತಿರಲಿ ಅಂತ ಮತ್ತೆ ಬರೆದಿದೀನಿ. ಬೇಸರ ಇಲ್ಲ ತಾನೆ?

* * *

ಇಷ್ಟೆಲ್ಲ ಆದ ಮೇಲೂ ಇಡೀ ಕನ್ನಡದ ಜನರಿಗೆ ನಿಮ್ಮ ಮೇಲೆ ಪ್ರೀತಿಯಿದೆ. ವಿಶ್ವಾಸವಿದೆ. ಅಭಿಮಾನವಿದೆ. ಮಮಕಾರ ಇದೆ. ನಾಳೆ ಅಂಬ್ರೀಷು ಸಿ.ಎಂ. ಆದ್ರೂ ಆಗಬಹುದೆಂಬ ಅಂದಾಜಿದೆ. ನಿಮ್ಮೊಳಗಿನ ಪ್ರಬುದ್ಧ ರಾಜಕಾರಣಿಯನ್ನ ನೋಡಬೇಕು ಎನ್ನುವ ಕಾತುರವಿದೆ, ಕುತೂಹಲವಿದೆ.

ಈ ಎಲ್ಲ ಕಾರಣದಿಂದಲೇ ಯಾವುದೇ ಕಷ್ಟ ಬಂದ್ರೂ ಜನ ಛಕ್‌ ಅಂತ ನಿಮ್ಮ ಕಡೆ ನೋಡ್ತಾರೆ. ಅಂಬಿ ರೈತನ ಮಗ. ರೈತರ ಕಷ್ಟ ಚೆನ್ನಾಗಿ ಗೊತ್ತಿದೆ ಅಂದುಕೊಳ್ತಾರೆ. ಹಾಗಿರೋವಾಗ ನೀವು ಸುಮ್ಮೆ ಕೂತುಬಿಟ್ರೆ ಹ್ಯಾಗೆ? ಈಗಿನ್ನೂ ಕಾಲ ಮಿಂಚಿಲ್ಲ ಸಾರ್‌ ಹೋರಾಟದ ಹಾದಿಗೆ ನಡೆದು ಬನ್ನಿ.

ಒಂದ್ಸಲ, ಒಂದೇ ಒಂದ್ಸಲ ರೈತರ ಜತೆಗೆ ನಿಂತು ಪ್ರತಿಭಟಿಸಿದ್ರಿ ಅಂದ್ರೆ ಮಂಡ್ಯ ಗುಡುಗುತ್ತೆ, ಇಂಡಿಯಾ ನಡುಗುತ್ತೆ! ನೀವು ಹೋರಾಟಕ್ಕೆ ಬಂದ ಕಾರಣಕ್ಕೇ -ಇನ್ನೂ ಹತ್ತು ವರ್ಷ ಮಂಡ್ಯದ ಪಿ.ಎಂ. ಸೀಟು ನಿಮ್ಗೇ ಗ್ಯಾರಂಟಿ ಆಗುತ್ತೆ. ಇಷ್ಟೆಲ್ಲ ಕೇಳಿದ ಮೇಲಾದ್ರೂ ರೈತರ ಕಣ್ಣೀರು ಒರೆಸಲು ಬನ್ನಿ. ಕೇಂದ್ರದ ವಿರುದ್ಧ ದನಿಯೆತ್ತಲು ಬನ್ನಿ. ನಿಮಗೆ ಜಯವಾಗಲಿ. ನಮಗೆ ಶುಭವಾಗಲಿ.

ಇಷ್ಟೆಲ್ಲ ಹೇಳಿದ್ರೂ ನೀವು ಮಾತಾಡ್ದೇ ಹೋದ್ರೆ ತುಂಬ ನೋವಾಗುತ್ತೆ ಸಾರ್‌. ಹಾಗೆ ಮಾಡಬೇಡಿ. ಕಾವೇರಿ ಹರಿದು ಹೋಗಲು ದಯವಿಟ್ಟು ಬಿಡಬೇಡಿ ಎಂಬ ರೈತರೆಲ್ಲರ ಪರವಾದ ‘ಆದೇಶ’ದ ಜೊತೆಗೆ ನಮಸ್ಕಾರ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada