»   » ಯಜಮಾನನಿಲ್ಲದ ಮನೆಯಲ್ಲಿ ಅಂಧಕಾರ, ಸ್ಮಶಾನ ಮೌನ...

ಯಜಮಾನನಿಲ್ಲದ ಮನೆಯಲ್ಲಿ ಅಂಧಕಾರ, ಸ್ಮಶಾನ ಮೌನ...

Posted By: ದಟ್ಸ್‌ಕನ್ನಡ ಸಿನಿಡೆಸ್ಕ್‌
Subscribe to Filmibeat Kannada

ನಾಡಿಗೆ ನಾಡೇ ದಿಕ್ಕುತಪ್ಪಿದಂತೆ ಕಂಗೆಟ್ಟಿದೆ. ಕೋಟ್ಯಂತರ ಅಭಿಮಾನಿಗಳು ಮುಂದೇನು ಎಂದು ಆಕಾಶದತ್ತ ಮುಖಮಾಡಿದ್ದಾರೆ. ಸುಮಾರು ಐದು ದಶಕಗಳ ತಮ್ಮ ಕಲಾಜೀವನದಲ್ಲಿ ಅವರು ಮಾಡದ ಪಾತ್ರಗಳೇ ಇಲ್ಲ ಎನ್ನಬಹುದು. ಐತಿಹಾಸಿಕ, ಪೌರಾಣಿಕ, ಜನಪದ, ಸಾಮಾಜಿಕ, ಜೇಮ್ಸ್‌ಬಾಂಡ್‌ ಶೈಲಿಯ ಪಾತ್ರಗಳು ಸೇರಿದಂತೆ ಅವರು, ಎಲ್ಲ ರೀತಿಯ ಪಾತ್ರಗಳಲ್ಲೂ ಲೀಲಾಜಾಲವಾಗಿ ಅಭಿನಯಿಸಿ, ತಮ್ಮ ಕಲಾಪ್ರೌಢಿಮೆಯನ್ನು ಮೆರೆದಿದ್ದರು.

ದಾದಾಸಾಹೇಬ್‌ ಫಾಲ್ಕೆ, ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಅವರು, ತಮ್ಮ ನಟನೆಗಾಗಿ ಒಂಬತ್ತು ಸಲ ರಾಜ್ಯ ಪ್ರಶಸ್ತಿಯನ್ನು, 10ಸಲ ಫಿಲಂಫೇರ್‌ ಪ್ರಶಸ್ತಿಯನ್ನು ಪಡೆದಿದ್ದರು. ಜೀವನಚೈತ್ರ ಚಿತ್ರದಲ್ಲಿ ತಮ್ಮ ಗಾಯನದಿಂದ ಅವರು ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು. ನಟಸಾರ್ವಭೌಮ ಎಂಬ ಮಾತಿಗೆ ಅವರು, ಅನ್ವರ್ಥನಾಮ.

ಮುತ್ತುರಾಜ ಸಿಂಗಲೂರು ಪುಟ್ಟಸ್ವಾಮಯ್ಯ ಜನಸಿದ್ದು 1926ರ ಏ.24ರಂದು. ಗಾಜನೂರಿನಲ್ಲಿ. 1954ರಲ್ಲಿ 'ಬೇಡರಕಣ್ಣಪ್ಪ" ಮೂಲಕ ರಾಜ್‌ಗೆ ಬಣ್ಣದ ಬದುಕನ್ನು ಪ್ರವೇಶಿಸಿದರು.

ರಂಗಭೂಮಿಯ ಪ್ರತಿಭಾವಂತ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರ ಪುತ್ರರಾದ ರಾಜ್‌, ರಂಗಭೂಮಿ ಮತ್ತು ಸಿನಿಮಾ ಲೋಕದಲ್ಲಿ ಏರಿದ ಎತ್ತರ ಗೌರಿಶಂಕರ.

ತಂದೆಯ ಜೊತೆ ಬಾಲ್ಯದಲ್ಲೇ ಗುಬ್ಬಿ ವೀರಣ್ಣ ಕಂಪನಿ ಸೇರಿದ ಅವರು, ಬಡತನದ ಅನುಭವವನ್ನು ಕಂಡುಂಡವರು. ಉದರ ಪೋಷಣೆಗೆಂದು ನಮ್ಮ ತಂದೆಯವರು ನಮಗೆ(ರಾಜ್‌ ತಂಗಿ ಶಾರದಾ ಕೂಡ ಬಾಲ್ಯದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು)ನಾಟಕಗಳಲ್ಲಿ ಪಾತ್ರ ಕೊಡಿಸುತ್ತಿದ್ದರು ಎಂಬ ಸತ್ಯವನ್ನು ನೆನಪಿಸಿಕೊಳ್ಳುತ್ತಿದ್ದ ಸಾತ್ವಿಕರಾದ ರಾಜ್‌, ಮೂರನೇ ತರಗತಿವರೆಗೆ ಮಾತ್ರ ಶಾಲಾ ಶಿಕ್ಷಣ ಪೂರೈಸಿದ್ದರು. ಗುಬ್ಬಿ ವೀರಣ್ಣ ಕಂಪನಿಯಲ್ಲಿದ್ದಾಗ ತಮಗೆ ಅಕ್ಷರಾಭ್ಯಾಸ ಕಲಿಸಿದ ಬಾಲಕೃಷ್ಣ ಅವರನ್ನು ಸದಾ ಸ್ಮರಿಸುತ್ತಿದ್ದರು.

ರಂಗಭೂಮಿ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ಯಾವತ್ತೂ ಸಾಮಾಜಿಕ ಜವಾಬ್ದಾರಿ ಮರೆತವರಲ್ಲ. ಹಾಗಾಗಿಯೇ ತಾವು ಅಭಿನಯಿಸುತ್ತಿದ್ದ ಚಿತ್ರಗಳಲ್ಲಿ ಅವರೆಂದೂ ಧೂಮಪಾನ ಹಾಗೂ ಮದ್ಯಪಾನ ಮಾಡಲೇ ಇಲ್ಲ. ಸಂಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ನೆರವು ನೀಡುವುದರಲ್ಲಿ ಸದಾ ಮುಂದಿರುತ್ತಿದ್ದ ಅವರು, ಪ್ರಕೃತಿ ವಿಕೋಪಗಳು ಸಂಭವಿಸಿದಾಗಲೂ ಉದಾರವಾಗಿ ದೇಣಿಗೆ ನೀಡುತ್ತಿದ್ದರು.

ರಾಜ್‌ಕುಮಾರ್‌ ಅವರಿಗೆ ಶಿವರಾಜ್‌ಕುಮಾರ್‌, ರಾಘವೇಂದ್ರರಾಜ್‌ಕುಮಾರ್‌ ಹಾಗೂ ಪುನೀತ್‌ ಎಂಬ ಮೂವರು ಗಂಡು ಮಕ್ಕಳು ಹಾಗೂ ಲಕ್ಷ್ಮೀ, ಪೂರ್ಣಿಮಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 12ಕ್ಕೂ ಹೆಚ್ಚು ಮೊಮ್ಮಕ್ಕಳಿದ್ದಾರೆ.

ಯೋಗವನ್ನು ರೂಢಿಸಿಕೊಂಡಿದ್ದ ಅವರು, ಕಾಡುಗಳ್ಳ ವೀರಪ್ಪನ್‌ ಬಂಧನದಲ್ಲಿ ಕೆಲವು ಕಾಲ ನರಳಿದ್ದರು. ಕನ್ನಡ ಭಾಷೆ-ಸಂಸ್ಕೃತಿಯ ಮೇಲೆ ಸದಭಿಮಾನ ಇರಿಸಿಕೊಂಡಿದ್ದ ಅವರು, ಬೇರೆ ಭಾಷೆಗಳ ಚಿತ್ರಗಳಲ್ಲಿ ಎಂದೂ ಅಭಿನಯಿಸಲಿಲ್ಲ. ಗೋಕಾಕ್‌ ಚಳವಳಿಯಲ್ಲಿ ಪಾಲ್ಗೊಂಡು ಮಿಂಚಿನ ಸಂಚಾರ ಮೂಡಿಸಿದ್ದ ಅವರು, ಕಟ್ಟಾ ಕನ್ನಡಾಭಿಮಾನಿಯಾಗಿದ್ದರು.

ಭಕ್ತಕುಂಬಾರ, ಬಬ್ರುವಾಹನ, ಸತ್ಯಹರಿಶ್ಚಂದ್ರ, ಭಕ್ತಚೇತ, ಭಕ್ತಕನಕದಾಸ, ರಣಧೀರ ಕಂಠೀರವ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣದೇವರಾಯ, ಮಯೂರ ಮತ್ತಿತರ ಚಿತ್ರಗಳಲ್ಲಿ ರಾಜ್‌ ತಮ್ಮ ಕಲಾನೈಪುಣ್ಯದಿಂದ ಚಿತ್ರರಸಿಕರ ಮನದಲ್ಲಿ ನೆಲೆಸಿದ್ದಾರೆ.

ಮಣ್ಣಿನ ಮಗ, ಅಣ್ಣ ತಂಗಿ, ಚಂದವಳ್ಳಿ ತೋಟ, ದೂರದ ಬೆಟ್ಟ, ಮೇಯರ್‌ ಮುತ್ತಣ್ಣ ಮತ್ತಿತರ ಚಿತ್ರಗಳಲ್ಲಿ ಹಳ್ಳಿಹುಡುಗನಾಗಿ ರಾಜ್‌, ಪ್ರಬುದ್ಧ ಅಭಿನಯದಿಂದ ಮಿಂಚಿದ್ದರು.

ಸಂಪತ್ತಿಗೆ ಸವಾಲ್‌ ಚಿತ್ರದ ಮೂಲಕ ಗಾಯನ ಕ್ಷೇತ್ರಕ್ಕೆ ಪ್ರವೇಶಿಸಿದ ರಾಜ್‌, ತಮ್ಮ ಶ್ರೀಮಂತ ಕಂಠದಿಂದ ಗಾನಕೋಗಿಲೆ ಎಂಬ ಮನ್ನಣೆಗೆ ಪಾತ್ರರಾಗಿದ್ದರು.

ಪ್ರತಿಭೆ ಮತ್ತು ವ್ಯಕ್ತಿತ್ವದಿಂದಲೇ ಜನಮನ ಸೂರೆಗೊಂಡಿದ್ದ ಕನ್ನಡದ ಮೇರುನಟ ಡಾ.ರಾಜ್‌ಕುಮಾರ್‌(77) ಬುಧವಾರ ನಿಧನವಾಗುವುದರೊಂದಿಗೆ, ಕನ್ನಡ ಸಂಸ್ಕೃತಿಯ ಪ್ರಮುಖ ಕೊಂಡಿಯಾಂದು ಕಳಚಿ ಬಿದ್ದಂತಾಗಿದೆ.

50ವರ್ಷಕ್ಕೂ ಹೆಚ್ಚು ಕಾಲ ಕನ್ನಡ ಬೆಳ್ಳಿತೆರೆಯ ಮಹಾತಾರೆಯಾಗಿ ಮೆರೆದ ಅವರು, ಅಭಿನಯಿಸಿದ್ದು 205 ಚಿತ್ರಗಳಲ್ಲಿ. ಮೊದಲ ಚಿತ್ರ ಬೇಡರ ಕಣ್ಣಪ್ಪ, ಕೊನೆಯ ಚಿತ್ರ ಶಬ್ದವೇಧಿ. ಎಲ್ಲ ಚಿತ್ರಗಳೂ ಅವಿಸ್ಮರಣೀಯವೇ. ಅಭಿನಯವಲ್ಲದೇ ಅವರು ಗಾಯನದಲ್ಲೂ ಸಮಾನ ಪ್ರಭುತ್ವ ಪಡೆದಿದ್ದರು.

ಅತ್ಯಂತ ಶುದ್ಧವಾಗಿ ಕನ್ನಡ ಬರೆಯುತ್ತಿದ್ದ ಅವರು ಅಷ್ಟೇ ಶುದ್ಧವಾಗಿ ಉಚ್ಚರಿಸುತ್ತಿದ್ದರು. ತಮ್ಮ ಅಭಿನಯ ಹಾಗೂ ವ್ಯಕ್ತಿತ್ವದಿಂದ ಇಡೀ ಕನ್ನಡ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅತ್ಯಂತ ಸಭ್ಯ ಹಾಗೂ ಸುಸಂಸ್ಕೃತ ಜೀವನ ನಡೆಸಿದ ಅವರು, ಎಲ್ಲರಲ್ಲೂ ಜೀವನ ಸ್ಫೂರ್ತಿ ಬಿಟ್ಟು ಹೋಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ರಾಜ್‌ ಕುಟುಂಬ ವರ್ಗಕ್ಕೆ, ಪಂಚಕೋಟಿ ಕನ್ನಡಿಗರಿಗೆ ಹಾಗೂ ಕಲಾಭಿಮಾನಿಗಳಿಗೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿ ದೊರೆಯಲಿ ಎಂದು ದಟ್ಸ್‌ ಕನ್ನಡ ಕೋರುತ್ತದೆ.

English summary
Karnataka dips into deep sorrow as Raj dies. The legendary actors acting sucha an impact on Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada