For Quick Alerts
  ALLOW NOTIFICATIONS  
  For Daily Alerts

  ಆರಾಧಿಸುವೆ ಮದನಾರಿ!

  By Super
  |

  ಈಗಿನ ಸಿನಿಮಾ ಸಾಹಿತ್ಯದಲ್ಲಿ ಅದೇಕೋ ಏನೋ, ಅಶ್ಲೀಲಾರ್ಥ ಹೊಮ್ಮಿಸುವಂತಹ ಸಂಭಾಷಣೆ, ಹಾಡುಗಳದ್ದೇ ಮೇಲುಗೈ. ಹಾಡುಗಳಾದರೂ ಎಷ್ಟೋ ಪರವಾಗಿಲ್ಲ , ಅದರೆ ಚಲನಚಿತ್ರ ಸಂಭಾಷಣೆಗಳ ಬಗ್ಗೆಯಂತೂ ಹೇಳುವುದೇ ಬೇಡ. ನಿಜವಾಗಿಯೂ ನಮ್ಮ ಜನ ಇದನ್ನೇ ಬಯಸುತ್ತಿದ್ದಾರೋ ಅಥವಾ ಹಾಗೆಂದು ನಮ್ಮ ಚಿತ್ರಬ್ರಹ್ಮರು ತಾವೇ ನಿರ್ಧರಿಸಿಬಿಟ್ಟಿದ್ದಾರೋ, ತಿಳಿಯುವುದಾದರೂ ಹೇಗೆ ? ಒಟ್ಟಿನಲ್ಲಿ ಸದಭಿರುಚಿಯೆಂಬುದು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿರುವುದು ಮಾತ್ರ ನಿಜ! ಆಕ್ಷೇಪಾರ್ಹ ದೃಶ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಎಸೆಯುವ ಸೆನ್ಸಾರ್‌ ಕತ್ತರಿ ಇಂತಹ ಸಾಹಿತ್ಯದ ವಿಷಯದಲ್ಲಿ ಮಾತ್ರ ಮೌನವಹಿಸುವುದು ದುರದೃಷ್ಟಕರ.

  ಆ ಬಗ್ಗೆ ನೀವೇನಾದರೂ ನವಿರಾಗಿ ಆಕ್ಷೇಪಿಸಿದರೂ ಸಾಕು, 'ನೀವೇನು ಶಿಲಾಯುಗದಲ್ಲಿದ್ದೀರಾ? ಇದೆಲ್ಲಾ ಜೀವನದಲ್ಲಿ ಇರೊದೇ ಅಲ್ವಾ? ಇದ್ದದ್ದನ್ನು ಇದ್ದ ಹಾಗೆ ಹೇಳುವುದರಲ್ಲಿ ತಪ್ಪೇನಿದೆ?' ಎಂದು ನಿಮ್ಮ ಮೇಲೆ ಹರಿಹಾಯುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಸರಿ, ನವರಸಗಳಲ್ಲೇ ಅತ್ಯಂತ ಮೋಹಕವಾದ ಶೃಂಗಾರವನ್ನು ಒಲ್ಲೆನೆಂದವರಾದರೂ ಯಾರು? ಆದರೆ ಈ ಶೃಂಗಾರದ ವರ್ಣನೆ ಕೇಳುವವರ ಮನಸ್ಸಿನಲ್ಲಿ ಆಹ್ಲಾದಮಯವಾದ ಪುಳಕಿತ ಭಾವವೊಂದನ್ನು ಅರಳಿಸಬೇಕೇ ಹೊರತು ಕಾಮವನ್ನು ಹಸಿಹಸಿಯಾಗಿ ಚಿತ್ರಿಸಿ ಅದರ ಬಗ್ಗೆ ಜಿಗುಪ್ಸೆ ಮೂಡಿಸುವಂತೆ ಇರದಿದ್ದರೆ ಸಾಕು!

  ಹಾಗೆ ನೋಡಿದರೆ, ಕನ್ನಡ ಸಿನಿಮಾಗಳಿಗೆ ಶೃಂಗಾರವೆಂಬುದು ಅಪರಿಚಿತವೇನಲ್ಲ ! ಇಲ್ಲಿ ಶೃಂಗಾರ ಭಾವನೆಗಳನ್ನು ಪ್ರಚೋದಿಸುವ ಗೀತೆಗಳು ಹಿಂದಿನಿಂದಲೂ ಇದ್ದೇ ಇವೆ. ಇವುಗಳಲ್ಲಿ ನನ್ನ ಮೆಚ್ಚಿನ ಗೀತೆಯಾದ 'ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ' ಕೂಡ ಒಂದು. ಈ ಗೀತೆಯ ಸಾಹಿತ್ಯಕ್ಕೆ, ಪೂರಕವಾಗಿರುವ ಮಾದಕ ಸಂಗೀತಕ್ಕೆ ಜೊತೆಜೊತೆಯಾಗಿ ಇಂದಿಗೂ ಒಲಿದ ಹೃದಯಗಳು ಮಿಡಿಯುವುದು ಖಚಿತ. ಆದರೆ ಅಲ್ಲಿ ಬಳಕೆಯಾಗಿರುವ ಶಬ್ದಗಳು ಯಾವ ಮುಜುಗರ ಉಂಟುಮಾಡದೆಯೂ, ತಾವು ಹೇಳಬಯಸಿದ್ದನ್ನು ಯಶಸ್ವಿಯಾಗಿ ಹೇಳಿಯೇ ಇವೆ. ಇಂತಹ ಹಾಡುಗಳಿಗೆ ಒಂದು ಉತ್ತಮ ಉದಾಹರಣೆ ಎಂದರೆ 'ಬಬ್ರುವಾಹನ' ಚಿತ್ರದ ಇವತ್ತಿಗೂ ಜನಮಾನಸದಲ್ಲಿ ಹಸಿರಾಗಿ ಉಳಿದಿರುವ ಈ ಹಾಡು -

  'ಮೈದೋರಿ ಮುಂದೆ ಸಹಕರಿಸು
  ಆ ಮಾರ ನೊಗವನೆ ಪರಿಹರಿಸು
  ಪ್ರೇಮಾಮೃತವನು ನೀನುಣಿಸು
  ತನ್ಮಯಗೊಳಿಸು ಮೈಮರೆಸು'

  ಮೇಲುನೋಟಕ್ಕೆ ಅತಿಸಾಮಾನ್ಯವೆನಿಸುವ ಈ ಹಾಡಿನೊಳಗೆ ಮೆಟ್ಟಿಲು ಮೆಟ್ಟಿಲಾಗಿ ಇಳಿಯುತ್ತಾ ಹೋದಂತೆ ನಮಗೆ ಎದುರಾಗುವುದು ಅನಂಗನರಮನೆಯ ಅಂತಃಪುರವೇ! ಇಲ್ಲಿಯ ಶೃಂಗಾರ ಮಾಂದಳಿರಿನ ಚಿಗುರಿನಂತೆಯೇ ನವಿರಾದದ್ದು. ಮೋಹ ತುಂಬಿದ ಮನಸ್ಸಿಗೆ ಮುದವಾಗಿ ಕಚಗುಳಿ ಇಡುವಂತಹದು. ಅದೂ ಕೂಡ ಏನೊಂದನ್ನೂ ಬಾಯಿಬಿಟ್ಟು ಹೇಳದೆಯೇ! ಹಾಗೆಂದು ಇಲ್ಲಿ ಏನನ್ನೂ ಮುಚ್ಚಿಡಲಾಗಿಲ್ಲ , ಮೈದೋರಿದ್ದೇಕೆ ? ಮುಂದೆ ಸಹಕರಿಸಿದ್ದೇನು? ಎಂಬುದು ಕನ್ನಡಕುಲ ರಸಿಕರಿಗೆ ಅರ್ಥವಾಗಲಾರದಂತಹ ಒಗಟೇನಲ್ಲ !

  ರಾಜಕುಮಾರ್‌ ಅಭಿನಯದ 'ಹುಲಿಯ ಹಾಲಿನ ಮೇವು' ಚಿತ್ರದ 'ಆಸೆ ಹೇಳುವಾಸೆ' ಹಾಡಿನಲ್ಲಿಯೂ ಕೂಡ ಹೀಗೆಯೇ. ಶೃಂಗಾರವೆಂಬುದು ಇಲ್ಲಿ ತಂಗಾಳಿಯಾಡನೆ ಬೆರೆತ ಸುಗಂಧದಂತೆ ಹಿತವಾಗಿ ಮೂಗಿಗೆ ಅಡರುತ್ತದೆ. ಇಬ್ಬರು ನಾಯಕಿಯರ ನಡುವೆ ನಾಯಕ ಡಾ.ರಾಜ್‌ಕುಮಾರ್‌ ಕೆಲವೇ ಕ್ಷಣಗಳು ಮಾತ್ರ ಕಾಣಿಸಿಕೊಳ್ಳುವ ಈ ಹಾಡು ಸಲಿಂಗರತಿಯನ್ನು ಪರೋಕ್ಷವಾಗಿ ಸೂಚಿಸುತ್ತಿದೆ ಎಂದು ಆಗ ತನ್ನ ಬಿಚ್ಚುಮನಸ್ಸಿನ ವಿಚಾರಗಳಿಂದ ಎಲ್ಲರ ಅಚ್ಚುಮೆಚ್ಚಾಗಿದ್ದ ಪತ್ರಿಕೆಯಾಂದು ಬರೆದಿದ್ದುಂಟು. ಆದರೆ ನನಗೇನೋ ಎಂದಿಗೂ ಹಾಗೆ ಅನ್ನಿಸಿಲ್ಲ.

  ನೋಟ ತುಟಿಯಲಿ ಅವನಾಟ ನಡುವಲಿ
  ಮಿಂಚು ಮೈಯಲಿ ಹಿತವಾದ ನೋವಲಿ
  ಅವನಾ ಸೇರಿದೆ.....
  ನೀ ಸ್ವರ್ಗವ ತೋರಿದೆ.......

  ಈ ಶೃಂಗಾರಮಯವಾದ ಸಾಲುಗಳ ಹಿಂದೆ ಏನುಂಟು? ಏನು ತಾನೇ ಇಲ್ಲ ? ಆದರೆ ಇಲ್ಲಿ ಈ ಗೀತೆಯ ಒಳ ಆಶಯವೇನು ಎಂಬುದು ಗೋಡೆ ಬರಹದಂತೆ ಮುಖಕ್ಕೆ ಬಂದು ಅಪ್ಪಳಿಸುವುದಿಲ್ಲ . ಅರ್ಥ ಕಂಡುಕೊಂಡವರಿಗುಂಟು. ಕಾಣದವರಿಗಿಲ್ಲ ಅಷ್ಟೇ. ಕಣ್ಣು ಕಂಡಿದ್ದಷ್ಟೇ ಆಕಾಶ! ಸಾಹಿತ್ಯದಲ್ಲಿ- ಅದು ಹಾಡಾಗಿರಲಿ, ಮಾತಾಗಿರಲಿ - ಶೃಂಗಾರವೆಂಬುದು ಹೀಗೆ ಕಂಡೂ ಕಾಣದ ಹಾಗೆ ಕಣ್ಣುಮುಚ್ಚಾಲೆಯಾಡಿದರೆ ಚಂದ! ಇದು ಹೀಗಿರದೆ ಎಲ್ಲವನ್ನೂ ಇದ್ದುದನ್ನು ಇದ್ದ ಹಾಗೆ ವಾಚಾಳಿಯಂತೆ ಹೇಳಿಬಿಟ್ಟಿದ್ದರೆ ಮನೆಯಲ್ಲಿ ಗುರು-ಹಿರಿಯರಿದ್ದಾಗ ರೇಡಿಯೋದಲ್ಲಿ ಈ ಹಾಡು ತೇಲಿ ಬರುತ್ತಿದ್ದರೆ ತಗ್ಗಿಸಿದ ನಮ್ಮ ಕತ್ತನ್ನು ಮೇಲೆತ್ತಲಾದರೂ ಸಾಧ್ಯವಿರುತ್ತಿತ್ತೇ?

  ಕನ್ನಡ ಚಿತ್ರಗೀತೆಗಳಲ್ಲಿ ಶೃಂಗಾರ ಬೆರೆತ ಹಾಡುಗಳನ್ನು ಅರಸುತ್ತಿದ್ದಾಗ ಅಯಾಚಿತವಾಗಿ ನೆನಪಾಗಿದ್ದು ಒಂದು ಜನಪದ ಧಾಟಿಯಲ್ಲಿರುವ ಹಾಡು. ಬಹಳ ಹಳೆಯದಾದ ಇದು ಯಾವ ಚಿತ್ರದ್ದೋ ಗೊತ್ತಿಲ್ಲ. ಈ ಇಡಿಯ ಹಾಡು ಮೊದಲ ನೋಟಕ್ಕೆ ಹೊಮ್ಮಿಸುವುದು ಬರಿಯ ದ್ವಂದ್ವಾರ್ಥವನ್ನು ಮಾತ್ರ!

  ಒಬ್ಬನ್ನ ಹಾಸಿದ್ದೆ
  ಒಬ್ಬನ್ನ ಹೊದ್ದಿದ್ದೆ
  ಒಬ್ಬನ್ನ ಎಳಕೊಂಡು ಮಲಗಿದ್ದೆ ಚೆಲುವಾ.........

  ಒಗಟಿನ ಮಾದರಿಯ ಪ್ರಶ್ನೋತ್ತರ ರೂಪದಲ್ಲಿರುವ ಹಾಡು ಮೇಲಿನ ಸಾಲುಗಳಿಗಂಟಿದ ತನ್ನ ಕಳಂಕವನ್ನು ಮುಂದಿನ ಚರಣದಲ್ಲಿ ಜಾಣತನದಿಂದ ನಿವಾರಿಸಿಕೊಳ್ಳುವುದು ಹೀಗೆ-

  ಹಾಸಿಗೆ ಹಾಸಿದ್ದೆ
  ಹೊದಿಕೇನ ಹೊದ್ದಿದ್ದೆ
  ದಿಂಬನ್ನ ಎಳಕೊಂಡು ಮಲಗಿದ್ದೆ ಚೆಲುವಾ.........

  ಈ ಹಾಡು ಕೇಳುಗರ ತುಟಿಗಳ ಮೇಲೆ ಕಿಲಾಡಿತನದ ನಸುನಗೆಯಾಂದನ್ನು ಅರಳಿಸಬಹುದೇ ಹೊರತು ಮೈಮೇಲೆ ಕೆಸರು ಎರಚಿಸಿಕೊಂಡ ಅಸಹ್ಯಭಾವವನ್ನು ಖಂಡಿತ ಅಲ್ಲ ! ಇದೇ ರೀತಿ 'ಮದನ ಕಾಮರಾಜ ಕೊಟ್ಟ ಒಂದು ವರವ, ನೂರು ಬಾರಿ ಕೊಲ್ಲೋ ಮಾಯಾ ಪುಷ್ಪ ಶರವ' ಎಂಬ ಹಾಡಿನಲ್ಲಿ ಹಂಸಲೇಖ ವಾತ್ಸಾಯನನ ಕಾಮಶಾಸ್ತ್ರವನ್ನೇ ತೆರೆದಿಟ್ಟರೂ ಹಿತಮಿತವಾದ, ಹದತಪ್ಪದ ಕಾವ್ಯಾತ್ಮಕವಾದ ಭಾಷೆಯ ಬಳಕೆ ಇಲ್ಲಿರುವುದರಿಂದ ಅದೂ ಕೂಡ ಸಹ್ಯವಾಗಿಯೇ ಇದೆ. ತೀರಾ ಇತ್ತೀಚೆಗೆ ಬಂದ ಚಿತ್ರ 'ಉತ್ತರ ಧೃವದಿಂ ದಕ್ಷಿಣ ಧೃವಕೂ' ಚಿತ್ರದ ಗೀತೆಯಾಂದರಲ್ಲಿ-

  ಹೇ ಚೋರ, ನನ್ನ ಸೆರಗು ಕಳುವಾಗಿದೆ
  ಸೆರಗೇಕೆ ನನ್ನ ಮೈ ಹೊದಿಕೆ ನಿನ್ನ ಸುತ್ತಿದೆ....

  ಎಂಬಂತಹ ಕ್ರಾಂತಿಕಾರಿ ಸಾಲುಗಳಿದ್ದರೂ ಅದೂ ಕೂಡ ಎಲ್ಲೂ ತನ್ನ ಔಚಿತ್ಯದ ಎಲ್ಲೆಯನ್ನು ದಾಟಿದಂತಿಲ್ಲ. ಆದರೆ ಈಗಿನ ಚಲನಚಿತ್ರ ಸಾಹಿತ್ಯ ಪ್ರತಿಯಾಂದನ್ನೂ ತೆರೆದಿಡುವ ನೆಪದಲ್ಲಿ ತನ್ನ ಈ ಮಿತಿಯನ್ನೂ ಮೀರಿನಿಂತಿದ್ದೇ ಆದರೆ, ಇದಕ್ಕಿಂತ ಇನ್ನೂ ಪಾರದರ್ಶಕವಾಗಲು ಪ್ರಯತ್ನಿಸಿದರೆ ಕಷ್ಟ . ಆಗ ಸುಸಂಸ್ಕೃತ ಮನಸ್ಸಿನ ಸಭ್ಯ ನಾಗರೀಕರು ಚಿತ್ರ ಸಾಹಿತ್ಯವೆಂದರೆ ಬೆಚ್ಚಿ ಬೀಳುವಂತಹ ಪರಿಸ್ಥಿತಿ ಒದಗಬಹುದೇನೋ. ಹಾಗಾಗದಿದ್ದರೆ ಒಳಿತು!

  ಆಧುನಿಕ ಬದುಕು ಎಲ್ಲಾ ಅರ್ಥಹೀನ ಮಡಿವಂತಿಕೆಗಳನ್ನು ಕಳೆದುಕೊಂಡು ಸರಳತೆಯತ್ತ ವಾಲುತ್ತಿರುವುದು ಸಂತಸದ ಸಂಗತಿಯಾದರೂ, ಎಲ್ಲವನ್ನೂ ಬಟಾಬಯಲಾಗಿಸಬೇಕೆಂಬುದು ಅದರ ಅರ್ಥವೇ?

  ನಮ್ಮ ಕನ್ನಡದ ಕವಿಯಾಬ್ಬರು ಬರೆದಿರುವಂತೆ - ಮುಚ್ಚಿರಬೇಕು ಕೆಲವನ್ನು, ಬಿಚ್ಚಲಿಕ್ಕಾದರೂ! - ಇದು ಕಟುವೆನಿಸಿದರೂ ಅದೆಷ್ಟು ಸತ್ಯ!!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X