»   » ಕರ ಕಾಟ : ಪ್ರತಿಭಟನೆಗೆ ಪಾರ್ವತಮ್ಮ ರೆಡಿ

ಕರ ಕಾಟ : ಪ್ರತಿಭಟನೆಗೆ ಪಾರ್ವತಮ್ಮ ರೆಡಿ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಏಪ್ರಿಲ್‌ 1ರಿಂದ 2.50 ಕೋಟಿ ರುಪಾಯಿ ತೆರಿಗೆಯನ್ನು ಚಿತ್ರ ನಿರ್ಮಾಪಕರು ಮತ್ತು ಚಿತ್ರಮಂದಿರಗಳಿಂದ ವಸೂಲು ಮಾಡಿದ ನಂತರ ಟಿಕೇಟೊಂದಕ್ಕೆ 1 ರುಪಾಯಿ ಸರ್‌ಚಾರ್ಜನ್ನು ಕನ್ನಡ ಚಿತ್ರಗಳಿಗೆ ವಿಧಿಸುತ್ತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಆದೇಶವನ್ನು ಸುತ್ತೋಲೆ ಮೂಲಕ ಸರ್ಕಾರ ಹೊರಡಿಸಿದ್ದರೂ, ವಾಣಿಜ್ಯ ತೆರಿಗೆ ಇಲಾಖೆ ಸರ್‌ಚಾರ್ಜನ್ನು ಸಂಗ್ರಹಿಸುತ್ತಲೇ ಇದ್ದಾರೆ. ಚಿತ್ರಮಂದಿರದ ಮಾಲೀಕರು ಮತ್ತು ನಿರ್ಮಾಪಕರು ಇದರಿಂದ ರೋಸಿ ಹೋಗಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಥಾಮಸ್‌ ಡಿಸೋಜ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕನ್ನಡ ಚಿತ್ರಗಳ ಟಿಕೇಟುಗಳಿಗೆ ಸರ್‌ಚಾರ್ಜ್‌ ಹಾಕುವುದಿಲ್ಲ ಅಂತ ಸರ್ಕಾರವೇ ಹೇಳಿದೆ. ಕನ್ನಡೇತರ ಚಿತ್ರಗಳಿಗೆ ಸರ್‌ಚಾರ್ಜ್‌ ಕಡ್ಡಾಯ. ಆದರೆ, ವಾಣಿಜ್ಯ ತೆರಿಗೆ ಇಲಾಖೆಯವರು ಚಿತ್ರಮಂದಿರದವರಿಗೆ ಬಾಕಿ ಸರ್‌ಚಾರ್ಜ್‌ ಕಟ್ಟಲು ನೋಟೀಸುಗಳನ್ನು ಕಳಿಸುತ್ತಿದ್ದಾರೆ. ಸಾಲದ್ದಕ್ಕೆ ಈಗಾಗಲೇ ವಸೂಲು ಮಾಡಿರುವ ಸರ್‌ಚಾರ್ಜನ್ನು ಇಲಾಖೆಯಿಂದ ವಾಪಸ್ಸು ಪಡೆಯುವುದು ಹೇಗೆ ಅನ್ನುವುದು ಚಿತ್ರಮಂದಿರದ ಮಾಲೀಕರ ಅಳಲು.

ಈ ಅಳಲು ಈಗ ಪ್ರತಿಭಟನೆಯ ರೂಪವಾಗಿ ಪಡೆಯುತ್ತಿದೆ. ಎಲ್ಲಾ ಕನ್ನಡ ಚಿತ್ರಗಳಿಗೆ ಸಬ್ಸಿಡಿ ಕೊಡುವುದರ ಜೊತೆಗೆ ಸಿಕ್ಕಾಪಟ್ಟೆಯಾಗಿರುವ ತೆರಿಗೆಯನ್ನು ರದ್ದು ಮಾಡಬೇಕೆಂದು ನಿರ್ಮಾಪಕರು ರಚ್ಚೆ ಹಿಡಿದಿದ್ದಾರೆ. ಸದ್ಯದಲ್ಲೇ ಪ್ರತಿಭಟನೆ ನಡೆಸುವ ಯೋಚನೆಯನ್ನೂ ನಿರ್ಮಾಪಕರು ಮಾಡುತ್ತಿದ್ದು, ಪಾರ್ವತಮ್ಮ ರಾಜ್‌ಕುಮಾರ್‌ ಕೂಡ ಪ್ರತಿಭಟನೆಗೆ ಬೆಂಬಲ ಕೊಡುವುದಾಗಿ ಮಾತು ಕೊಟ್ಟಿದ್ದಾರೆ ಎಂದು ನಿರ್ಮಾಪಕ ಜೋಸೈಮನ್‌ ಹೇಳಿದರು.

ರಮೇಶ್‌ ವಿರುದ್ಧ ಬಂಡಾಯ : ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ರಮೇಶ್‌, ಚುನಾವಣೆಯ ಸಮಯದಲ್ಲಿ ಕೊಟ್ಟಿದ್ದ ಭರವಸೆಗಳನ್ನು ಗಾಳಿಗೆ ತೂರಿದ್ದಾರೆ. ಸಾಲದ್ದಕ್ಕೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ನಿರ್ಮಾಪಕರು ಮಂಗಳವಾರ (ಜೂನ್‌ 10) ವರನಟ ರಾಜ್‌ಕುಮಾರ್‌ ಅವರ ಮನೆಯಲ್ಲಿ ಸಭೆ ಸೇರಿ, ಅಸಮಾಧಾನ ವ್ಯಕ್ತಪಡಿಸಿದರು. ಅವರ ಕಾರ್ಯ ವೈಖರಿಯನ್ನು ಪ್ರಶ್ನಿಸಬೇಕೆಂದು ಸಭೆ ಒಮ್ಮತದ ನಿರ್ಣಯ ಕೈಗೊಂಡಿತು.

ಎಲ್ಲಾ ತೊಂದರೆಗಳನ್ನು ಕೇಳಿದ ಪಾರ್ವತಮ್ಮ ರಾಜ್‌ಕುಮಾರ್‌, ಜೂನ್‌ 20ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಒಕ್ಕೂಟದ ಸಭೆಯನ್ನು ಕರೆದರು. ಆ ಸಭೆಗೆ ರಮೇಶ್‌ ಅವರನ್ನೂ ಕರೆದಿದ್ದು, ಖಾರದ ಚರ್ಚೆ ನಡೆಯುವ ನಿರೀಕ್ಷೆಯಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada