»   » ಕಿರುತೆರೆ ಸಾಮ್ರಾಟ ಟಿ.ಎನ್‌.ಎಸ್‌.ಜೊತೆ ಮಾತು-ಕತೆ

ಕಿರುತೆರೆ ಸಾಮ್ರಾಟ ಟಿ.ಎನ್‌.ಎಸ್‌.ಜೊತೆ ಮಾತು-ಕತೆ

Subscribe to Filmibeat Kannada


ಬೆಳ್ಳಿತೆರೆಯಲ್ಲಿ ‘ಮೀರಾ ಮಾಧವ ರಾಘವ’ರ ಲೀಲಾವಿಲಾಸ ಚಿತ್ರಿಸಲು ಟಿ.ಎನ್‌.ಎಸ್‌ ಒದ್ದಾಡುತ್ತಿದ್ದಾರೆ. ಹೀಗಾಗಿ ಕಿರುತೆರೆಯಲ್ಲಿ ಅವರ ‘ಮಿಂಚು’ ಹೊಳಪು ಕಳೆದುಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ಸೀತಾರಾಂಗೆ ಐದು ಪ್ರಶ್ನೆಗಳು.

  • ಕಟ್ಟೆ ಗುರುರಾಜ್‌
1. ನಾಟಕಕಾರ ಟಿಎನ್‌ಎಸ್‌ ಕಳೆದು ಹೋಗಿದ್ದಾರಲ್ಲಾ?

ಧಾರಾವಾಹಿಗಳ ಸಮುದ್ರದಲ್ಲಿ ಕಳೆದು ಹೋಗಿದ್ದೇನೆ. ಆದರೆ ನನ್ನೊಳಗಿರುವ ನಾಟಕಕಾರ ಹಾಗೇ ಇದ್ದಾನೆ. ಅವನು ಹೊರಗೆ ಕಾಣಿಸ್ತಿಲ್ಲ ಅಷ್ಟೆ. ಎರಡು ನಾಟಕ ಬರಿಯೋ ಅಷ್ಟು ಸರಕು ಇದೆ. ಸಮಯ ಸಿಕ್ಕಾಗ ಗ್ಯಾರಂಟಿ ಬರಿತೀನಿ.

2. ಕಿರುತೆರೆಯನ್ನು ಅಗಲ ಮಾಡಿದ್ದು ಹೇಗೆ?

ಶ್ರದ್ದೆ ಹಾಗೂ ನಮಗೆ ಯಾವ ಪ್ರೇಕ್ಷಕ ಬೇಕು ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಿದ್ದು. ನಾನು ಮಧ್ಯಮ ವರ್ಗದವನಾದ್ದರಿಂದ ಆ ಜೀವನವೇ ಕಥಾವಸ್ತು. ಇಲ್ಲಿ ಕಥೆ ವಾಸ್ತವ. ಆದರ್ಶ ಭ್ರಾಮಕವಾಗಿದ್ದುದರಿಂದಲೇ ಇಂತಹ ‘ಮನ್ವಂತರ’ ಸಾಧ್ಯವಾಗಿದ್ದು.

3. ಕಥೆ ಎಳೆಯುವುದು ಸರೀನಾ ?

ಅದರದೂ ಒಂದು ಕತೆ. ಧಾರಾವಾಹಿ 200ಕಂತು ಪೂರೈಸುವ ಹೊತ್ತಿಗೆ ಜನ ಗುರುತಿಸುತ್ತಾರೆ. 300ಕಂತು ಆಗುವ ಹೊತ್ತಿಗೆ ಅದಕ್ಕೆ ಅಂಟಿಕೊಂಡಿರುತ್ತಾರೆ. 350 ದಾಟುವ ಹೊತ್ತಿಗೆ ಭದ್ರವಾಗಿ ನೆಲೆ ಊರಿರುತ್ತಾರೆ. ಆಗಲೇ ಚಾನೆಲ್‌ಗಳಿಗೆ ಹಣ ಬರುವುದು. 200ಕಂತಿಗೆ ತಯಾರಾದ ಕತೆಯನ್ನು 600 ಕಂತಿಗೆ ಕೊಂಡೊಯ್ಯಬೇಕಾಗಿರುವುದರಿಂದ ಈ ಹಗ್ಗಾಜಗ್ಗಾಟ ಅನಿವಾರ್ಯ.

4. ಭೈರಪ್ಪನವರಂತೆ ನೀವು ಬಹಳ ರೀಸರ್ಚ್‌ ಮಾಡ್ತಿರಲ್ಲಾ?

ಭಾವನಾ ಪ್ರಧಾನವಾಗಿದ್ದರೆ ರೀಸರ್ಚ್‌ಬೇಕಿಲ್ಲ. ಆದರೆ ನನ್ನ ಕಥೆಯಲ್ಲಿ ಫಿಸಿಕ್ಸ್‌, ಕೆಮಿಸ್ಟ್ರಿಗೆ ಸಂಬಂಧಿಸಿದ ಪಾತ್ರಗಳು ಇವೆ. ಇವಕ್ಕೆಲ್ಲಾ ಸಂಶೋಧನೆ ಬೇಕೇಬೇಕು. ರೈಲು ಬಿಡಕ್ಕಾಗೊಲ್ಲ.

5. ಹಿರಿತೆರೆ, ಕಿರಿತೆರೆ, ನಾಟಕ ಈ ಮೂರು ತರದ ಸೀತಾರಾಮರಲ್ಲಿ ನಿಮಗೆ ಇಷ್ಟವಾದವರು?

ನಾಟಕ ನನಗೆ ಪ್ರಿಯ. ಕಿರುತೆರೆ ಆರ್ಥಿಕ ತೃಪ್ತಿ,ನೆಮ್ಮದಿ ಕೊಟ್ಟಿದೆ. ಹಿರಿತೆರೆ ಸವಾಲಾಗಿ ನನಗೆ ತೃಪ್ತಿ ಕೊಟ್ಟಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada