»   » ಒದ್ದಾಡಿ ಒಂದು ಸಿನಿಮಾ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ

ಒದ್ದಾಡಿ ಒಂದು ಸಿನಿಮಾ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ

Posted By: Staff
Subscribe to Filmibeat Kannada

ಲಗಾನ್‌ ಸಿನಿಮಾದಲ್ಲಿ ಅಮೀರ್‌ ಜೊತೆ ಹಳ್ಳಿ ಹುಡುಗಿಯಾಗಿ ಮೆರೆದ ಗ್ರೇಸಿ ಸಿಂಗ್‌ ಏನಾದಳು?
ಟಾಲಿವುಡ್‌ಗೆ ಹೋಗಿ, ಎರಡು ಸಿನಿಮಾದಲ್ಲಿ ನಟಿಸಿ, ಎಕ್ಕಾ ಮಕ್ಕಾ ಜರೆಸಿಕೊಂಡು ಈಗ ಹಳೆ ಗಂಡನ ಪಾದವೇ ಗತಿ ಎಂಬಂತೆ ಬಾಲಿವುಡ್‌ಗೆ ಮರಳಿದ್ದಾಳೆ. ಆದರೂ ಅವಕಾಶಗಳೇನೂ ಒದ್ದುಕೊಂಡು ಬರುತ್ತಿಲ್ಲ.

'ಕುಚ್‌ ಕುಚ್‌ ಹೋತಾ ಹೈ" ರೀಮೇಕು 'ಸಂತೋಷಂ" ಎಂಬುದು ಗ್ರೇಸಿಯ ಮೊದಲ ತೆಲುಗು ಚಿತ್ರ. ಸಿನಿಮಾ ಸುಮಾರಾಗಿ ಓಡಿದರೂ ಗ್ರೇಸಿಯನ್ನು ಜನ ಮೆಚ್ಚಲಿಲ್ಲ. 'ತಪ್ಪು ಚೇಸಿ ಪಪ್ಪು ಕೂಡು "ಎಂಬುದು ಎರಡನೇ ಚಿತ್ರ. ಈ ಚಿತ್ರದಲ್ಲಿ ನಟಿಸುವ ಹೊತ್ತಿಗೆ ಗ್ರೇಸಿ ಎರಡು ರೌಂಡ್‌ ಊದಿಕೊಂಡಿದ್ದಳು. ಆ ಕಾರಣಕ್ಕೇ ದುಂಡು ದುಂಡು ಗ್ರೇಸಿಯನ್ನು ಜನ ಗುರುತಿಸಲೇ ಇಲ್ಲ. ಸಿನಿಮಾ ಕೂಡ ಮಕಾಡೆಯಾಯಿತು. 'ಲಗಾನ್‌"ನಲ್ಲಿ ಮಾಡಿದ್ದು ಇವಳಾ ಅಂತ ವಿಚಿತ್ರವಾಗಿ ಪ್ರಶ್ನಿಸಿದರು.

ಇದು ಸ್ವಯಂಕೃತ ಅಪರಾಧವಾ?

ಇಷ್ಟಾಗುವ ಹೊತ್ತಿಗೆ ತೆಲುಗು ನಿರ್ಮಾಪಕರು ಎಚ್ಚೆತ್ತುಕೊಂಡರು. ನಿನ್ನ ಸಹವಾಸ ಸಾಕಮ್ಮಾ ಅಂತ ಮುಂಬಯಿಗೆ ಬೀಳ್ಕೊಟ್ಟರು. ಲಗಾನ್‌ ಯಶಸ್ಸಿನ ಅಲೆಯಲ್ಲಿ ಅಮೀರ್‌ ಹಾಗೂ ಆಶುತೋಷ್‌ ಗೌರೀಕರ್‌ ಆಸ್ಕರ್‌ ಮನೆಯನ್ನು ಮುಟ್ಟಿ ಬಂದರೂ, ಅಲ್ಲೆಲ್ಲೂ ಗ್ರೇಸಿ ಇಣುಕಲಿಲ್ಲ. ಲಗಾನಿನ ಯಶಸ್ಸಿನ ಯಾವುದೇ ಸಮಾರಂಭದಲ್ಲೂ ಗ್ರೇಸಿ ಕಾಣಿಸಲಿಲ್ಲ. ಇದಕ್ಕೆ ಕಾರಣ ಏನಿರಬಹುದು?

ನಾಯಕಿಯರಿಗೆ ಇದು ಕಾಲವಲ್ಲಾ ಸ್ವಾಮಿ ಅಂತ ಕೆಲವರು ಗ್ರೇಸಿ ಬಗ್ಗೆ ಕನಿಕರದ ಮಾತುಗಳನ್ನಾಡಿದರು. ಈಕೆ ಪಾತ್ರಗಳ ಆಯ್ಕೆಯಲ್ಲಿ ತೀರಾ ಚೂಸಿ ಅಂತ ಇನ್ನು ಕೆಲವರು ಕೊಂಡಾಡಿದರು. ಆದರೆ ವಾಸ್ತವ ಅದಲ್ಲ. ಈಕೆಯ ಉಪಟಳ ಅನುಭವಿಸಿದ ತೆಲುಗು ನಿರ್ಮಾಪಕರು ಹೇಳುವಂತೆ- ಗ್ರೇಸಿಗೆ ಗಾಂಚಲಿ ಜಾಸ್ತಿ. ಲಗಾನ್‌ ಗೆದ್ದಿದ್ದೇ ತಡ, ಅದರಲ್ಲಿ ತನ್ನದೇ ದೊಡ್ಡ ಹವಿಸ್ಸು ಎಂಬಂತೆ ಈಕೆ ತನ್ನ ಸಂಭಾವನೆಯನ್ನು 20 ಲಕ್ಷ ರುಪಾಯಿಗೆ ಏರಿಸಿಕೊಂಡಳು. ಅದಕ್ಕೆ ತಕ್ಕ ಹಾಗೆ ನಟಿಸಿ ಸೈ ಎನಿಸಿಕೊಳ್ಳುವುದರಲ್ಲಿ ಸೋತಳು. ಪಾತ್ರಗಳಲ್ಲಿ ಚೂಸಿ ಆಗಿದ್ದರೆ, ಕುಚ್‌ ಕುಚ್‌ ಹೋತಾ ಹೈ ರೀಮೇಕಿನಲ್ಲಿ ಯಾಕೆ ನಟಿಸುತ್ತಿದ್ದಳು ಹೇಳಿ ಎಂಬುದು ತೆಲುಗು ನಿರ್ಮಾಪಕರೊಬ್ಬರ ಪ್ರಶ್ನೆ.

ಮಂಗಳಾರತಿ ಮಾಡಿಸಿಕೊಂಡು ಮುಂಬಯಿಗೆ ಮರಳಿದ ಗ್ರೇಸಿ ಕೆಲವು ದಿನ ಕೆಲಸವಿಲ್ಲದೆ ಕೂರಬೇಕಾಯಿತು. ಯಾರ್ಯಾರದೋ ಕಾಲು ಕಟ್ಟಿದ್ದಕ್ಕೆ ಪ್ರಕಾಶ್‌ ಝಾ ಸಿನಿಮಾದ ನಟನೆಯ ಅವಕಾಶ ಇದೀಗ ಸಿಕ್ಕಿದೆ. ಇದಕ್ಕೂ ಮುಂಚೆ ಗ್ರೇಸಿ ತನ್ನ ಸಂಭಾವನೆಯನ್ನೂ ಸಾಕಷ್ಟು ತಗ್ಗಿಸಿದ್ದಾಳಂತೆ.

English summary
What Gracy Singh is doing?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada