»   » ‘ಜ್ಯೂಲಿ’ಯಾಗಿ ರಮ್ಯ ಮೇಡಂ!

‘ಜ್ಯೂಲಿ’ಯಾಗಿ ರಮ್ಯ ಮೇಡಂ!

Posted By:
Subscribe to Filmibeat Kannada

‘ರಮ್ಯ’ ಕಾಲ ಆರಂಭಗೊಂಡಿದೆ. ‘ಆಕಾಶ್‌’, ‘ಗೌರಮ್ಮ’ ಮತ್ತು ‘ಅಮೃತಧಾರೆ’ ಚಿತ್ರಗಳ ಯಶಸ್ಸಿನಿಂದ ಹ್ಯಾಟ್ರಿಕ್‌ನಟಿ ಎಂದೇ ಖ್ಯಾತರಾಗಿರುವ ರಮ್ಯ, ಈಗ ‘ಜ್ಯೂಲಿ’ಯಾಗಿದ್ದಾರೆ!

ಮೂವತ್ತು ವರ್ಷಗಳ ಹಿಂದಿನ ಮಲಯಾಳಂನ ‘ಚಟ್ಟಕ್ಕಾರಿ’ ಚಿತ್ರದ ಯಶಸ್ಸಿನ ಕಥೆ ಎಲ್ಲರಿಗೂ ನೆನಪಿದೆ. ಅದರ ಹಿಂದಿ ರಿಮೇಕ್‌ ‘ಜ್ಯೂಲಿ’ ಚಿತ್ರ ಸಹ ಅಭೂತಪೂರ್ವ ಯಶಸ್ಸನ್ನು ಕಂಡಿತ್ತು. ಇದರಿಂದ ಉತ್ತೇಜಿತರಾಗಿರುವ ಕೆ.ಸಿ.ಎನ್‌.ಮೋಹನ್‌, ‘ಜ್ಯೂಲಿ’ಯನ್ನು ಕನ್ನಡಕ್ಕೆ ಕರೆತಂದಿದ್ದಾರೆ.

ಈ ಚಿತ್ರದ ಮಲಯಾಳಂ ಮತ್ತು ಹಿಂದಿ ಎರಡೂ ಅವತರಣಿಕೆಗಳಲ್ಲಿ ಪಂಚಭಾಷಾ ತಾರೆ ಲಕ್ಷ್ಮೀ ನಾಯಕಿಯಾಗಿ ಅಭಿನಯಿಸಿದ್ದರು. ಮೂಲ ಚಿತ್ರಗಳಂತೆ ಈ ಚಿತ್ರದಲ್ಲೂ ಎರಡು ಹಾಡುಗಳ ಟ್ಯೂನ್‌ ಹಾಗೆಯೇ ಉಳಿಯಲಿದೆ. ಚಿತ್ರವು ಆಂಗ್ಲೋ ಇಂಡಿಯನ್‌ ಶೈಲಿಯನ್ನು ಬಿಂಬಿಸಲಿದೆ. ಅಲ್ಲದೆ ಹಿಂದಿ ಅವತರಣಿಕೆಯಲ್ಲಿ ಜನಪ್ರಿಯವಾದ ಭೂಲ್‌ಗಯಾ ಸಬ್‌ ಕುಚ್‌... ಮತ್ತು ದಿಲ್‌ ಕ್ಯಾ ಕರೇ... ಎಂಬ ಹಾಡುಗಳು ಕನ್ನಡಕ್ಕೂ ಬಂದು, ಇಲ್ಲಿಯೂ ಮೋಡಿ ಮಾಡಲಿವೆ.

ದೂರದರ್ಶನದಲ್ಲಿ ‘ಅಮೆರಿಕಾದಲ್ಲಿ ಗೊರೂರು’ ಧಾರಾವಾಹಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸಮಾಡಿದ್ದ ಮೋಹನ್‌ ಅವರ ಪತ್ನಿ, ಪೂರ್ಣಿಮಾ ಮೋಹನ್‌ ಈ ಚಿತ್ರದ ನಿರ್ದೇಶಕಿ.

ಕಾರವಾರದಲ್ಲಿ ಚಿತ್ರೀಕರಣ ಶುಕ್ರವಾರ(ನ.11)ದಿಂದ ಆರಂಭಗೊಂಡಿದ್ದು, ಚಿತ್ರ ಜನವರಿಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ರಾಜೇಶ್‌ ಗೌಡ ಸಂಗೀತ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಬೆಂಗಳೂರಿನಲ್ಲಿ ಜನಿಸಿ ಮುಂಬಯಿಯಲ್ಲಿ ನೆಲೆಸಿರುವ ಡೀನೋ ಮೋರಿಯಾ(ಮುಂಬೈ ಕನ್ನಡಿಗ) ಚಿತ್ರದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬಾಲಿವುಡ್‌ನಲ್ಲಿ ಕೈತುಂಬಾ ಅವಕಾಶ ಹೊಂದಿರುವ ಅವರು, ರಾಸ್‌ ಚಿತ್ರದ ಮೂಲಕ ದೇಶಾದ್ಯಂತ ಮನೆಮಾತಾದ ನಟ. ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ನಂತರವೇ ಬಿಪಾಶಾ ಬಸು ಕೂಡ ಜನಪ್ರಿಯ ತಾರೆಯಾಗಿ ಹೊಮ್ಮಿದ್ದು ಗಮನಾರ್ಹ ಸಂಗತಿ. ಆಶಾಲತಾ, ಚಿತ್ರ ಶೆಣೈ ಮತ್ತಿತರರು ತಾರಾಗಣದಲ್ಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada