»   » ಶಿಫಾರಸು ಮಾಡಲಾಗಿರುವ ಇತರರು- ಶ್ರೇಷ್ಠ ನಟ ವಿಷ್ಣುವರ್ಧನ್‌, ಶ್ರೇಷ್ಠ ನಟಿ ಪ್ರೇಮಾ, ಛಾಯಾಗ್ರಹಣ ಜಿ.ಎಸ್‌.ವಿ.ಸೀತಾರಾಂ, ಸಂಕಲನ ಶ್ಯಾಮ್‌, ಕತೆ/ಚಿತ್ರಕತೆ ರಮಣಿ, ಸಂಗೀತ ನಿರ್ದೇಶಕ ಹಂಸಲೇಖ.

ಶಿಫಾರಸು ಮಾಡಲಾಗಿರುವ ಇತರರು- ಶ್ರೇಷ್ಠ ನಟ ವಿಷ್ಣುವರ್ಧನ್‌, ಶ್ರೇಷ್ಠ ನಟಿ ಪ್ರೇಮಾ, ಛಾಯಾಗ್ರಹಣ ಜಿ.ಎಸ್‌.ವಿ.ಸೀತಾರಾಂ, ಸಂಕಲನ ಶ್ಯಾಮ್‌, ಕತೆ/ಚಿತ್ರಕತೆ ರಮಣಿ, ಸಂಗೀತ ನಿರ್ದೇಶಕ ಹಂಸಲೇಖ.

Posted By:
Subscribe to Filmibeat Kannada

‘ಏಕಾಂಗಿ’ ಚಿತ್ರದ ಶ್ರೇಷ್ಠ ನಿರ್ದೇಶನಕ್ಕಾಗಿ ವಿ.ರವಿಚಂದ್ರನ್‌, ‘ಪರ್ವ’ ಚಿತ್ರದ ನಟನೆಗಾಗಿ ವಿಷ್ಣುವರ್ಧನ್‌ ಮತ್ತು ಸೈನಿಕ ಚಿತ್ರದ ನಿರ್ಮಾಣಕ್ಕಾಗಿ ಸಿ.ಪಿ.ಯೋಗೇಶ್ವರ್‌ ಸಹಿತ ಕೆಲವು ನಟ-ನಟಿ ಮತ್ತು ತಂತ್ರಜ್ಞರನ್ನು ರಾಜ್‌ಕಮಲ್‌ ಅಕಾಡೆಮಿ ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಖ್ಯಾತ ನಿರ್ದೇಶಕ ಶಾಂತಾರಾಂ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿ ಸ್ವರೂಪ ಬದಲಾಗಿದ್ದು, ಹೆಸರನ್ನೂ ಬದಲಾಯಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಶಾಂತಾರಾಂ ಮೊಮ್ಮಗ ರಾಹುಲ್‌ ಶಾಂತಾರಾಂ ಸೇಂಟ್‌ಮಾರ್ಕ್ಸ್‌ ಹೋಟೆಲ್ಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೊದಲು ಪ್ರಾದೇಶಿಕ ಮಟ್ಟದಲ್ಲಿ ಚಲನಚಿತ್ರಗಳನ್ನು ಆಯ್ಕೆ ಮಾಡಿ ನಂತರ ಅವುಗಳನ್ನು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ಈ ಬಾರಿ ಕನ್ನಡದ ಎಂಟು ಚಿತ್ರಗಳನ್ನು ಪರಿಶೀಲಿಸಿ ಅದರಲ್ಲಿ ನಾನಾ ವಿಭಾಗಗಳಿಗೆ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಲಾಗಿದೆ. ಅತ್ಯುತ್ತಮ ನಿರ್ದೇಶಕ ರವಿಚಂದ್ರನ್‌ (ಏಕಾಂಗಿ), ಅತ್ಯುತ್ತಮ ನಿರ್ಮಾಪಕ ಸಿ.ಪಿ.ಯೋಗೇಶ್ವರ್‌ (ಸೈನಿಕ), ಶ್ರೇಷ್ಠ ನಟ ವಿಷ್ಣುವರ್ಧನ್‌ (ಪರ್ವ), ಶ್ರೇಷ್ಠ ನಟಿ ಪ್ರೇಮಾ (ಪರ್ವ), ಛಾಯಾಗ್ರಹಣ ಜಿ.ಎಸ್‌.ವಿ.ಸೀತಾರಾಂ (ಏಕಾಂಗಿ), ಸಂಕಲನ ಶ್ಯಾಮ್‌ (ಏಕಾಂಗಿ), ಕತೆ/ಚಿತ್ರಕತೆ ರಮಣಿ (ಕೋತಿಗಳು ಸಾರ್‌ ಕೋತಿಗಳು), ಸಂಗೀತ ನಿರ್ದೇಶಕ ಹಂಸಲೇಖ (ಪರ್ವ) ಮತ್ತು ಪ್ರಥಮ ಬಾರಿ ಚಿತ್ರರಂಗ ಪ್ರವೇಶಿಸಿದವರಿಗಾಗಿ ಹಲವು ವಿಭಾಗಗಳಿಂದ ಶಿಫಾರಸು ಮಾಡಲಾಗಿದೆ. ಅದರಲ್ಲಿ ತುಂಟಾಟ ಚಿತ್ರದ ನಿರ್ದೇಶಕ ಪಿ.ಎಲ್‌.ಇಂದ್ರಜಿತ್‌, ಅಪ್ಪು ಚಿತ್ರದ ನಾಯಕ ಪುನೀತ್‌ ರಾಜ್‌ಕುಮಾರ್‌ ಸಹ ಸೇರಿದ್ದಾರೆ.

ಯಾವುದೇ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ಚಿನ್ನ, ದ್ವಿತೀಯ ಸ್ಥಾನಕ್ಕೆ ಬೆಳ್ಳಿ ಮತ್ತು ತೃತೀಯ ಸ್ಥಾನಕ್ಕೆ ಕಂಚಿನ ಪ್ರತಿಮೆ ನೀಡಲಾಗುತ್ತದೆ. ಹಾಗೆಯೇ ಕ್ರಮವಾಗಿ ಒಂದು ಲಕ್ಷ, ಐವತ್ತು ಸಾವಿರ ಮತ್ತು ನಲವತ್ತು ಸಾವಿರ ರು. ನಗದು ನೀಡಲಾಗುತ್ತದೆಂದು ಸಂಸ್ಥೆಯ ಗವರ್ನರ್‌ ಕೆ.ಎಸ್‌.ಎಲ್‌.ಸ್ವಾಮಿ ತಿಳಿಸಿದರು.

ನವೆಂಬರ್‌ 18ರಂದು ಪ್ರಶಸ್ತಿ ಘೋಷಿಸಲಾಗುತ್ತದೆ. ಡಿಸೆಂಬರ್‌ 31ರಂದು ಮುಂಬಯಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುವುದು ಎಂದು ಸ್ವಾಮಿ ಹೇಳಿದರು.

ಪ್ರಶಸ್ತಿಯ ನಿಯಮ : ಯಾವುದೇ ಭಾ,ಎಯ ಚಿತ್ರವಾದರೂ ಅದು ಆಯಾ ಭಾಷೆಯಲ್ಲಿ ತೆರೆ ಕಂಡು ಒಂದು ವಾರ ಪ್ರದರ್ಶನವಾಗಿರಬೇಕು. ನಟ- ನಟಿ ಮತ್ತು ತಂತ್ರಜ್ಞರ ವಿಭಾಗದಲ್ಲಿ ರೀಮೇಕ್‌ ಚಿತ್ರಗಳೂ ಭಾಗವಹಿಸಬಹುದು. ನಿರ್ಮಾಣವಾದ ನಾಲ್ಕು ವರ್ಷಗಳ ನಂತರ ಒಂದು ಚಿತ್ರ ತೆರೆ ಕಂಡರೆ ಆ ವರ್ಷವೇ ಅದನ್ನು ಪ್ರಶಸ್ತಿಗಾಗಿ ಕಳಿಸಬಹುದೆಂದು ಅವರು ತಿಳಿಸಿದರು.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada