»   » ಉಪೇಂದ್ರ ಮದುವೆಯಾಗುತ್ತಿದ್ದಾರೆ !?

ಉಪೇಂದ್ರ ಮದುವೆಯಾಗುತ್ತಿದ್ದಾರೆ !?

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಇದೇ ಭಾನುವಾರ, ಡಿಸೆಂಬರ್‌ 14ಕ್ಕೆ ಉಪೇಂದ್ರ ಮದುವೆ !
ಸಿನಿಮಾಗಳಲ್ಲಿ ಮಾತ್ರ ‘ಬಿಸ್ಕತ್‌’ ಹಾಕುತ್ತಾ, ‘ಊರಿಗೇ ಯಾಮಾರಿಸೋ ನನ್ಮಗ’ ಅಂತ ತಮ್ಮನ್ನು ತಾವೇ ಸಂಬೋಧಿಸಿಕೊಳ್ಳುತ್ತಿದ್ದ ಉಪ್ಪಿ ಈ ವಿಷಯದಲ್ಲೂ ಭಾರೀ ಡಿಫರೆಂಟಾಗಿ ವರ್ತಿಸಿದ್ದಾರೆ. ಉಪೇಂದ್ರ ಮದುವೆಯೂ ಇವತ್ತು ಒಂದು ಜಿಜ್ಞಾಸೆಯಾಗಿಹೋಗಿದೆ.

ಗುರುವಾರ (ಡಿ.11) ಸಿನಿಮಾ ಪತ್ರಕರ್ತ ಗಣೇಶ್‌ ಕಾಸರಗೋಡು ಬರೆದಿರುವ ‘ಚದುರಿದ ಚಿತ್ರಗಳು’ ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳ ಪೈಕಿ ಉಪ್ಪಿ ಕೂಡ ಒಬ್ಬರಾಗಿದ್ದರು. ಪಕ್ಕದಲ್ಲೇ ಇದ್ದ ರವಿ ಬೆಳಗೆರೆ, ಡೈಲಿ ಟೆಲಿಗ್ರಾಫ್‌ ಪತ್ರಿಕೆಯಲ್ಲಿ ಬಂದಿದ್ದ ಉಪ್ಪಿ ಮದುವೆಯ ವಿಷಯ ಪ್ರಸ್ತಾಪಿಸಿ, ಇವರ ನಗುಮುಖ ನೋಡಿದರೆ ಇದು ಗಾಸಿಪ್ಪು ಅನ್ನಿಸುತ್ತದೆ ಅಂತ ನಕ್ಕರು. ಅಲ್ಲೇ ನಿಂತಿದ್ದ ಉಪ್ಪಿ ಮದುವೆಯ ವಿಷಯ ಸುಳ್ಳು ಅಂತಲೂ ಹೇಳಲಿಲ್ಲ, ನಿಜ ಅಂತಲೂ ಒಪ್ಪಿಕೊಳ್ಳಲಿಲ್ಲ. ಮಾಧ್ಯಮದವರ ಕೈಗೂ ಅವರು ಸಿಗಲಿಲ್ಲ !

ಇದೇ ದಿನ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಮದುವೆ ನಡೆಯಿತು. ಅಲ್ಲಿ ಅಣ್ಣಾವ್ರು ಸೇರಿದಂತೆ ಅನೇಕ ತಾರಾ ಬಳಗ ಧಾರೆ ಮುಹೂರ್ತದಲ್ಲಿ ಹಾಜರಿತ್ತು. ಆದರೆ ಅಲ್ಲೆಲ್ಲೂ ಉಪ್ಪಿ ಮದುವೆಯ ಗಾಳಿಸುದ್ದಿ ಕೂಡ ಕೇಳಲಿಲ್ಲ.

ಉಪ್ಪಿ ಮದುವೆ ಎಲ್ಲಿ ?ಯಾರ್ಯಾರನ್ನು ಕರೆದಿದ್ದಾರೆ ? ಇದು ಲವ್ವಾ ಡವ್ವಾ? ಲವ್ವಾದದ್ದೇ ಆದರೆ ಯಾವಾಗ ?- ಎಲ್ಲವೂ ಸಸ್ಪೆನ್ಸ್‌.

ಉಪ್ಪಿ ಗುಟ್ಟಾಗೇ ಇಟ್ಟಿರಬಹುದಾದ ಈ ವಿಷಯ ಸಣ್ಣಗೆ ರಟ್ಟಾಗಿರುವುದು ಅವರು ಮದುವೆಯಾಗುತ್ತಿರುವ ಹುಡುಗಿಯ ಮೇಕಪ್‌ ರೂಮಿನಿಂದ. ತಮ್ಮ ತಂಗಿ ಕೈಲಿ ಈಗಿನಿಂದಲೇ ಸಿಂಗರಗೊಳ್ಳುತ್ತಿರುವ ಆ ಹುಡುಗಿ ಬೇರಾರೂ ಅಲ್ಲ, ಬಹು ಭಾಷಾ ನಟಿ ಪ್ರಿಯಾಂಕ ತ್ರಿವೇದಿ ! ಎಚ್‌ಟುಓ ಚಿತ್ರದಲ್ಲಿ ಪ್ರಭುದೇವ ಜೊತೆ ಈಕೆಗೋಸ್ಕರ ಉಪ್ಪಿ ಸಾಕಷ್ಟು ಕಾದಾಡಿದ್ದರು. ಈಗ ನಿಜ ಜೀವನ ಸಂಗಾತಿಯಾಗಲು ಪ್ರಿಯಾಂಕ ತುದಿಗಾಲಲ್ಲಿ ನಿಂತಿದ್ದಾರೆ ಅನ್ನುತ್ತಿದೆ ಡೈಲಿ ಟೆಲಿಗ್ರಾಫ್‌. ವಿಜಯ ಕರ್ನಾಟಕ ಪತ್ರಿಕೆ ಮದುಮಗಳ ಚಿತ್ರವನ್ನು ಹಾಕಿ ಮುಗುಮ್ಮಾಗಿಬಿಟ್ಟಿದೆ.

ಉಪೇಂದ್ರ ಫೋನ್‌ಗೆ ಸಿಗುತ್ತಿಲ್ಲ . ಉಪ್ಪಿಯ ಗೆಳೆಯರು ಕೂಡ ಯಾವುದು ನಿಜ, ಯಾವುದು ಸುಳ್ಳು ಎನ್ನುವ ಗೊಂದಲದಲ್ಲಿದ್ದಾರೆ. ಅಮಲುಗಣ್ಣಿನ ಸುಂದರಿ ಪ್ರಿಯಾಂಕಾ ಕೂಡ ಪ್ರತಿಕ್ರಿಯೆಗೆ ಸಿಗುತ್ತಿಲ್ಲ . ಮದುವೆಯ ಸಿದ್ಧತೆಯಲ್ಲಿದ್ದಾರೋ ಏನೋ ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada