twitter
    For Quick Alerts
    ALLOW NOTIFICATIONS  
    For Daily Alerts

    ‘ಬೇರು’ ಮೂಡಿದ ಹೊತ್ತು!

    By Staff
    |

    ಅಲ್ಲಿ ವೇದಿಕೆಯ ಮೇಲಿದ್ದವರಿಗೆ ಒಳ್ಳೆಯ ಚಿತ್ರಗಳನ್ನು ನಿರ್ಮಾಣ ಮಾಡುವ ಉತ್ಸಾಹವಿತ್ತು. ಸಭಾಂಗಣದಲ್ಲಿ ನೆರೆದಿದ್ದವರಿಗೆ ಒಳ್ಳೆಯ ಚಿತ್ರಗಳನ್ನು ಪ್ರೋತ್ಸಾಹಿಸುವ ಹಂಬಲವಿತ್ತು! ನಿಜಕ್ಕೂ ಅದೊಂದು ಸದಭಿರುಚಿಯ ಕಾರ್ಯಕ್ರಮ.

    ಹೌದು. ನಗರದ ಮಲ್ಲೇಶ್ವರದ ಹದಿನೆಂಟನೇ ಕ್ರಾಸ್‌ನಲ್ಲಿರುವ ಶ್ರೀಗಂಧ ಪ್ರಿವ್ಯೂ ಚಿತ್ರ ಮಂದಿರದಲ್ಲಿ ಭಾನುವಾರ(ಡಿ.11) ಸಂಜೆ ಹಬ್ಬದ ವಾತಾವರಣ. ಒಳ್ಳೆಯ ಚಿತ್ರ ನೋಡುವುದರೊಂದಿಗೆ, ಚಿತ್ರ ತಂಡದೊಂದಿಗೆ ಸಂವಾದ ನಡೆಸುವ ಅವಕಾಶ ಪ್ರೇಕ್ಷಕರಿಗೆ ಲಭಿಸಿತ್ತು.

    ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಗುರ್ತಿಸಲ್ಪಟ್ಟಿರುವ ‘ಈ ಕವಿ’ ಅಂತಾರಾಷ್ಟ್ರೀಯ ವೇದಿಕೆ ಈ ಕಾರ್ಯಕ್ರಮವನ್ನು ಸಂಘಟಿಸಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ಪಿ.ಶೇಷಾದ್ರಿ ಅವರ ‘ಬೇರು’ ಚಿತ್ರಕ್ಕೆ ಅಲ್ಲಿ ಬಿಡುಗಡೆಯ ಭಾಗ್ಯ!

    ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ‘ಬೇರು’ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಹೊರಗಡೆ ತುಂತುರು ಮಳೆ, ಒಳಗಡೆ ಚಿತ್ರದಲ್ಲಿನ ಭ್ರಷ್ಟಾಚಾರದ ವಿವಿಧ ಬೇರುಗಳ ಕಾವು ಪ್ರೇಕ್ಷಕರಿಗೆ ತಟ್ಟಿತ್ತು. ಒಳ್ಳೆ ಚಿತ್ರ ನೋಡುವ ಅವಕಾಶ ತಪ್ಪಿಸಿಕೊಳ್ಳಬಾರದೆಂದು ಮಳೆಯನ್ನು ಲೆಕ್ಕಿಸದೇ ಪ್ರೇಕ್ಷಕರು ಅಲ್ಲಿಗೆ ಬಂದಿದ್ದರು.

    ಚಿತ್ರ ಮುಗಿದ ನಂತರ ಚಿತ್ರತಂಡದೊಂದಿಗೆ ಸಂವಾದ ಆರಂಭವಾಯಿತು. ಸಂವಾದ ಚಿತ್ರಕ್ಕಷ್ಟೇ ಸೀಮಿತವಾಗದೇ, ಚಿತ್ರರಂಗದ ಸದ್ಯದ ಸಮಸ್ಯೆಗಳು, ಸದಭಿರುಚಿ ಚಿತ್ರಗಳನ್ನು ಉಳಿಸಿ ಬೆಳೆಸುವ ಬಗೆ ಸೇರಿದಂತೆ ಆರೋಗ್ಯಕರವಾಗಿ ನಡೆಯಿತು.

    ಸಂವಾದದಲ್ಲಿ ಚಿತ್ರತಂಡ ಹೇಳಿದ್ದು ಇಷ್ಟು :

    ಭ್ರಷ್ಟತೆ ವಿರುದ್ಧ ಧ್ವನಿ ಎತ್ತುವ ‘ಬೇರು’ಚಿತ್ರಕ್ಕೆ ಸರ್ಕಾರದಿಂದ ದೊರೆತ ಸಬ್ಸಿಡಿ ಹಣ ಪಡೆಯಲು ಚಿತ್ರತಂಡ ಲಂಚ ನೀಡ ಬೇಕಾಯಿತು ಎಂಬ ಸಂಗತಿಯನ್ನು ನಟ ಸುಚೇಂದ್ರ ಪ್ರಸಾದ್‌ ವಿವರಿಸಿದರು.

    ನಿರ್ಮಾಪಕ , ವಿತರಕ, ಪ್ರದರ್ಶಕ ಮತ್ತು ವೀಕ್ಷಕರ ನಡುವೆ ಸೇತುವೆ ಬೇಕು. ಪ್ರದರ್ಶಕರು ಕಲಾತ್ಮಕ ಚಿತ್ರಗಳನ್ನು ಪ್ರೋತ್ಸಾಹಿಸಬೇಕು. ಶಿವಮೊಗ್ಗದಲ್ಲಿ ಬೆಳಗಿನ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಚಿತ್ರಮಂದಿರದ ಮಾಲೀಕನನ್ನು ಪರಿಪರಿಯಾಗಿ ಒಪ್ಪಿಸಬೇಕಾಯಿತು. ‘ತಮಿಳು ಚಿತ್ರಕ್ಕೆ ಬೇಡಿಕೆ ಇದೆ. ಬೇರು ಚಿತ್ರ ಯಾರ್‌ ನೋಡ್ತಾರೆ’ ಎಂಬ ಕಾರಣಕ್ಕೆ ಮಾಲೀಕ ಗೊಣಗುತ್ತಿದ್ದ. ಇನ್ನು ರಾಜಧಾನಿ ಪರಿಸ್ಥಿತಿ ಹೇಳುವುದೇ ಬೇಡ. ಕಲಾತ್ಮಕ ಚಿತ್ರಗಳ ನೋಡುವ ಸಂಖ್ಯೆ ಗುಣಾಕಾರದ ಮಾದರಿಯಲ್ಲಿ ಹೆಚ್ಚಳವಾಗಬೇಕು. ಕಲಾತ್ಮಕ ಚಿತ್ರಗಳು ಅನ್ನೋ ಹಣೆಪಟ್ಟಿಯನ್ನು ಚಿತ್ರಕ್ಕೆ ಅಂಟಿಸಬಾರದು ಎಂದರು.

    ನಮ್ಮ ಕೆಲಸ ನಮ್ಮದು : ‘ಬೇರು’ ಚಿತ್ರದ ಕಥೆಗಾರ ಪ್ರಹ್ಲಾದ್‌ ಮಾತನಾಡಿ, ವ್ಯಾಪಾರೀ ಚಿತ್ರಗಳ ಮುಂದೆ ಕಲಾತ್ಮಕ ಚಿತ್ರಗಳು ಪೈಪೋಟಿ ನಡೆಸಬೇಕಾದ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ. ಸಮಾನ ಮನಸ್ಕರ ನಮ್ಮ ತಂಡ, ವ್ಯಾಪಾರಿ ಚಿತ್ರಗಳಲ್ಲಿ ಕೆಲಸ ಮಾಡುತ್ತಲೇ, ಕಲಾತ್ಮಕ ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದೆ ಎಂದರು.

    ಕಡಿಮೆ ವೆಚ್ಚ ಅನ್ನುವುದಕ್ಕಿಂತಲೂ ಉತ್ತಮ ಚಿತ್ರ ನೀಡುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ‘ಮುನ್ನುಡಿ’, ‘ಅತಿಥಿ’, ‘ಬೇರು’ ಹೊರಬಂದಿವೆ. ಕಷ್ಟವಾಗಲಿ, ಸುಖವಾಗಲಿ ನಮ್ಮ ಪ್ರಯತ್ನ ಮುಂದುವರೆಯಲಿದೆ ಎಂದು ಘೋಷಿಸಿದರು.

    ವಾಣಿಜ್ಯ ಚಿತ್ರಗಳಂತೆ ನಾವು ಪ್ರಚಾರ ನೀಡಲು ಅಸಾಧ್ಯ. ಲೋಕಾಯುಕ್ತ ವೆಂಕಟಾಚಲ ಅವರಿಂದ ಚಿತ್ರವನ್ನು ಬಿಡುಗಡೆ ಮಾಡಿಸಿದೆವು. ಪಿವಿಆರ್‌ನಲ್ಲಿ ಚಿತ್ರ ತೆರೆಕಂಡಿತು. ಪ್ರೇಕ್ಷಕರ ಪ್ರತಿಕ್ರಿಯೆ -ಶನಿವಾರ, ಭಾನುವಾರ ಪರವಾಗಿಲ್ಲ ಅನ್ನುವಂತಿತ್ತು. ನಂತರ ಪ್ರೇಕ್ಷಕರ ಕೊರತೆಯಿಂದ ಒಂದೇ ವಾರಕ್ಕೆ ಚಿತ್ರವನ್ನು ಚಿತ್ರಮಂದಿರದಿಂದ ತೆಗೆಯಬೇಕಾಯಿತು.

    ಗೊರವಯ್ಯ ಪ್ರಾಮಾಣಿಕತೆಯ ಸಂಕೇತವಾಗಿ ಚಿತ್ರದಲ್ಲಿದ್ದಾನೆ. ಚಿತ್ರದಲ್ಲಿನ ಬಾಲಕಿ ಭ್ರಷ್ಟರ ವಿರುದ್ಧ ‘ಥೂ’ ಎಂದು ಉಗಿಯುವ ಮೂಲಕ ತನ್ನ ಅಸಮಾಧಾನವನ್ನು ಪ್ರದರ್ಶಿಸುತ್ತಾಳೆ. ಚಿತ್ರದಲ್ಲೊಂದು ಆಶಾಕಿರಣವಿದೆ ಎಂದರು.

    ಎಲ್ಲರ ಪಾಲಿದೆ : ನಟ ಮತ್ತು ಸಂಭಾಷಣೆಗಾರ ಸುರೇಶ್‌ ಮಾತನಾಡಿ, ಕಲಾತ್ಮಕ ಚಿತ್ರಗಳಿಗೆ ಚಿತ್ರಮಂದಿರದ ಕೊರತೆ ಇದೆ. ವಾಣಿಜ್ಯ ಚಿತ್ರಕ್ಕೆ ಸಿಕ್ಕೋ ಪ್ರೋತ್ಸಾಹ ನಮಗೆ ಸಿಗೋದಿಲ್ಲ. ಸರ್ಕಾರ ಈ ಬಗ್ಗೆ ಕೇವಲ ಭರವಸೆ ನೀಡುತ್ತಿದೆ ಎಂದರು.

    ಖಾಕಿ, ಖಾದಿ ಮತ್ತು ಕಾವಿಗಳು ಭ್ರಷ್ಟತೆ ಮೂಲಕ ಶ್ರೀಸಾಮಾನ್ಯರನ್ನು ಶೋಷಿಸುತ್ತಿವೆ. ಸಾಮಾನ್ಯ ವ್ಯಕ್ತಿ 50ಪೈಸೆ ಲಂಚ ಪಡೆದರೆ, ರಾಜಕಾರಣಿಗಳು 50ಕೋಟಿ ದೋಚುತ್ತಾರೆ. ಭ್ರಷ್ಟತೆಯಲ್ಲಿ ಎಲ್ಲರ ಪಾಲಿದೆ. ಆದರೆ ಸಾಮಾನ್ಯ ಮನುಷ್ಯನಿಂದ ಭ್ರಷ್ಟತೆ ತಡೆ ಸಾಧ್ಯ. ಪ್ರತಿಯಾಬ್ಬರೂ ಮುಕ್ತ ಮನಸ್ಸಿನಿಂದ ಈ ಕೆಲಸ ಮಾಡಿದ್ರೆ, ನಿರ್ಮೂಲನೆಯಾಗದಿದ್ದರೂ, ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    ಸಂವಾದದ ಕೆಲವು ತುಣುಕುಗಳು :

  • ಪ್ರಾಮಾಣಿಕತೆ ಮತ್ತು ಭ್ರಷ್ಟತೆಯನ್ನು ಮುಖಾಮುಖಿಯಾಗಿ ಚಿತ್ರದಲ್ಲಿ ನಿಲ್ಲಿಸಲಾಗಿದೆ. ಪ್ರಾಮಾಣಿಕತೆಗೆ ದುರ್ಬಲ ಸಂಕೇತ ಬಳಸಲಾಗಿದೆ ಎಂದು ಚಿತ್ರದ ಕಥೆ ಬಗ್ಗೆ ಖ್ಯಾತ ನ್ಯಾಯವಾದಿ ಹೇಮಲತಾ ಮಹಿಷಿ ಅಸಮಾಧಾನ ವ್ಯಕ್ತಪಡಿಸಿದರು.
  • ಸತ್ಯ ಹೇಳ ಬೇಕು. ಕಳ್ಳತನ ಮಾಡಬಾರದು. ನಿಜ ಹೇಳಿದರೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ ಎನ್ನುವ ನೀತಿ ಸಮಾಜಕ್ಕೆ ಸಿಕ್ಕುವ ಅಪಾಯವಿದೆ. ಮಾನವೀಯತೆಯ ಅಸಹಾಯಕತೆ ಚಿತ್ರದಲ್ಲಿದೆ. ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ಸಂದೇಶವನ್ನು ಚಿತ್ರ ನೋಡಬೇಕಿತ್ತು ಎಂಬ ಅಂಶವನ್ನು ಹ.ಚ.ನಟೇಶ್‌ ಬಾಬು ಸೇರಿದಂತೆ ಎತ್ತಿಹಿಡಿದರು.
  • ರಂಗ ಶಂಕರ, ಎಚ್‌ಎನ್‌ ಕಲಾಕ್ಷೇತ್ರ, ರವೀಂದ್ರ ಕಲಾಕ್ಷೇತ್ರದಲ್ಲಿ ಇಂತಹ ಚಿತ್ರಗಳನ್ನು ಪ್ರದರ್ಶಿಸ ಬಹುದಲ್ಲ ಎಂಬ ಪ್ರೇಕ್ಷಕರೊಬ್ಬರ ಪ್ರಶ್ನೆಗೆ, ನಟ ಸುಚೇಂದ್ರ ಉತ್ತರಿಸುತ್ತಾ, ಸಿನಿಮಾಕ್ಕೆ ಚಿತ್ರಮಂದಿರದಲ್ಲಿ ಮಾತ್ರ ರಸಾನುಭೂತಿ ಸಿಕ್ಕುತ್ತದೆ ಎಂದರು.
  • ‘ಭ್ರಷ್ಟತೆಯ ಬೇರು ಕತ್ತರಿಸಲು ಅಸಾಧ್ಯ’ -ಗೋವಿಂದಪ್ಪ ನಾಲ್ಕನೇ ಪ್ರದರ್ಶನಕ್ಕೆ ಇಷ್ಟು ಜನ ಬಂದಿರುವುದು ನಿಜಕ್ಕೂ ಖುಷಿಯ ಸಂಗತಿ -ಗುರುಪ್ರಸಾದ್‌ ಈ ಪ್ರದರ್ಶನದ ಬಗ್ಗೆ 215ಮಂದಿಗೆ ಇಮೇಲ್‌ ಮೂಲಕ ಮಾಹಿತಿ ನೀಡಿದ್ದೆವು. ಆದರೆ ಕೇವಲ ನಾಲ್ಕು ಮಂದಿ ಪ್ರತಿಕ್ರಿಯಿಸಿದ್ದಾರೆ -ವೀರೇಶ್‌ ಹೊಗೆಸೊಪ್ಪಿನವರ್‌.
  • ಬೇರು ಚಿತ್ರಕ್ಕೆ ರಂಗು ತುಂಬಿದರೆ, ಅದು ತೇರು, ಕಾರು, ಸೇರು ಆಗುತ್ತದೆ. ಚಿತ್ರದಲ್ಲಿ ರಘುನಂದನ್‌ ಹೀರೋ ಅಲ್ಲ. ರಿkುೕರೋ. ರಾಜಕಾರಣಿಗಳಿಗೆ ಚಿತ್ರ ತೋರಿಸುವ ಬಯಕೆ ಇದೆ. ಆದರೆ ಅವಕಾಶ ಸಿಗುತ್ತಿಲ್ಲ -ಸುಚೇಂದ್ರ ಪ್ರಸಾದ್‌.
  • ಕಲಾತ್ಮಕ ಚಿತ್ರಗಳಿಗೆ ಪ್ರತ್ಯೇಕವಾಗಿ ಚಿತ್ರಮಂದಿರವನ್ನು ಮೀಸಲಿಟ್ಟರೇ ಚೆನ್ನ -ಸಂಪಿಗೆ ಶ್ರೀನಿವಾಸ್‌
  • ಕಲಾತ್ಮಕ ಚಿತ್ರಗಳಿಗೆ ಪುಟ್ಟಣ್ಣ ಚಿತ್ರಮಂದಿರವಿತ್ತು. ಅದೀಗ ಪೊಲೀಸ್‌ ಠಾಣೆ ಆಗಿದೆ. ಈ ಬಗ್ಗೆ ಹೋರಾಟ ಅತ್ಯಗತ್ಯ -ಸುರೇಶ್‌
  • ಈ ಕವಿ ವೇದಿಕೆಯ ಅಧ್ಯಕ್ಷ ಸತೀಶ್‌ ಗೌಡ ಮತ್ತು ಗೆಳೆಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Wednesday, April 24, 2024, 7:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X