For Quick Alerts
  ALLOW NOTIFICATIONS  
  For Daily Alerts

  ನಾನೇ ಬೇರೆ... ನನ್ನ ಸ್ಟೈಲೇ ಬೇರೆ... -ಗುರುಪ್ರಸಾದ್‌

  By Staff
  |
  • ‘ಮಠ’ ಬಂದ ಮೇಲೆ ಏನಾಯಿತು?
  ‘ಮಠ’ ಸಿನಿಮಾಕ್ಕಾಗಿ ನಾನು ಸಾಕಷ್ಟು ಅಧ್ಯಯನ ಮಾಡಿದ್ದೇನೆ. 2004 ಮಾರ್ಚ್‌ನಲ್ಲಿ ಕತೆ ಸಿದ್ಧವಾಯಿತು. ಸೆಪ್ಟೆಂಬರ್‌ನಲ್ಲಿ ಕಂಚಿ ಮಠದಲ್ಲಿ ಹೆಣ ಬಿತ್ತು. ಇದು ಅಚ್ಚರಿಯೂ ಅಲ್ಲ, ಭವಿಷ್ಯವೂ ಅಲ್ಲ. ನಿಜವಾದ ಸಂಶೋಧನೆ. ಮಠ ಬಿಡುಗಡೆಯಾದ 7-8ತಿಂಗಳಲ್ಲಿ ಯಾವ ಮಠದಿಂದಲೂ ಕೆಟ್ಟ ಸುದ್ದಿ ಬರಲಿಲ್ಲ. ಮಠಾಧಿಪತಿಗಳ ಅನಾಚಾರ, ದಿನಕ್ಕೊಂದು ಸುದ್ದಿ ಪತ್ರಿಕೆಯಲ್ಲಿ ಬರ್ತಾ ಇತ್ತು. ಅದೆಲ್ಲವೂ ಆಗ ಕಡಿಮೆಯಾಗಿತ್ತು. ಈ ಸಿನಿಮಾವನ್ನು ನಿಡುಮಾಮಿಡಿ ಸ್ವಾಮೀಜಿ ಪ್ರಶಂಸಿಸಿದ್ದಾರೆ.
  • ಜಗ್ಗೇಶ್‌ಗೆ ಪೋಷಕ ನಟ ಪ್ರಶಸ್ತಿ ಬಂದಿದೆ. ಚಿತ್ರದಲ್ಲಿ ಅವರು ನಾಯಕರಾ? ಪೋಷಕ ನಟರಾ?
  ಚಿತ್ರದ ನಾಯಕ ಜಗ್ಗೇಶ್‌ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ವಿವಾದದ ಬಗ್ಗೆ ಸದ್ಯಕ್ಕೇ ಏನನ್ನೂ ಹೇಳಲಾರೆ. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಸೀತಾರಾಂ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಸಿನಿಮಾ ರಂಗದಲ್ಲಿನ ರಾಜಕಾರಣವನ್ನು ವೆಬ್‌ಸೈಟ್‌ನಲ್ಲಿ ಸ್ಫೋಟಿಸುತ್ತೇನೆ.
  • ನಿಮ್ಮ ಹೊಸ ಚಿತ್ರ ‘ಎದ್ದೇಳು ಮಂಜುನಾಥ’ . ಈ ಸಿನಿಮಾ ಬಗ್ಗೆ ಹೇಳಿ...
  ಜಗ್ಗೇಶ್‌ ಚಿತ್ರರಂಗ ಪ್ರವೇಶಿಸಿ 2007ಕ್ಕೆ 25ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಹೊಸ ಚಿತ್ರವನ್ನು ನಮ್ಮ ತಂಡವೇ ಮಾಡುತ್ತಿದೆ. ಜ.14ರಂದು ಚಿತ್ರದ ಮುಹೂರ್ತ ನೆರವೇರಲಿದೆ. ಈ ಸಿನಿಮಾದಲ್ಲಿ ಜಗ್ಗೇಶ್‌ ಅವರದು ಒನ್‌ ಮ್ಯಾನ್‌ ಶೋ. 20ಪಾತ್ರಗಳಿದ್ದರೂ ಜಗ್ಗೇಶ್‌ ಕೇಂದ್ರೀಕೃತ. ಚಿತ್ರದ ಪರದೆ ತುಂಬ ಜಗ್ಗೇಶ್‌ ಇರುತ್ತಾರೆ. ಇಂಥ ಸವಾಲನ್ನು ಜಗ್ಗೇಶ್‌ ನಿಬಾಯಿಸಬಲ್ಲರು.
  • ಚಿತ್ರದ ಕತೆ ಏನು?
  ಕತೆ ಹೇಳುವುದು ಚಿತ್ರದ ಸಮಾಧಿಗೆ ಮೊಳೆ ಹೊಡೆಯುವುದು ಎರಡೂ ಒಂದೆ. ಒಳ್ಳೆ ನಿರ್ದೇಶಕ ಕತೆ ಹೇಳುವುದಿಲ್ಲ. ಒಬ್ಬ ಸೋಮಾರಿಯ ಮನಸ್ಸನ್ನು ಪರದೆ ಮುಂದೆ ತರುತ್ತೇನೆ. ಅದು ಯಾರಾದರೂ ಆಗಬಹುದು. ಚಿತ್ರದ ನಿರ್ಮಾಪಕರು ಸನತ್‌ ಕುಮಾರ್‌. ಉದ್ಭವ ಸಿನಿಮಾಗೆ ಕತೆ ಬರೆದ ವೈಕುಂಠ ರಾಜು ಮಗ.

  ಭಾರತ-ಜಪಾನ್‌ಗೆ ವ್ಯತ್ಯಾಸವಿದೆ. ಅಲ್ಲಿ ಒಂದು ಗಂಟೆ ಹೆಚ್ಚಿಗೆ ದುಡಿದು, ದೇಶಕ್ಕೆ ಒಳ್ಳೆಯದಾಯಿತು ಎನ್ನುತ್ತಾರೆ. ಇಲ್ಲಿ ಯಾಕೆ ದುಡಿಯಬೇಕು ಎನ್ನುತ್ತಾರೆ. ಅಪ್ಪ-ಅಮ್ಮನ ಆಸ್ತಿ ನಂಬಿ ಬದುಕುವ ಜನ. ಕೆಲಸ ಶ್ರೇಷ್ಠ ಎಂಬ ಕಲ್ಪನೆ ನಮ್ಮಲ್ಲಿ ಬಂದಿಲ್ಲ. ಹೀಗಾಗಿ ಪ್ರಗತಿ ಕಷ್ಟ. ಇಂತಹ ಅಂಶಗಳೆಲ್ಲವೂ ಚಿತ್ರದಲ್ಲಿರುತ್ತವೆ.

  • ಈಗಿನ ಸಿನಿಮಾಗಳ ಬಗ್ಗೆ ಏನನ್ನುವಿರಿ? ನೀವು ಬೇರೆಯವರಿಗಿಂತಲೂ ಹೇಗೆ ಭಿನ್ನ?
  ಚಿತ್ರರಂಗದಲ್ಲಿ ಪ್ರೇಮ ಮತ್ತು ದ್ವೇಷದ ಕತೆಗಳದೇ ದರ್ಬಾರು. ಆದರೆ ನನ್ನದು ಶೀರ್ಷಿಕೆಯಿಲ್ಲದ ಚಿತ್ರಗಳು. ಯಾವ ವಿಭಾಗಕ್ಕೆ ಸೇರಿಸಲು ಕಷ್ಟ. ಕೇವಲ ಗುರುಪ್ರಸಾದ್‌ ಚಿತ್ರಗಳು ಎಂದು ಗುರ್ತಿಸಬಹುದು. ಅದೇ ನನ್ನ ಬಯಕೆ. ಹೊಸ ರೀತಿಯ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಬಳುವಳಿ ನೀಡುವುದು ನನ್ನ ಕನಸು.

  ಕರುಣಾ ರಸ ಭಾರತಕ್ಕೆ ಸೀಮಿತ. ಅದನ್ನು ಸೃಷ್ಟಿಸುವುದು ಸುಲಭ. ಅದೇ ಅಪರೂಪದ ಭಾವಗಳಾದ ರೋಮಾಂಚಕ, ವಿಚಾರಪೂರ್ಣ, ಥ್ರಿಲ್‌, ಸ್ಫೂರ್ತಿದಾಯಕ ಚಿತ್ರಗಳ ನಿರ್ಮಾಣ ಕಷ್ಟ. ಇಂಥ ಚಿತ್ರ ಮಾಡುವುದೇ ನಿರ್ದೇಶಕರ ಕೆಲಸ.

  ಈಗಿನ ನಿರ್ಮಾಪಕರು ಮತ್ತು ನಿರ್ದೇಶಕರು, ಇರುವ ಮಾರುಕಟ್ಟೆಯನ್ನು ಕುಲಕೆಡಿಸುತ್ತಿದ್ದಾರೆ. ನಾನು ಇಲ್ಲದ ಮಾರುಕಟ್ಟೆಯನ್ನು ಸೃಷ್ಟಿಸುತ್ತೇನೆ(ಗುರು ಮಾತಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿತ್ತು).

  ನನ್ನ ಮೊದಲ ಚಿತ್ರ ಪಿವಿಆರ್‌ನಲ್ಲಿ ಆರು ವಾರ ಪ್ರದರ್ಶನ ಕಂಡಿದೆ. ಕನ್ನಡ ಚಿತ್ರಗಳಿಂದ ದೂರವಿರುವ ಸಂಪಿಗೆ ಟಾಕೀಸ್‌ನಲ್ಲಿ ನಾಲ್ಕು ವಾರ ಓಡಿದೆ. ಎಲ್ಲರ ಪ್ರಶಂಸೆ ಸಿಕ್ಕಿದೆ. ಇಷ್ಟು ಸಾಕು ನನಗೆ.

  • ರೀಮೇಕ್‌ ಅಂದ್ರೆ ಏನು? ಅದು ಬೇಕಾ? ಬೇಡ್ವಾ?
  ರೀಮೇಕ್‌ ಅನ್ನೋದು ಒಳ್ಳೆ ಪದ. ಭಿಕ್ಷೆ, ದಾನದ ರೀತಿ. ಅದನ್ನು ನಾವು ಕೊಟ್ಟಾಗ ಒಳ್ಳೆಯದು. ತೆಗೆದುಕೊಂಡಾಗ ತಪ್ಪು. 50 ಸ್ವಮೇಕ್‌ ಚಿತ್ರಗಳು, 50ರೀಮೇಕ್‌ ಚಿತ್ರಗಳು ಬಂದರೆ ಕಷ್ಟವೇನಿಲ್ಲ. ಆದರೆ ಶೇ.90ರಷ್ಟು ಅವು ಬಂದರೆ ಅಸಹ್ಯ.

  ಏಳು ಜ್ಞಾನಪೀಠ, ರಾಜ್‌ಕುಮಾರ್‌, ಪುಟ್ಟಣ ಕಣಗಾಲ್‌ರನ್ನು ಹೊಂದಿದ ನಮ್ಮ ಚಿತ್ರರಂಗ ಗತಿಗೆಟ್ಟಂತೆ ವರ್ತಿಸಬಾರದು. ಯಾವುದೋ ಒಂದು ಚಿತ್ರ ಹಿಟ್‌ ಆದರೆ ಎಲ್ಲಾ ಚಿತ್ರಗಳು ಹಿಟ್‌ ಆಗುವುದಿಲ್ಲ. ಕುರಿ ಬಿದ್ದ ಜಾಡು ಎಂಬಂತೆ ಆಗಬಾರದು. ಇಲ್ಲಿ ಸ್ವಂತಿಕೆಗೆ ಬೆಲೆಯೇ ಇಲ್ಲವೇ? ರೀಮೇಕ್‌ ಸಿನಿಮಾಗಳು ಸಿನಿಮಾಗಳೇ ಅಲ್ಲ. ನಾನು ರೀಮೇಕ್‌ ವಿರೋಧಿ. ಕ್ರಿಯಾಶೀಲತೆ ಇರುವಂಥದ್ದೇ ನಿಜವಾದ ಸಿನಿಮಾ.

  • ಚಿತ್ರರಂಗದೊಳಗಿನ ಸದ್ಯದ ಬಿಕ್ಕಟ್ಟು-ಇಕ್ಕಟ್ಟಿಗೆ ನೀವು ಸೂಚಿಸುವ ಪರಿಹಾರ?
  60ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸ ಗಮನಿಸಿದಾಗ ಎಲ್ಲವೂ ರಾಜಿಯಲ್ಲಿಯೇ ಇತ್ಯರ್ಥಗೊಂಡಿವೆ. ಅದೇ ರೀತಿ ಸದ್ಯದ ಸಮಸ್ಯೆಯೂ ತೀರುತ್ತದೆ. ಸಮಸ್ಯೆಯನ್ನು ದೊಡ್ಡದು ಮಾಡುವುದು ಬೇಡ. ಎಲ್ಲರೂ ತಮ್ಮ ಪಾಡಿಗೆ ತಾವು ಕೆಲಸ ಮಾಡುವುದೇ, ಸಮಸ್ಯೆಗೆ ಪರಿಹಾರ. ವಾಣಿಜ್ಯ ಮಂಡಳಿ ಬಗ್ಗೆ ದೂರುಗಳಿವೆ. ಆದರೆ ಈವರೆಗೆ ವಾಣಿಜ್ಯ ಮಂಡಳಿ ಎಂದೂ ಒಂದು ವರ್ಗದ ಪರ ನಿಂತಿಲ್ಲ. ಸಮಸ್ಯೆಗೆ ಪರಿಹಾರ ಸಿಕ್ಕೇ ಸಿಗುತ್ತದೆ.

  ಹಣ ಮಾಡುವುದಷ್ಟೇ ಒಳ್ಳೆಚಿತ್ರ ಎಂಬ ನಂಬಿಕೆ ನಮ್ಮವರಲ್ಲಿದೆ. ಚಿತ್ರ ನಿರ್ಮಾಣ ವ್ಯವಹಾರವಾಗಿದೆ. ಲಾಭವಷ್ಟೇ ಮುಖ್ಯವಾಗಿದೆ. ನಿರ್ಮಾಪಕ, ಹಂಚಿಕೆದಾರ, ಹೂಡಿಕೆದಾರ(ಫೈನಾನ್ಸಿಯರ್‌), ನಾಯಕ ಎಂಬ ನಾನಾ ಪಾತ್ರಗಳನ್ನು ಒಬ್ಬನೇ ವ್ಯಕ್ತಿ ಮಾಡಲು ಹೋದಾಗ, ಇಂತಹ ಕಗ್ಗಂಟುಗಳು ನಿರ್ಮಾಣವಾಗುತ್ತವೆ. ವೃತ್ತಿಪರತೆಯ ಕೊರತೆ ನಮ್ಮವರಿಗಿದೆ.

  • ಮತ್ತೇನಾದ್ರೂ ವಿಶೇಷ... ?
  ಪ್ರತಿಫಲ ಬರಲು ತಾಳ್ಮೆ ಬೇಕು. ಕಾಯಬೇಕು. ಕನಸುಗಳ ಸಾಕ್ಷಾತ್ಕಾರಕ್ಕೆ ತಪಸ್ಸು ಮಾಡಬೇಕು. ನಾನಂತೂ ಆತ್ಮವಿಶ್ವಾಸ ಬಲಿತ ಮೇಲೆ ಚಿತ್ರರಂಗಕ್ಕೆ ಜಿಗಿದೆ. ಚಿತ್ರರಂಗದೊಳಗಿನ ಗದ್ದಲಗಳು, ಗೊಂದಲಗಳು, ರಾಜಕೀಯಗಳು ಇವುಗಳ ಮೇಲೆ ಬೆಳಕು ಚೆಲ್ಲಲು ವೆಬ್‌ಸೈಟ್‌ ಆರಂಭಿಸುತ್ತೇನೆ. ಈ ಬಗ್ಗೆ ಹೇಳಲು ಪತ್ರಿಕೆಗಳು ವಿಫಲವಾಗಿವೆ. ರಾಜಕೀಯ ಒತ್ತಡಕ್ಕೆ ಮಣಿದಿವೆ. ಹೀಗಾಗಿ ನನ್ನ ಮುಖವಾಣಿ ಸದ್ಯದಲ್ಲಿಯೇ ಉದ್ಘಾಟನೆಯಾಗಲಿದೆ.

  ಗುರು ಅವರಿಗೆ ಹಾಯ್‌ ಹೇಳಬೇಕೇ? ಅವರ ಇ-ಮೇಲ್‌ ವಿಳಾಸಗಳು ಇಲ್ಲಿವೆ :
  Hayavadana@sify.com
  Mukhavani@rediff.com

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X