»   » ರಜನಿ 53 ತುಂಬಿದ ಸಂಭ್ರಮದಲ್ಲೂ ತಣ್ಣಗಿರೋದ್ಯಾಕೆ?

ರಜನಿ 53 ತುಂಬಿದ ಸಂಭ್ರಮದಲ್ಲೂ ತಣ್ಣಗಿರೋದ್ಯಾಕೆ?

Posted By: Super
Subscribe to Filmibeat Kannada

ಡಿಸೆಂಬರ್‌ 12, 2002ಕ್ಕೆ ಸರಿಯಾಗಿ ರಜನೀಕಾಂತ್‌ಗೆ 53 ತುಂಬಿದೆ. ಹೀಗಿದ್ದೂ ಚೆನ್ನೈನ ಗಲ್ಲಿಗಳಲ್ಲಿ ಮೊದಲಿನ ಸಂಚಲನೆಯಿಲ್ಲ. ಸ್ಟೈಲ್‌ಕಿಂಗ್‌ ಮನೆ ಮುಂದೆ ಜನಜಂಗುಳಿಯಿಲ್ಲ. ರಜನಿ ತಮ್ಮ ಮನೆಯಲ್ಲಿ ತಣ್ಣಗಿದ್ದಾರೆ !

ರಜನಿ ಹುಟ್ಟುಹಬ್ಬಕ್ಕೆ ಅವರ ದೊಡ್ಡ ಸಂಖ್ಯೆಯ ಅಭಿಮಾನಿಗಳು ಈ ಹಿಂದೆ ನಡೆಸುತ್ತಿದ್ದ ಸಿದ್ಧತೆಗಳು ತಿಂಗಳಿಗೆ ಮುನ್ನವೇ ಸದ್ದಾಗುತ್ತಿದ್ದವು. ಆದರೀಗ ರಜನಿ ತಮ್ಮ ನಿಕಟವರ್ತಿಗಳ ಮೂಲಕ ಅಭಿಮಾನಿಗಳನ್ನು ತಣ್ಣಗಿರುವಂತೆ ಕೇಳಿಕೊಂಡಿರುವುದರ ಹಿಂದೆಯೂ ದೊಡ್ಡ ಉದ್ದಿಶ್ಯವೇ ಇದೆ ಎನ್ನುತ್ತಿದೆ ತಮಿಳು ಸಿನಿಮಾ ಲೋಕ.

ರಜನಿ ಈಗ ಜನರ ಮುಂದೆ ಕೈಮುಗಿದು ಮಾತಿಗೆ ನಿಂತರೆ, ಅದಕ್ಕೆ ರಾಜಕೀಯದ ಬಣ್ಣ ಹಚ್ಚುವುದು ಸಾಮಾನ್ಯವಾಗಿ ಬಿಟ್ಟಿದೆ. ಅದು ದಿಟವೇ ಇದ್ದರೂ, ಯಾವತ್ತೂ ರಜನಿ ತನ್ನ ಇಮೇಜಿಗೆ ಮಸಿ ಹತ್ತದಂತೆ ಎಚ್ಚರಿಕೆ ವಹಿಸುತ್ತಲೇ ಬಂದಿದ್ದಾರೆ. 'ಬಾಬಾ" ಹೀನಾಯವಾಗಿ ಸೋತಾಗ ವಿತರಕರಿಗೆ ದುಡ್ಡು ಕೊಟ್ಟು ನಷ್ಟಭರಿಸಿ ದೊಡ್ಡ ಮನುಷ್ಯನಾದ ರಜನಿ, ಬೆಂಗಳೂರಿಗೆ ಬಂದಾಗಲೂ ತಮ್ಮ ಹಳೆಯ ಬಿಟಿಎಸ್‌ ಸ್ನೇಹಿತರನ್ನು ಅದೇ ಆಪ್ತತೆಯಿಂದ ಮಾತಾಡಿಸುತ್ತಾರೆ.

ಕಾವೇರಿ ತಕರಾರಿನ ವೇಳೆ ಪ್ರತ್ಯೇಕ ಉಪವಾಸ ಕೂತು ಗಮನ ಸೆಳೆದ ರಜನಿ, ಅದನ್ನೇ ನೆಪವಾಗಿಸಿ ಕಾಲೆಳೆಯುವವರು ಹೆಚ್ಚಾಗತೊಡಗಿದಾಗ ಮೆಲ್ಲಗೆ ಹೆಜ್ಜೆ ಇಡತೊಡಗಿದರು. ಗಂಗಾ- ಕಾವೇರಿ ಸೇರಿಸಿ ಅಂತ ತಾವೂ ಹಣ ಕೊಡಲು ಮುಂದೆ ಬಂದಾಗ, ಪೊಲಿಟಿಕಲ್‌ ಗಿಮಿಕ್ಕು ಅಂತ ಜನ ಹುಯಿಲೆಬ್ಬಿಸಿದಾಗ ರಜನಿ ನಡೆ ಇನ್ನೂ ನಿಧಾನವಾಯಿತು.

ಚೆನ್ನೈ ಹಾಗೂ ಬೆಂಗಳೂರಿನ ವಿಷಯದಲ್ಲಿ ರಜನಿ ತಟಸ್ಥ ಮನಸ್ಕರು ಎಂಬ ಮಾತೂ ಅಭಿಮಾನಿಗಳ ವಲಯದಲ್ಲಿ ಕೇಳಿಬರುತ್ತದೆ. ಅದಕ್ಕೇ ಬಿಟಿಎಂ ಲೇಔಟಿನ ರಜನಿಕಾಂತ್‌ ಅಭಿಮಾನಿಗಳ ಪುಟ್ಟ ಸಂಘ ಅವರ ಹುಟ್ಟುಹಬ್ಬ ಆಚರಿಸಿ, ಕನ್ನಡದಲ್ಲೇ ಅವರಿಗೆ ಜೈಕಾರ ಹಾಕುತ್ತಾ ಸಿಹಿ ಹಂಚುತ್ತಿರುವುದು !

ಅಂದಹಾಗೆ, ಸರಿಯಾಗಿ ಒಂದು ತಿಂಗಳ ಹಿಂದೆ ತಮಿಳು ಸಿನಿಮೋದ್ಯಮದಲ್ಲಿ ಈ ಮಾತು ಚಾಲ್ತಿಯಲ್ಲಿತ್ತು- 'ಬಾಬಾ" ಸಾಕಷ್ಟು ಯಶಸ್ವಿಯಾಗಿದ್ದರೆ, ಇನ್ನು ಬಣ್ಣ ಹಚ್ಚುವುದಿಲ್ಲ ಎಂದು ರಜನಿ ಹೇಳಿದ್ದರು. ಆದರೆ ಬಾಬಾ ನೆಲಕಚ್ಚಿದ್ದರಿಂದ ರಜನಿಕಾಂತ್‌ ಇನ್ನೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ದೃಷ್ಟಿಯಲ್ಲಿ ಬಾಬಾ ಸೋಲು ರಜನಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೂ ಹೌದು ! ಈ ಬಾರಿ ರಜನಿ ನಾಯಕರಾಗಲಿರುವುದು ಪಕ್ಕಾ ಕಮರ್ಷಿಯಲ್‌ ಚಿತ್ರ. ಕಮಲ್‌ ಪ್ರೇಯಸಿ ಎಂಬ ಖ್ಯಾತಿವೆತ್ತಿರುವ ಸಿಮ್ರಾನ್‌ ಚಿತ್ರದ ನಾಯಕಿ. ಕೆ.ಎಸ್‌.ರವಿಕುಮಾರ್‌ ಚಿತ್ರದ ನಿರ್ದೇಶಕ. ಎ.ಆರ್‌.ರೆಹಮಾನ್‌ ಸಂಗೀತ ಬಾಬಾ ಚಿತ್ರದಲ್ಲಿ ವರ್ಕ್‌ಔಟ್‌ ಆಗದಿರುವುದರಿಂದ ದೇವ ಕೈಲಿ ಸಂಗೀತ ಕೊಡಿಸುವ ಯೋಚನೆಯಿದೆ. ರಜನಿ ಹೊಸ ಚಿತ್ರ ಮುಂದಿನ ತಿಂಗಳು ಸೆಟ್ಟೇರುವ ನಿರೀಕ್ಷೆಯಿದೆ. ರಜನಿ ಸಿನಿಮಾಗಳು ಇನ್ನೂ ಬರಬೇಕೆ?

English summary
Super Star Rajanikanth turns 53 on Dec. 12th, 2002

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada