ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು

ಇತ್ತ ಪತ್ನಿ ವಿಜಯಲಕ್ಷ್ಮಿ ಆಸ್ಪತ್ರೆಯಿಂದ ಹೊರಬಿದ್ದರೂ ಕೋರ್ಟ್ ಕೇಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಇವರಿಬ್ಬರ ಕೂಸು ಮೂರು ವರ್ಷದ ಹಸುಳೆ ವಿನೀಶ್ ಅಪ್ಪ ಅಮ್ಮನ ಆರೈಕೆ ಇಲ್ಲದೆ ಸೋರಗಿದ್ದಾನೆ.
ಅಪ್ಪ ಅಮ್ಮನ ಜಗಳದ ನೇರ ಪರಿಣಾಮ ಮಗು ಮೇಲೆ ಆಗಿದ್ದು ಡಿ ವಿನೀಶ್ ಈಗ ಜ್ವರದಿಂದ ಬಳಲುತ್ತಿದ್ದಾನೆ. ಗಿರಿನಗರದಲ್ಲಿರುವ ತನ್ನ ಅಜ್ಜ ಅಜ್ಜಿ ಮನೆಯಲ್ಲಿ ವಿನೀಶ್ ಗೆ ಆರೈಕೆ ನಡೆಯುತ್ತಿದೆ. ತಾಯಿ ವಿಜಯಲಕ್ಷ್ಮಿಗೆ ಮಗು ನೋಡಲು ಪುರುಸೊತ್ತು ಸಿಗುತ್ತಿಲ್ಲ. ಪತಿದೇವರನ್ನು ನ್ಯಾಯಾಂಗ ಬಂಧನದಿಂದ ಹೇಗಾದರೂ ಬಿಡಿಸಿಕೊಳ್ಳುವ ಯತ್ನದಲ್ಲಿದ್ದಾರೆ.
ತಾಯಿ ವಿಜಯಲಕ್ಷ್ಮಿ ತಲೆಗೆ, ಕಿವಿಗೆ, ಕೈಗೆ ಬ್ಯಾಂಡೇಜ್ ಕಟ್ಟಿಸಿಕೊಂಡು ಬಿಜಿಎಸ್ ಆಸ್ಪತ್ರೆಯಲ್ಲಿ ಪ್ರಜ್ಞೆ ಇಲ್ಲದೆ ಮಲಗಿ ನರಳುತ್ತಿದ್ದದ್ದನ್ನು ತನ್ನ ಪುಟ್ಟ ಕಂಗಳಿಂದ ವಿನೀಶ್ ನೋಡಿ ಬೆಚ್ಚಿದ್ದಾನೆ.
ಆಗ ಕಾಣಿಸಿಕೊಂಡಿತು ಜ್ವರ: ಮಗು ಮೈ ಬಿಸಿಯಾಗುತ್ತಿದ್ದಂತೆ ಅಜ್ಜಿ ಸುಮತಿ ವಿನೀಶನನ್ನು ಮನೆಗೆ ಕರೆದೊಯ್ದಿದ್ದಾರೆ. ಆದರೆ, ವಿಜಯಲಕ್ಷ್ಮಿ ಸಂಬಂಧಿಕರು, ಹಿತೈಷಿಗಳು ಪದೇ ಪದೇ ಮನೆಗೆ ಬಂದು ಕುಶಲೋಪರಿ ವಿಚಾರಿಸತೊಡಗಿದ್ದರಿಂದ ವಿನೀಶನ ಆರೈಕೆಯಲ್ಲಿ ಲೋಪವಾಗಿದೆ.
ತಾಯಿ ಇಲ್ಲದೆ ಮಗು ಹೊಟ್ಟೆಗೆ ಏನು ತಿನ್ನದೆ ರಚ್ಚೆ ಹಿಡಿದು ಅವಿರತವಾಗಿ ಕಣ್ಣೀರು ಸುರಿಸಿ ಬಳಲಿತ್ತು. ನಿಃಶ್ಯಕ್ತಿಯ ಪರಿಣಾಮ ಜ್ವರ ಕಾಣಿಸಿಕೊಂಡಿದೆ. ಈಗ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆದಷ್ಟು ಬೇಗ ತಾಯಿ ಮಗು ಒಂದಾದರೆ ಎಲ್ಲಾ ಸರಿ ಹೋಗುತ್ತೆ ಎಂದು ಕುಟುಂಬದವರು ತಮ್ಮ ದುಃಖ ತೋಡಿಕೊಳ್ಳುತ್ತಾರೆ.
ದರ್ಶನ್ ಹಾಗೂ ವಿಜಯಲಕ್ಷ್ಮಿ ಕಲಹಕ್ಕೆ ಪುಟ್ಟ ಕಂದ ವಿನೀಶ್ ಕೂಡಾ ಕಾರಣ ಎನ್ನಲಾಗಿದೆ. ಮಗು ಮುಖ ನೋಡಿಯಾದರೂ ದರ್ಶನ್ ಗೆ ಬೇಲ್ ನೀಡಲಿ ಎಂದು ಹಿತೈಷಿಗಳು ಹಾರೈಸಿದ್ದಾರೆ.


Click it and Unblock the Notifications











